​ಸರ್ಕಾರಿ ಕೆಲಸ ದೇವರ ಸೇವೆಯಂತೆ ಮಾಡಿ: ಡಾ.ಪ್ರಭಾ

KannadaprabhaNewsNetwork |  
Published : Jun 30, 2026, 01:30 AM IST
 29 ಜೆ.ಜಿ.ಎಲ್.1)‌ ಜಗಳೂರು ಪಟ್ಟಣದ ವಾಲ್ಮೀಕಿ ಭವನದಲ್ಲಿ ಸೋಮವಾರ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹಾಗೂ ಶಾಸಕ ಬಿ. ದೇವೇಂದ್ರಪ್ಪ ನೇತೃತ್ವದಲ್ಲಿ ನಡೆದ ಜಿಲ್ಲಾ ಮಟ್ಟದ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಪ್ರಗತಿ ಪರಿಶೀಲನಾ ಸಭೆ ನಡೆಯಿತು. | Kannada Prabha

ಸಾರಾಂಶ

ಪ್ರಸ್ತುತ ವರ್ಷ ಮಳೆ ಪ್ರಮಾಣ ಕಡಿಮೆ ಇರಲಿದ್ದು, ಜಿಲ್ಲಾಮಟ್ಟದ ಅನುಷ್ಠಾನ ಅಧಿಕಾರಿಗಳು ಕುಡಿಯುವ ನೀರು, ಆರೋಗ್ಯ, ಆಹಾರ ಪದಾರ್ಥಗಳ ವಿತರಣೆ ಸೇರಿದಂತೆ ಪ್ರತಿಯೊಂದು ಸೌಲಭ್ಯ ಸಾರ್ವಜನಿಕರಿಗೆ ಸಮರ್ಥವಾಗಿ ತಲುಪಿಸಲು ಸಿದ್ಧರಾಗಬೇಕು. ಸರ್ಕಾರಿ ಕೆಲಸವನ್ನು ದೇವರ ಕೆಲಸದಂತೆ ಪ್ರಾಮಾಣಿಕವಾಗಿ ಮಾಡಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

- ಅರೆಬರೆ ಮಾಹಿತಿ: ಅಧಿಕಾರಿಗಳಿಗೆ ಸಂಸದೆ ತರಾಟೆ । ಜಗಳೂರು ವಾಲ್ಮೀಕಿ ಭವನದಲ್ಲಿ ದಿಶಾ ಸಭೆ

- - -

ಕನ್ನಡಪ್ರಭ ವಾರ್ತೆ ​ಜಗಳೂರು

ಪ್ರಸ್ತುತ ವರ್ಷ ಮಳೆ ಪ್ರಮಾಣ ಕಡಿಮೆ ಇರಲಿದ್ದು, ಜಿಲ್ಲಾಮಟ್ಟದ ಅನುಷ್ಠಾನ ಅಧಿಕಾರಿಗಳು ಕುಡಿಯುವ ನೀರು, ಆರೋಗ್ಯ, ಆಹಾರ ಪದಾರ್ಥಗಳ ವಿತರಣೆ ಸೇರಿದಂತೆ ಪ್ರತಿಯೊಂದು ಸೌಲಭ್ಯ ಸಾರ್ವಜನಿಕರಿಗೆ ಸಮರ್ಥವಾಗಿ ತಲುಪಿಸಲು ಸಿದ್ಧರಾಗಬೇಕು. ಸರ್ಕಾರಿ ಕೆಲಸವನ್ನು ದೇವರ ಕೆಲಸದಂತೆ ಪ್ರಾಮಾಣಿಕವಾಗಿ ಮಾಡಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಪಟ್ಟಣದ ವಾಲ್ಮೀಕಿ ಭವನದಲ್ಲಿ ಸೋಮವಾರ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹಾಗೂ ಶಾಸಕ ಬಿ.ದೇವೇಂದ್ರಪ್ಪ ನೇತೃತ್ವದಲ್ಲಿ ನಡೆದ ಜಿಲ್ಲಾಮಟ್ಟದ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಅರೆಬರೆ ಮಾಹಿತಿಯೊಂದಿಗೆ ಸಭೆಗೆ ಬಂದ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಸಂಸದರು, ಮುಂದಿನ ಸಭೆಗೆ ಕಡ್ಡಾಯವಾಗಿ ನಿಖರ ಅಂಕಿ-ಅಂಶಗಳೊಂದಿಗೆ ಬರಬೇಕು ಎಂದು ಚಾಟಿ ಬೀಸಿದರು. ಕೇಂದ್ರ ಸರ್ಕಾರದ 15ನೇ ಹಣಕಾಸು ಯೋಜನೆ, ಸ್ವಚ್ಛ ಭಾರತ್ ಮಿಷನ್, ಪಿಎಂಜಿಎಸ್‌ವೈ, ಪಿಎಂ ಆವಾಸ್ ಯೋಜನೆಗಳ ಪ್ರಗತಿ ಹಾಗೂ ಕೇಂದ್ರದಿಂದ ಬರಬೇಕಾದ ಬಾಕಿ ಹಣದ ಕುರಿತು ಪ್ರತಿ ತಿಂಗಳು ಸಂಸದರ ಕಚೇರಿಗೆ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.

