ಪ್ರಜ್ವಲ್‌ ಕೇಸ್‌ಲ್ಲಿ ಡಿಕೆಶಿ ಪಾತ್ರ ಸುಳ್ಳು ಆಪಾದನೆ: ಶಾಸಕ ಎಸ್.ಆರ್. ಶ್ರೀನಿವಾಸ್

KannadaprabhaNewsNetwork |  
Published : May 09, 2024, 12:45 AM ISTUpdated : May 09, 2024, 08:40 AM IST
DK Shivakumar

ಸಾರಾಂಶ

ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಪಾತ್ರ ಇದೆ ಎಂಬುದು ಸುಳ್ಳು ಆಪಾದನೆ ಎಂದು ಗುಬ್ಬಿ ಕಾಂಗ್ರೆಸ್ ಶಾಸಕ ಎಸ್.ಆರ್. ಶ್ರೀನಿವಾಸ್ ಹೇಳಿದರು.

 ತುಮಕೂರು :  ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಪಾತ್ರ ಇದೆ ಎಂಬುದು ಸುಳ್ಳು ಆಪಾದನೆ ಎಂದು ಗುಬ್ಬಿ ಕಾಂಗ್ರೆಸ್ ಶಾಸಕ ಎಸ್.ಆರ್. ಶ್ರೀನಿವಾಸ್ ಹೇಳಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜೆಡಿಎಸ್‌ ಮೇಲೆ ಬಂದಿರುವ ಆಪಾದನೆಯಿಂದ ಪಾರಾಗಲು ಈ ರೀತಿ ಡ್ರಾಮಾ ಸೃಷ್ಟಿ ಮಾಡಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಯಾವ ಆ್ಯಂಗಲ್‌ನಲ್ಲಿ ವಿಡಿಯೋ ಹಂಚಿಕೆ ಮಾಡಿದ್ದಾರೆ ಅಂತಾ ಇವರು ಆರೋಪ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.ದೇವರಾಜೇಗೌಡರು ಆರು ತಿಂಗಳ ಹಿಂದೆಯೇ ಕುಮಾರಸ್ವಾಮಿ, ದೇವೇಗೌಡ ಹಾಗೂ ಅಮಿತ್ ಶಾ ಸೇರಿ ಎಲ್ಲರಿಗೂ ಪೆನ್ ಡ್ರೈವ್ ಕಳಿಸಿರುವುದಾಗಿ ಹೇಳಿದ್ದಾರೆ. ಅದೇ ಮನುಷ್ಯ ಈಗ ಡಿಕೆ ಶಿವಕುಮಾರ್ ಹೆಸರು ಹೇಳುತ್ತಿದ್ದಾರೆ. ಕೇಸ್‌ನ ಡೈವರ್ಟ್ ಮಾಡುವುದಕ್ಕೆ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಬಯಲು ನಾಟಕ ಸೃಷ್ಟಿ ಮಾಡಿದ್ದಾರೆ ಎಂದರು.

ಒಮ್ಮೆ ಅವರ ಕುಟುಂಬಕ್ಕೆ ನಮಗೂ ಸಂಬಂದ ಇಲ್ಲ ಅಂತಾ ಹೇಳ್ತಾರೆ, ಬೇರೆ ಟೈಮ್‌ನಲ್ಲಿ ಹಾಸನ ಅಂದರೆ ರೇವಣ್ಣ, ರೇವಣ್ಣ ಅಂದರೆ ಹಾಸನ ಅಂತಾ ಹೇಳಿಕೊಂಡು ತಿರುಗಾಡುತ್ತಾರೆ. ಅಪಾದನೆ ಬಂದ ತಕ್ಷಣಕ್ಕೆ ರೇವಣ್ಣ ಈ ಕುಟುಂಬದಿಂದ ಆಚೆ ಹೋಗಿಬಿಟ್ಟರಾ ಎಂದು ಹೇಳಿದರು.ವಿಡಿಯೋ ರಿಲೀಸ್ ಮಾಡಿದವರನ್ನು ಬಂಧಿಸಲು ನಿನ್ನೆ ಪ್ರತಿಭಟನೆ ಮಾಡಿದ್ದಾರೆ. ಡಿಕೆಶಿ ವಿರುದ್ಧ ಬಾಯಿಗೆ ಬಂದಾಗೆ ಮಾತನಾಡಿದ್ದಾರೆ. ಇವರ ಮೇಲೆ ಬಂದ ಅಪಾದನೆ ತಪ್ಪಿಸಿಕೊಳ್ಳಲು ಪಕ್ಷಕ್ಕೆ ಆಗುವ ಡ್ಯಾಮೇಜ್ ಕಂಟ್ರೋಲ್ ಮಾಡಲು ಡಿಕೆಶಿ ಅವರನ್ನು ಎಳೆದು ತಂದಿದ್ದಾರೆ ಎಂದರು.ನಮ್ಮ ಅಸ್ತಿತ್ವ ಎಲ್ಲಿ ಹೊರಟು ಹೋಗಿಬಿಡುತ್ತೋ, ನಮ್ಮ ಜನಾಂಗ ಎಲ್ಲಿ ಕೈ ಬಿಟ್ಟುಬಿಡುತ್ತೋ ಅಂತಾ ಭಾವನೆ ಇಟ್ಟುಕೊಂಡು ಅದೇ ಜಾನಾಂಗದ ಇನ್ನೊಬ್ಬ ಮುಖಂಡರನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಜನಾಂಗದಲ್ಲಿ ಯಾರು ಪ್ರಬಲರಾಗಿ ಬೆಳೆಯುತ್ತಾರೋ ಅವರ ಮೇಲೆ ಅಪಾದನೆ ಮಾಡೋದು, ತುಳಿಯುವ ಕೆಲಸ ಮಾಡುತ್ತಾ ಬಂದಿದ್ದಾರೆ. ಇದು ದೇವರ ಕೊಟ್ಟ ಶಿಕ್ಷೆ ಎಂದು ಹೇಳಿದರು.

