ನನೆಗುದಿಗೆ ಬಿದ್ದಿರುವ ಕಳಸಾ-ಬಂಡೂರಿ ನಾಲೆಗೆ ಒಪ್ಪಿಗೆಗಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಸರತ್ತು

KannadaprabhaNewsNetwork |  
Published : Nov 28, 2024, 12:35 AM ISTUpdated : Nov 28, 2024, 07:22 AM IST
ಡಿ.ಕೆ.ಶಿವಕುಮಾರ್‌ | Kannada Prabha

ಸಾರಾಂಶ

ನನೆಗುದಿಗೆ ಬಿದ್ದಿರುವ ಕಳಸಾ ಬಂಡೂರಿ ನಾಲೆ ಯೋಜನೆ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು, ಯೋಜನೆಗೆ ಅಗತ್ಯವಿರುವ ಅರಣ್ಯ ಹಾಗೂ ವನ್ಯಜೀವಿ ಮಂಡಳಿ ಅನುಮತಿ ಕೊಡಿಸಬೇಕು ಎಂದು ಕೇಂದ್ರ ಅರಣ್ಯ ಸಚಿವ ಭೂಪೇಂದರ್ ಯಾದವ್ ಅವರಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.

 ನವದೆಹಲಿ : ನನೆಗುದಿಗೆ ಬಿದ್ದಿರುವ ಕಳಸಾ ಬಂಡೂರಿ ನಾಲೆ ಯೋಜನೆ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು, ಯೋಜನೆಗೆ ಅಗತ್ಯವಿರುವ ಅರಣ್ಯ ಹಾಗೂ ವನ್ಯಜೀವಿ ಮಂಡಳಿ ಅನುಮತಿ ಕೊಡಿಸಬೇಕು ಎಂದು ಕೇಂದ್ರ ಅರಣ್ಯ ಸಚಿವ ಭೂಪೇಂದರ್ ಯಾದವ್ ಅವರಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.

ದೆಹಲಿಯಲ್ಲಿ ಬುಧವಾರ ಕೇಂದ್ರ ಸಚಿವರನ್ನು ಭೇಟಿ ಮಾಡಿದ ಜಲಸಂಪನ್ಮೂಲ ಸಚಿವರೂ ಆಗಿರುವ ಡಿ.ಕೆ.ಶಿವಕುಮಾರ್ ಅವರು ರಾಜ್ಯದ ಹಿತಾಸಕ್ತಿ ಉದ್ದೇಶದಿಂದ ಆದಷ್ಟು ಶೀಘ್ರ ಈ ಯೋಜನೆ ಜಾರಿಗೆ ನೆರವು ನೀಡಬೇಕು ಎಂದು ಆಗ್ರಹಿಸಿದರು. ಈ ವೇಳೆ ಮನವಿ ಪತ್ರವನ್ನೂ ಸಲ್ಲಿಸಿರುವ ಅವರು ಯೋಜನೆ ಸಂಬಂಧಿಸಿದ ಗೊಂದಲ ನಿವಾರಿಸುವ ಪ್ರಯತ್ನವನ್ನೂ ನಡೆಸಿದರು.

ಡಿಕೆಶಿ ಮನವಿ ಪತ್ರದಲ್ಲೇನಿದೆ?:

ಅ.9ರಂದು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿ ತನ್ನ 80ನೇ ಸಭೆಯಲ್ಲಿ ಕರ್ನಾಟಕದ ಅರ್ಜಿ ವಿಚಾರಣೆಯನ್ನು ಮುಂದೂಡಿ ಈ ವಿಚಾರವಾಗಿ ಇರುವ ಕಾನೂನು ಸಮಸ್ಯೆಗಳ ಬಗ್ಗೆ ಸ್ಪಷ್ಟನೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ಅದರಂತೆ ರಾಜ್ಯ ಸರ್ಕಾರ ಅ.10 ಮತ್ತು ಅ.16 ರಂದು ಪತ್ರದ ಮೂಲಕ ಅಗತ್ಯ ಸ್ಪಷ್ಟನೆ ಸಲ್ಲಿಸಿದೆ. ಕಳಸಾ ನಾಲೆ ಯೋಜನೆಗೆ ಕಾಳಿ ಹಾಗೂ ಸಹ್ಯಾದ್ರಿ ಹುಲಿ ಸಂರಕ್ಷಣಾ ಪ್ರದೇಶದಲ್ಲಿ 10.6852 ಹೆಕ್ಟೇರ್ ಅರಣ್ಯ ಭೂಮಿ ಅಗತ್ಯವಿದೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿ ಸುತ್ತಲ ಹಳ್ಳಿ ವ್ಯಾಪ್ತಿಯ ಪ್ರದೇಶವನ್ನು ಇದು ಹೊಂದಿದೆ. ಇದರಲ್ಲಿ ಜಾಕ್ ವೆಲ್ ಸಹಿತ ಪಂಪ್ ಹೌಸ್, ವಿದ್ಯುತ್ ಉಪಕೇಂದ್ರಗಳನ್ನು ನಿರ್ಮಿಸಲಾಗುವುದು ಎಂದು ಸ್ಪಷ್ಟಪಡಿಸಿದೆ.