ಜಲಜೀವನ್ ಮಿಷನ್ ಸೇರಿದಂತೆ ಇತರೆ ಕಾಮಗಾರಿಗಳು ಮುಗಿದ ನಂತರ ಪರಿಶೀಲಿಸುವ ಬದಲು, ಕಾಮಗಾರಿ ನಡೆಯುತ್ತಿರುವಾಗಲೇ ಮಧ್ಯಂತರದಲ್ಲಿ ಅದರ ಗುಣಮಟ್ಟವನ್ನು ಅಧಿಕಾರಿಗಳು ಖುದ್ದಾಗಿ ಪರಿಶೀಲಿಸಬೇಕು. ಸಾರ್ವಜನಿಕರ ಮಾಹಿತಿಗಾಗಿ ಕೃಷಿ ಯಂತ್ರೋಪಕರಣ, ಲ್ಯಾಪ್‌ಟಾಪ್ ಹಾಗೂ ಸಾಲ ಸೌಲಭ್ಯಗಳ ಮಾಹಿತಿ ಬೋರ್ಡ್‌ಗಳನ್ನು ಕಚೇರಿಗಳಲ್ಲಿ ಕಡ್ಡಾಯವಾಗಿ ಅಳವಡಿಸಬೇಕು ಎಂದರು.

ಸ್ಥಳೀಯ ಶಾಸಕ ದೇವೇಂದ್ರಪ್ಪ ಮಾತನಾಡಿ, ಡಾ.ನಂಜುಂಡಪ್ಪ ವರದಿ ಅನುಸಾರ ಅತ್ಯಂತ ಹಿಂದುಳಿದ ಜಗಳೂರು ತಾಲೂಕಿನ ನಿರ್ಜನ, ಅರಣ್ಯ ಪ್ರದೇಶಗಳಲ್ಲಿ ಹೊರ ಜಿಲ್ಲೆ, ರಾಜ್ಯಗಳಿಂದ ಜೂಜುಕೋರರು ಅಂದರ್ ಬಾಹರ್ ಜೂಜಾಡಲು ಬರುತ್ತಿದ್ದಾರೆ. ಈ ವಿಷಯ ಪೊಲೀಸ್ ಇಲಾಖೆಗೆ ತಿಳಿದಿಲ್ಲವೇ? ಮಾಧ್ಯಮಗಳಲ್ಲಿ ವರದಿ ಪ್ರಸಾರವಾದರೂ ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಹಿರಿಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಗಳೂರು ಸಾರ್ವಜನಿಕ ಆಸ್ಪತ್ರೆ ಕಟ್ಟಡಕ್ಕೆ ₹೫೦ ಕೋಟಿ ಮೀಸಲಾಗಿದೆ. ಆದರೆ 2 ವರ್ಷಗಳಾದರೂ ಇದುವರೆಗೂ ಜಾಗದ ತಾಂತ್ರಿಕ ಸಮಸ್ಯೆ ಬಗೆ ಹರಿದಿಲ್ಲ. ಹಣ ಮಂಜೂರಾಗಿಲ್ಲ ಎಂದು ಶಾಸಕ ಬಿ.ದೇವೇಂದ್ರಪ್ಪ ಗಮನ ಸೆಳೆದರು. ಆಗ ಡಿಎಚ್‌ಒ ಡಾ.ಷಣ್ಮುಖಪ್ಪ ಟೆಕ್ನಿಕಲ್ ಕಮಿಟಿ ಹಂತದಲ್ಲಿದೆ ಎಂದರು. ಆಗ ಸಂಸದರು ಆದಷ್ಟು ಬೇಗ ಸಮಸ್ಯೆ ಬಗೆಹರಿಸಿ ನೂತನ ಆಸ್ಪತ್ರೆ ನಿರ್ಮಾಣಕ್ಕೆ ಸಹಕರಿಸಿ ಎಂದರು.

ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಮಾತನಾಡಿ, ಮಳೆ ಕೊರತೆಯಿಂದ ಬರಗಾಲ ಎದುರಿಸುವ ಸಂದರ್ಭ ಎದುರಾಗಿದೆ. ರೈತರು ಹವಾಮಾನ ಆಧಾರಿತ ಬೆಳೆ ಬೆಳೆಯುವಂತೆ ಅಧಿಕಾರಿಗಳು ಪ್ರೋತ್ಸಾಹಿಸಬೇಕು. ಯಾವುದೇ ಕಾರಣಕ್ಕೂ ರೈತರು ಸದ್ಯಕ್ಕೆ ಅಡಕೆ ನಾಟಿ ಮಾಡುವುದು ಬೇಡ ಎಂದು ಸಲಹೆ ನೀಡಿದರು. ದಾವಣಗೆರೆ-ಬೆಂಗಳೂರು ರೈಲ್ವೆ ಲೈನ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರೊಂದಿಗೆ ಚರ್ಚಿಸಲಾಗಿದೆ ಎಂದು ಮಾಹಿತಿ ನೀಡಿದರು.

