ಕನ್ನಡಪ್ರಭ ವಾರ್ತೆ ತುಮಕೂರುಹೊರಗಿನ ಯಶಸ್ಸನ್ನು ಹುಡುಕುವ ಆತುರದಲ್ಲಿ ನಾವಿಂದು ಅಂತರ್ಯದಲ್ಲಿರುವ ನಿಜವಾದ ಯಶಸ್ಸನ್ನು ಕಂಡುಕೊಳ್ಳುವುದರಲ್ಲಿ ವಿಫಲರಾಗುತ್ತಿದ್ದೇವೆ. ಹಾಗಾಗಿ, ಪ್ರತಿಯೊಬ್ಬರೂ ಮೊದಲು ತಮ್ಮ ಅಂತರಳವನ್ನು ಗೆಲ್ಲಲು ಕಲಿಯಬೇಕು ಎಂದು ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಸ್. ಅಹಲ್ಯಾ ಅವರು ಹೇಳಿದರು. ತುಮಕೂರು ವಿಶ್ವವಿದ್ಯಾನಿಲಯದ ವಾಣಿಜ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಹಾಗೂ ಡಾ. ಪಿ. ಸದಾನಂದ ಮಯ್ಯ ಸ್ಕೂಲ್ ಆಫ್ ಕಾಮರ್ಸ್ ಆ್ಯಂಡ್‌ ಮ್ಯಾನೇಜ್‌ಮೆಂಟ್ ವತಿಯಿಂದ ಸೋಮವಾರದಂದು ಎಂಕಾಂ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಆಂತರ್ಯ ವಿದಾಯ ಸಮಾರಂಭದಲ್ಲಿ ಮಾತನಾಡಿದರು.ಕೃತಕ ಬುದ್ಧಿಮತ್ತೆಯ ಇಂದಿನ ಯುಗದಲ್ಲಿ ಉದ್ಯೋಗಾವಕಾಶಗಳ ಕುರಿತು ಆತಂಕ ಮೂಡುವುದು ಸಹಜ. ಆದರೆ ತಂತ್ರಜ್ಞಾನ ಅಥವಾ ಯಂತ್ರಗಳು ಬಂದ ತಕ್ಷಣವೇ ಎಲ್ಲವೂ ಮುಗಿಯುವುದಿಲ್ಲ. ಬದಲಿಗೆ ಅದಕ್ಕೆ ಪೂರಕವಾದ ಹೊಸ ಕೆಲಸಗಳು ಮತ್ತು ಅವಕಾಶಗಳು ಸೃಷ್ಟಿಯಾಗುತ್ತವೆ. ನಾವೀಗ ಬದಲಾವಣೆಯ ಸುನಾಮಿಯಲ್ಲಿ ಸಿಲುಕಿದ್ದೇವೆ. ಈ ಅನಿವಾರ್ಯ ಪರಿಸ್ಥಿತಿಯಲ್ಲಿ ಬಿದ್ದು, ಎದ್ದು, ಈಜಿ ದಡ ಸೇರುವುದನ್ನು ನಾವೆಲ್ಲರೂ ಕಲಿಯಬೇಕಾಗಿದೆ ಎಂದರು. ದೇಶದ ಸರ್ವಾಂಗೀಣ ಬೆಳವಣಿಗೆಯಿಂದ ಹಿಡಿದು ಸಾಮಾನ್ಯ ಜನರ ದೈನಂದಿನ ಜೀವನದವರೆಗೆ ಅರ್ಥಶಾಸ್ತ್ರ ಮತ್ತು ವ್ಯವಹಾರ ಜ್ಞಾನ ಅತ್ಯಂತ ಅನಿವಾರ್ಯವಾಗಿದೆ. ಈ ಸಂದರ್ಭದಲ್ಲಿ ಕೌಟಿಲ್ಯನ ಚಿಂತನೆಗಳನ್ನು ಸ್ಮರಿಸಿದ ಅವರು, ನಮಗೆ ಬೇಕಾದುದನ್ನು ಮೊದಲು ಪಡೆದುಕೊಳ್ಳಬೇಕು, ತದನಂತರ ಅದನ್ನು ಸೂಕ್ತವಾಗಿ ರಕ್ಷಿಸಬೇಕು. ಆ ಮೂಲಕ ಬಂದ ಆದಾಯವನ್ನು ವೃದ್ಧಿಸಿಕೊಳ್ಳಬೇಕು ಹಾಗೂ ಕೊನೆಯಲ್ಲಿ ಬಂದ ಲಾಭವನ್ನು ಸಮಾಜಕ್ಕೆ ದೇಣಿಗೆಯ ರೂಪದಲ್ಲಿ ಹಿಂತಿರುಗಿಸಬೇಕು ಎಂದರು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಓದು ಮತ್ತು ಮಾನಸಿಕ ಒತ್ತಡಗಳ ಬರದಲ್ಲಿ ಸಿಲುಕಿ ನಾವು ಪ್ರಮುಖವಾದದ್ದನ್ನು ಮರೆಯುತ್ತಿದ್ದೇವೆ. ಪ್ರತಿಯೊಬ್ಬರಲ್ಲೂ ನಾನು, ನನ್ನ ಕುಟುಂಬ, ನನ್ನ ಸ್ನೇಹಿತರು ಹಾಗೂ ನನ್ನ ದೇಶ ಎಂಬ ಅಭಿಮಾನ ಮೂಡಬೇಕು. ದೇಶದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಮೆಲುಕು ಹಾಕುವ ಕೆಲಸವಾಗಬೇಕು. ಇಂದಿನ ಯುವ ಪೀಳಿಗೆ ಹಿರಿಯರೊಂದಿಗೆ ಸಮಯ ಕಳೆಯುವುದನ್ನು ಹಾಗೂ ತಮ್ಮವರಿಗಾಗಿ ಸಮಯವನ್ನು ಮೀಸಲಿಡುವುದನ್ನು ರೂಢಿಸಿಕೊಳ್ಳಬೇಕು ಎಂದರು. ಎಂ.ಕಾಂ (ಮಾಹಿತಿ ವ್ಯವಸ್ಥೆ) ಮುಖ್ಯಸ್ಥರಾದ ಪ್ರೊ. ಪಿ. ಪರಮಶಿವಯ್ಯ ಸ್ವಾಗತಿಸಿದರು. ವಾಣಿಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನ ವಿಭಾಗದ ಮುಖ್ಯಸ್ಥರಾದ ಪ್ರೊ. ಸುರೇಶ್ ಬಿ.ಕೆ ವಂದಿಸಿದರು. ವಾಣಿಜ್ಯ ನಿಕಾಯದ ಡೀನ್ ಪ್ರೊ. ಜಿ. ಸುದರ್ಶನ ರೆಡ್ಡಿ, ಹಿರಿಯ ಪ್ರಾಧ್ಯಾಪಕರಾದ ಪ್ರೊ. ಬಿ. ಶೇಖರ್ ಉಪಸ್ಥಿತರಿದ್ದರು.