ನಮ್ಮ ಸಮಾಜದಲ್ಲಿ ಯಾರು ತಲೆ ಎತ್ತಬಾರದೆಂದು ಎಲ್ಲ ಮುಖಂಡರನ್ನು ತುಳಿಯುತ್ತಾ ಬಂದಿದ್ದಾರೆ. ಇವರ ಪಾಪದ ಕೊಡ ತುಂಬಿದೆ. ಪ್ರಜ್ವಲ್ ಪ್ರಕರಣ ಮುಖಾಂತರ ಇವರ ಅಂತ್ಯಕ್ಕೆ ನಾಂದಿಯಾಡಿದೆ. ನೀಚ ಕೆಲಸ ಮಾಡಿ ಅದನ್ನು ಬೇರೆ ರೆಕಾರ್ಡ್ ಮಾಡಿಕೊಂಡಿದ್ದಾನೆ ಪುಣ್ಯಾತ್ಮ ಎಂತಾ ಸ್ಯಾಡಿಷ್ಟ್ ಇರಬಹುದು ಆ ಮನುಷ್ಯ. ಅವನ ಬಗ್ಗೆ ಇನ್ನೂ ಸಾಪ್ಟ್ ಕಾರ್ನರ್ ತೋರಿಸುತ್ತಾರೆ ಎಂದರೆ ಇವರಿಗೆ ಇನ್ನೂ ಎಷ್ಟು ನೀಚ ಬುದ್ದಿ, ವ್ಯಕ್ತಿತ್ವ ಇದೆ ಎಂಬುದನ್ನು ಜನರು ನಿರ್ಧಾರ ಮಾಡಬೇಕಾಗುತ್ತದೆ ಎಂದರು.

ಪ್ರಜ್ವಲ್ ರೇವಣ್ಣ ಪ್ರಕರಣ ಸಿಬಿಐಗೆ ಒಪ್ಪಿಸುವ ವಿಚಾರ: ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಈ ದೇಶದ ತನಿಖಾ ಸಂಸ್ಥೆಗಳು ಯಾವ ರೀತಿ ಕೆಲಸ ಮಾಡುತ್ತಿವೆ ಅಂತಾ ಎಲ್ಲರಿಗೂ ಗೊತ್ತಿರುವ ವಿಚಾರ. ಇ.ಡಿ, ಐಟಿ ಸಿಬಿಐ, ಇವೆಲ್ಲವೂ ಮೂನ್ನೂರು ಕಡೆ ರೇಡ್ ಮಾಡಿದ್ದಾವೆ. ಯಾರು ವಿಪಕ್ಷ ಕಡೆ ಇದಾರೋ ಅವರ ಮೇಲೆ ರೇಡ್ ಮಾಡಿ ಅವರನ್ನು ಬಂಧಿಸುವ ಕೆಲಸ ಮಾಡಿದ್ದಾರೆ. ಸಿಬಿಐ ಕೊಡುವ ಉದ್ದೇಶ ಅಂದರೆ ನಮ್ಮ ಪಕ್ಷದ ಮುಖಂಡರನ್ನು ಹೊಣೆಗಾರರನ್ನಾಗಿ ಮಾಡೋ ಉದ್ದೇಶ ಇಟ್ಟುಕೊಂಡು ಒತ್ತಾಯ ಮಾಡುತ್ತಿದ್ದಾರೆ ಎಂದು ಹೇಳಿದರು.