ಗೋವಾದ ವನ್ಯಜೀವಿ ಮಂಡಳಿ ಮುಖ್ಯಸ್ಥರು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಸೆಕ್ಷನ್ 29 ಅನ್ನು ಪ್ರಸ್ತಾಪಿಸಿ ಈ ಯೋಜನೆ ಕಾಮಗಾರಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಯಾಗಿ ಕರ್ನಾಟಕವು ಸುಪ್ರೀಂಕೋರ್ಟ್ ಮುಂದೆ ಸೂಕ್ತ ದಾಖಲೆಯನ್ನೂ ಮಂಡಿಸಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA) ತಜ್ಞರ ಸಮಿತಿ ರಚಿಸಿತ್ತು. ಈ ತಂಡ ಯೋಜನೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ತನ್ನ ವರದಿ ಸಲ್ಲಿಸಿದೆ. ವರದಿಯಲ್ಲಿ ಪ್ರಾಧಿಕಾರವು ಮಹದಾಯಿ ನೀರು ವಿವಾದ ನ್ಯಾಯಾಧಿಕರಣ ತೀರ್ಪಿನ ಬಗ್ಗೆ ಗೋವಾ, ಮಹಾರಾಷ್ಟ್ರ ಹಾಗೂ ಕರ್ನಾಟಕ ನಡುವಣ ಕಾನೂನು ಸಮರ ಸುಪ್ರೀಂ ಕೋರ್ಟ್ ನಲ್ಲಿದೆ ಎಂದು ತಿಳಿಸಿತ್ತು. ಈ ಎಲ್ಲಾ ವಿಚಾರವಾಗಿ ಕರ್ನಾಟಕದ ಅರಣ್ಯ ಮತ್ತು ಪರಿಸರ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಸ್ಪಷ್ಟನೆ ನೀಡಿದ್ದು, ಸುಪ್ರೀಂಕೋರ್ಟ್ ಈ ಯೋಜನೆ ಜಾರಿ ವಿಚಾರದಲ್ಲಿ ಕರ್ನಾಟಕ ರಾಜ್ಯಕ್ಕೆ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ. ಇದರ ಜತೆಗೆ ಕಾನೂನು ಪ್ರಕಾರ ಕೇಂದ್ರ ಸರ್ಕಾರದ ಎಲ್ಲಾ ಅನುಮತಿಗಳು ಸಿಕ್ಕ ನಂತರವಷ್ಟೇ ಈ ಯೋಜನೆ ಕಾಮಗಾರಿ ಕೈಗೊಳ್ಳಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

ಯೋಜನೆ ಅಭಯಾರಣ್ಯದ ಭಾಗವಲ್ಲದಿದ್ದರೂ ಹುಲಿ ಕಾರಿಡಾರ್ ಪ್ರದೇಶ ವ್ಯಾಪ್ತಿಯಲ್ಲಿ ಬರುತ್ತದೆ. ಯೋಜನೆಯಲ್ಲಿ ನಿರ್ಮಿಸಲಾಗುವ ಜಲ ಮೂಲಗಳು ವನ್ಯಜೀವಿಗೆ ಅಗತ್ಯ ನೀರು ಪೂರೈಸಲಿದೆ. ಹೀಗಾಗಿ ಯೋಜನೆಗೆ ಅನುಮತಿ ನೀಡಬೇಕು ಎಂದು ಕರ್ನಾಟಕದ ವನ್ಯಜೀವಿ ಸಂರಕ್ಷಣಾ ಮಂಡಳಿ ಸ್ಥಾಯಿ ಸಮಿತಿಗೆ ಮಾಹಿತಿಯನ್ನೂ ನೀಡಿದೆ.