​ಲೋಕಾಯುಕ್ತ ಬಲೆಗೆ ಬಿದ್ದ ನಾಲ್ಕು ಪಿಡಿಒಗಳ ಅಮಾನತು: ಸಿಇಒ ಎಚ್ಚರಿಕೆ

​ಜಿಪಂ ಸಿಇಒ ಗಿತ್ತೆ ಮಾಧವ ವಿಠಲ ರಾವ್ ಮಾತನಾಡಿ, ಲೋಕಾಯುಕ್ತ ದಾಳಿ ಹಾಗೂ ಕೆಲಸದ ಆಯ್ಕೆಯಲ್ಲಿನ ಲೋಪದೋಷಗಳ ಹಿನ್ನೆಲೆ ಈಗಾಗಲೇ 4 ಜನ ಪಿಡಿಒಗಳನ್ನು ಅಮಾನತು ಮಾಡಲಾಗಿದೆ. ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನಿರ್ಲಕ್ಷಿಸಿದರೆ ಅಧಿಕಾರಿಗಳು ಕಠಿಣ ಶಿಕ್ಷೆಗೆ ಗುರಿ ಆಗಬೇಕಾಗುತ್ತದೆ ಎಂದು ಎಚ್ಚರಿಸಿದರು.

​ಸಭೆಯಲ್ಲಿ ಜಿಪಂ ಅಧಿಕಾರಿಗಳು, ಜಿಲ್ಲಾ ಅರಣ್ಯಾಧಿಕಾರಿ ಹರ್ಷವರ್ಧನ್, ತೋಟಗಾರಿಕಾ ಇಲಾಖೆ ಜೆಡಿ ರಾಘವೇಂದ್ರಪ್ರಸಾದ್, ಕೃಷಿ ಇಲಾಖೆ ಜೆಡಿ ಜಿಯಾಉಲ್ಲಾ ಸೇರಿದಂತೆ ದಿಶಾ ಸಮಿತಿ ಸದಸ್ಯರಾದ ರೇವಣಸಿದ್ದಪ್ಪ, ಮೂರ್ತೆಪ್ಪ, ಚಂದ್ರಶೇಖರ್, ಸುವರ್ಣ ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

- - -

(ಬಾಕ್ಸ್‌)

* ಸಭೆಯಲ್ಲಿ ಚರ್ಚಿತ ಅಂಶಗಳು

- ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳಿಂದ ಕೆಲವು ಸಿಬ್ಬಂದಿ ಹಣ ವಸೂಲಿ ಮಾಡುತ್ತಿರುವ ದಂಧೆ ಕುರಿತು ಆಕ್ರೋಶ.

- ಸರ್ಕಾರಿ ಶಾಲೆಗಳ ದುರಸ್ತಿ, ಎಸ್‌ಎಸ್‌ಎಲ್‌ಸಿಯಲ್ಲಿ ಶೇ.100 ಫಲಿತಾಂಶ ಸಾಧಿಸದಿದ್ದರೆ ಬಿಇಒ ಮತ್ತು ಡಿಡಿಪಿಐಗಳೇ ಹೊಣೆ.

- ಜಿಲ್ಲೆಯಲ್ಲಿ ಮಾದಕ ವಸ್ತುಗಳ ನಿಯಂತ್ರಣ ಹಾಗೂ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಎಸ್‌ಪಿ ಶೇಖರ್ ಎಚ್.ಟಿ. ಅವರಿಗೆ ಸೂಚನೆ.

- ಪ್ಲಾಸ್ಟಿಕ್ ಮುಕ್ತ ನಗರ ನಿರ್ಮಾಣ, ಅಂತರ್ಜಲ ಮರುಪೂರಣ ಹಾಗೂ ಜಲ ಸಂರಕ್ಷಣೆ ಕುರಿತು ಚರ್ಚೆ.

- - -

-29ಜೆ.ಜಿ.ಎಲ್.1:

ಜಗಳೂರು ಪಟ್ಟಣದ ವಾಲ್ಮೀಕಿ ಭವನದಲ್ಲಿ ಸೋಮವಾರ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹಾಗೂ ಶಾಸಕ ಬಿ.ದೇವೇಂದ್ರಪ್ಪ ನೇತೃತ್ವದಲ್ಲಿ ನಡೆದ ಜಿಲ್ಲಾಮಟ್ಟದ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಪ್ರಗತಿ ಪರಿಶೀಲನಾ ಸಭೆ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಹ್ಯ ಯಶಸ್ಸಿನ ಆತುರದಲ್ಲಿ ಅಂತರ್ಯದ ಯಶಸ್ಸು ಮರೆಯದಿರಿ
ದಲಿತರಿಂದ ಮಲಗುಂಡಿ ಸ್ವಚ್ಛಗೊಳಿಸಿದ ಕೃತ್ಯಕ್ಕೆ ಖಂಡನೆ