ಕೋರ್ಟ್‌ನಿಂದ ಯಾಕೆ ಸ್ಟೇ ತಂದರು: ದೇವರಾಜೇಗೌಡ ಬಿಜೆಪಿಯವನು, ಬಿಜೆಪಿ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದಾರೆ. ಎಲ್ಲ ಗೊತ್ತಿದ್ದರು ಅವರಿಗೆ ಯಾಕೆ ಟಿಕೆಟ್ ಕೊಟ್ಟರು, ಟಿಕೆಟ್ ಕೊಟ್ಟಿದ್ದು ತಪ್ಪಲ್ವಾ. ಮಿಡೀಯಾದಲ್ಲಿ ಪ್ರಸಾರ ಮಾಡಬಾರದು ಎಂದು ಕೋರ್ಟ್‌ಗೆ ಹೋಗಿ ಯಾಕೆ ಸ್ಟೇ ತಂದರು ಎಂದರು.

ಕುಮಾರಸ್ವಾಮಿಗೆ ಎಲ್ಲ ವಿಚಾರ ಗೊತ್ತಿದೆ. ಎಲ್ಲರ ಬಗ್ಗೆ ಮಾತನಾಡುವ ಕುಮಾರಸ್ವಾಮಿಗೆ ನಮ್ಮ ಕುಟುಂಬದಲ್ಲಿ ಏನಾಗಿದೆ ಅಂತಾ ತಿಳಿಯದೆ ಇರುವಷ್ಟು ಮೂರ್ಖರಲ್ಲ. ಎಲ್ಲ ಗೊತ್ತಿದ್ದು ಇದರಿಂದ ಹೊರಗೆ ಬರಬೇಕೆಂದು ಒಂದು ಆಟ ಶುರುಮಾಡಿದ್ದಾರೆ. ಪೂರ್ತಿ ಆಡಿಯೋ ಬಿಡುಗಡೆ ಮಾಡಿ ಅಂತಾ ಡಿಕೆಶಿ ಹೇಳಿದ್ದಾರೆ. ಆಡಿಯೋನ ಎಸ್ಐಟಿಗೆ ಕೊಡಬೇಡ ಅಂದಿದ್ಯಾರು?. ಯಾಕೆ ಇನ್ನೂ ಎಸ್‌ಐಟಿಗೆ ಕೊಟ್ಟಿಲ್ಲ. ಈ ಆಡಿಯೋ ಎಲ್ಲ ನೋಡಿದರೆ ವಿಡಿಯೋ ರಿಲೀಸ್ ಮಾಡಿರುವ ಮೂಲ ವ್ಯಕ್ತಿ ದೇವರಾಜೆಗೌಡನೇ ಎಂದರು.

ಮತ್ತೊಂದು ಬಾರಿ ದೇವರಾಜೇಗೌಡ ರೇವಣ್ಣನಿಂದ ನಮ್ಮ ಕುಟುಂಬ ಹಾಳಾಗಿ ಹೋಯ್ತು ಅಂತಾ ಹೇಳಿದ್ದಾರೆ. ಅವತ್ತಿನಿಂದ ನಾನು ನಿರಂತರವಾಗಿ ರೇವಣ್ಣ ಕುಟುಂಬದ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದ್ದೆನೆ ಅಂತಾ ಹೇಳಿದ್ದಾರೆ. ಇದೆಲ್ಲಾ ಮಾಡಿರೊರು ಪೆನ್ ಡ್ರೇವ್ ರಿಲೀಸ್ ಮಾಡಿಲ್ಲ ಅಂತಾ ಹೇಳಲಿಕೆ ಆಗುತ್ತಾ. ಡಿಕೆ ಶಿವಕುಮಾರ್ ರಿಲೀಸ್ ಮಾಡಿದ್ರು ಅಂತಾ ಹೇಗೆ ಹೇಳೋಕೆ ಆಗುತ್ತೆ ಎಂದು ಹೇಳಿದರು.