ಈ ಎಲ್ಲಾ ವಿಚಾರಗಳ ಬಗ್ಗೆ ಚರ್ಚಿಸಿದ ಬಳಿಕ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿ ಕಾನೂನು ವಿಚಾರಗಳ ಬಗ್ಗೆ ಸ್ಪಷ್ಟನೆ ಕೋರಿತ್ತು. ಜತೆಗೆ ಪ್ರಾಧಿಕಾರದ ಅಭಿಪ್ರಾಯ ಸಲ್ಲಿಕೆಗೆ ಸೂಚಿಸಿತ್ತು. ಸ್ಥಾಯಿ ಸಮಿತಿಯ ಈ ಎಲ್ಲಾ ಮಾರ್ಗದರ್ಶನವನ್ನು ಕರ್ನಾಟಕ ರಾಜ್ಯ ಪಾಲಿಸಿದೆ. ಆದರೂ ಈ ಯೋಜನೆಗೆ ಅನುಮತಿ ವಿಳಂಬವಾಗುತ್ತಿದೆ. ಹೀಗಾಗಿ ಅರಣ್ಯ ಸಚಿವರು ಮಧ್ಯಪ್ರವೇಶ ಮಾಡಿ ಕರ್ನಾಟಕದ ಲಿಖಿತ ಮನವಿ ಬಗ್ಗೆ ಪ್ರಾಧಿಕಾರದ ಅಭಿಪ್ರಾಯ ಪರಿಶೀಲಿಸಿ ಆದಷ್ಟು ಬೇಗ ಯೋಜನೆಗೆ ಅನುಮತಿ ನೀಡಬೇಕು. ಕಳಸಾ ಯೋಜನೆಗೆ ಅಗತ್ಯವಿರುವ ಅನುಮತಿ ನೀಡಲು ರೀಜನಲ್ ಎಂಪವರ್ ಕಮಿಟಿ, ಇಂಟರ್ ಗ್ರೇಟೆಡ್ ರೀಜನಲ್ ಆಫೀಸ್, ಪರಿಸರ ಮತ್ತು ಅರಣ್ಯ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು” ಎಂದು ತಿಳಿಸಲಾಗಿದೆ.

“ಕರ್ನಾಟಕ ರಾಜ್ಯವು ಕಳಸಾ ನಾಲೆ ಯೋಜನೆಗೆ ಅಗತ್ಯವಿರುವ ಅರಣ್ಯ ಪ್ರದೇಶ ಭೂಮಿಯ ಪ್ರಮಾಣವನ್ನು 258 ಹೆಕ್ಟೇರ್ ಪ್ರದೇಶದಿಂದ ಕೇವಲ 26.9255 ಹೆಕ್ಟೇರ್ ಪ್ರದೇಶಕ್ಕೆ ಇಳಿಸಿದೆ. ಬಂಡೂರಿ ನಾಲೆ ಯೋಜನೆಗೆ ಅಗತ್ಯವಿರುವ ಅರಣ್ಯ ಪ್ರದೇಶ ಭೂಮಿಯನ್ನು 243 ಹೆಕ್ಟೇರ್ ನಿಂದ ಕೇವಲ 28.4427 ಹೆಕ್ಟೇರ್ ಪ್ರದೇಶಗಳಿಗೆ ಇಳಿಸಿದೆ. ಆಮೂಲಕ ಪರಿಸರ ಸಂರಕ್ಷಣೆಯಲ್ಲಿ ರಾಜ್ಯ ತನ್ನ ಬದ್ಧತೆ ಪ್ರದರ್ಶಿಸಿದೆ. ರಾಜ್ಯದ ಹಿತಾಸಕ್ತಿ ಕಾಪಾಡಲು ಕೇಂದ್ರ ಸರ್ಕಾರ ವಿಳಂಬ ಮಾಡದೆ ಈ ಯೋಜನೆಗೆ ಅನುಮತಿ ನೀಡಬೇಕು” ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೇಂದ್ರದಿಂದ ಯಲ್ಲಮ್ಮನಗುಡ್ಡಕ್ಕೆ ₹118 ಅನುದಾನ
ಮಡಿಕೇರಿಯ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ಶಿಕ್ಷಕರ ಸಹಪಠ್ಯ ಸ್ಪರ್ಧಾ ಕಾರ್ಯಕ್ರಮ