ರೇವಣ್ಣ ಕುಟುಂಬ‌ ಮುಗಿಸುವ ಕೆಲಸ: ಈ ಕೇಸ್‌ ಬೇರೆಯವರ ತಲೆ ಮೇಲೆ ಹಾಕಲಿಕ್ಕೆ ಶಿವರಾಮೇಗೌಡರ ಮುಖಾಂತರ ಶ್ರೇಯಸ್ ಪಟೇಲ್ ಮೇಲೆ ಅಲ್ಲಿಂದ ಡಿಕೆಶಿ ಮೇಲೆ ಹೇಳೋದನ್ನು ಮಾಡ್ತಾ ಇದ್ದಾರೆ. ಈ ಪ್ರಕರಣದ ಹಿಂದೆ ಇರೋದೆ ಎಚ್‌.ಡಿ. ಕುಮಾರಸ್ವಾಮಿ. ರೇವಣ್ಣರ ಕುಟುಂಬ ಮುಗಿಸಬೇಕೆಂದು ನಿರಂತರವಾಗಿ ಕುಮಾರಸ್ವಾಮಿ ಪ್ರಯತ್ನ ಮಾಡುತ್ತಿದ್ದಾರೆ. ಕುಮಾರಸ್ವಾಮಿಗೆ ಒಂದು ವಿಚಾರ ಸಿಕ್ತು, ಸಿಕ್ಕಿದ ಕೂಡಲೇ ದೇವರಾಜೇಗೌಡ, ಕುಮಾರಸ್ವಾಮಿ ಇಬ್ಬರು ಸೇರಿಕೊಂಡು ರೇವಣ್ಣ ಕುಟುಂಬ‌ ಮುಗಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ಕುಮಾರಸ್ವಾಮಿ ಕುಟುಂಬಕ್ಕೂ ರೇವಣ್ಣ ಕುಟುಂಬಕ್ಕೂ ದ್ವೇಷ: ನಾವೆಲ್ಲಾ ಕುಮಾರಸ್ವಾಮಿ ಜೊತೆಯಲ್ಲಿ ಇದ್ದವರು ಅವರ ಕುಟುಂಬಕ್ಕೆ ರೇವಣ್ಣ ಕುಟುಂಬಕ್ಕೆ ಎಷ್ಟು ದ್ವೇಷ ಇದೆ ಅಂದರೆ ಬದ್ದ ವೈರಿಗಳ ರೀತಿಯಲ್ಲಿ ದ್ವೇಷ ಮಾಡುತ್ತಾರೆ. ಅದೆಲ್ಲಾ ನಾವು ನೋಡಿದ್ದೇವೆ. ಈ ದೇಶದ ಭವಿಷ್ಯ ಹಾಸನದ ಹೆಣ್ಣು ಮಕ್ಕಳ ಮಾನ ಮರ್ಯಾದೆ ಉಳಿಸಬೇಕೆಂಬ ಕಾಳಜಿ ಇದ್ದಿದ್ದರೆ ಇವನನ್ನ ಅಭ್ಯರ್ಥಿನೇ ಮಾಡುತ್ತಿರಲಿಲ್ಲ. ಯಾರ ಮಾನ ಮರ್ಯಾದೆ ಹರಾಜು ಆದ್ರೂ ಚಿಂತೆ ಇಲ್ಲ. ಯಾವುದಾದರೂ ವ್ಯಕ್ತಿ ಮೇಲೆ ದೃಷ್ಟಿ ಇಟ್ಟರೆ ಆ ವ್ಯಕ್ತಿಯ ವ್ಯಕ್ತಿತ್ವ ಹಾಳು ಮಾಡಬೇಕು ಮುಗಿಸಬೇಕೆನ್ನುವ ಉದ್ದೇಶ ಇರುತ್ತದೆ. ರೇವಣ್ಣ ಮುಗಿಸುವ ಕೆಲಸ ಇವರೇ ಮಾಡಿದ್ದಾರೆ ಬೇರೆ ಯಾರು ಮಾಡಿಲ್ಲ ಎಂದರು.

ಕುಮಾರಸ್ವಾಮಿ ಇದರಲ್ಲಿ ಮುಖ್ಯ ಪಾತ್ರದಾರಿ. ಡಿಕೆಶಿ ತಲೆ ಮೇಲೆ ಹಾಕಲು ಪ್ರಯತ್ನ ಮಾಡುತ್ತಿದ್ದಾರೆ. ನಮಗೆ ಕುಮಾರಸ್ವಾಮಿಯಷ್ಟು ನೀಚ ಬುದ್ದಿಯಿಲ್ಲ. ಇನ್ನೊಬ್ಬರನ್ನು ಮುಗಿಸುವ ಕೆಲಸ ಹಾಳು‌ ಮಾಡೋದು, ಅವರು ನನ್ನ ಬಗ್ಗೆ ಮಾತಾಡಿದರೆ ನಾನು ಅವರ ಬಗ್ಗೆ 10 ರಷ್ಟು ಮಾತಾಡುತ್ತಿನಿ, ಅವರ ಬಗ್ಗೆ ಎಲ್ಲಾ ಗೊತ್ತಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಲ್ಲಿ ಬಸವಣ್ಣ ಜೀವ ವೈವಿಧ್ಯ ಉದ್ಯಾನವನ
ಕೆಎಂಎಫ್‌ನಲ್ಲಿ ಉದ್ಯೋಗದ ನೆಪದಲ್ಲಿ50 ಲಕ್ಷ ವಂಚನೆ:ಇಬ್ಬರ ವಿರುದ್ಧ ಕೇಸ್‌