ಕನ್ನಡಪ್ರಭ ವಾರ್ತೆ ತುಮಕೂರು 12ನೇ ಶತಮಾನದ ಶರಣರ ವಚನಗಳು ಇಪ್ಪತ್ತನೇ ಶತಮಾನದಲ್ಲಿ ಅಳಿವಿನ ಅಂಚಿನಲ್ಲಿದ್ದಾಗ ಅವುಗಳನ್ನು ಹುಡುಕಿ ಸಂಪಾದಿಸಿ ಸ್ವಂತ ಹಣದಿಂದ ಮುದ್ರಣಾಲಯ ತೆರೆದು ಪ್ರಕಟಿಸಿದ ಕೀರ್ತಿಗೆ ಭಾಜನರಾದ ಫ.ಗು ಹಳಕಟ್ಟಿ ಅವರು ವಚನ ಸಾಹಿತ್ಯದ ಪುನರುಜ್ಜೀವನ ಮತ್ತು ಸಂರಕ್ಷಣೆಯ ಮಹಾರೂವಾರಿ ಆಗಿದ್ದಾರೆ ಎಂದು ಮಧುಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ಎಂ ಗೋವಿಂದರಾಯ ಅಭಿಪ್ರಾಯಪಟ್ಟರು.ಅವರು ಬಸವಕೇಂದ್ರ ಮತ್ತು ಜಯದೇವ ವಿದ್ಯಾರ್ಥಿನಿಲಯ ಟ್ರಸ್ಟ್ ನಗರದ ಜಯದೇವ ಮುರುಘರಾಜೇಂದ್ರ ಸಭಾಂಗಣದಲ್ಲಿ ಏರ್ಪಡಿಸಿದ್ದ ಫ.ಗು. ಹಳಕಟ್ಟಿ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ಮಾಡಿದರು.ತಮ್ಮ ವಕೀಲಿವೃತ್ತಿಯ ಗಳಿಕೆಯ ಬಹುಭಾಗವನ್ನು ಹಸ್ತ ಪ್ರತಿಗಳನ್ನು ಕೊಳ್ಳಲು ಬಳಸಿದ್ದಲ್ಲದೆ ಅವುಗಳ ಮುದ್ರಣಕ್ಕಾಗಿ ಬಿಜಾಪುರದಲ್ಲಿದ್ದ ತಮ್ಮ ಸ್ವಂತ ಮನೆಯನ್ನೇ ಮಾರಿ ಕಡು ಬಡತನದಲ್ಲೂ ವಚನಗಳ ಸಂಗ್ರಹವನ್ನು ಮಾಡಿದ್ದಾರೆ. ವಚನಕಾರರ ಅಂಕಿತನಾಮಗಳ ಗುರುತಿಸುವಿಕೆ ವಚನಶಾಸ್ತ್ರಸಾರ ಕೃತಿ ಶಿವಾನುಭವ ಪತ್ರಿಕೆ ಗ್ರಾಮೀಣಾಭಿವೃದ್ದಿ ಸಂಘ ನೇಕಾರರ ಸಂಘ ಸಿದ್ದೇಶ್ವರಬ್ಯಾಂಕ್ ಮೊದಲಾದವುಗಳ ಹುಟ್ಟಿಗೆ ಕಾರಣರಾಗಿ ಆಧುನಿಕ ಕರ್ನಾಟಕದ ಸಾಂಸ್ಕೃತಿಕ ಭಗೀರಥ ಎಂಬ ಬಿರುದಿಗೆ ಪಾತ್ರರಾಗಿದ್ದಾರೆ ಎಂದರು. ಫ.ಗು. ಹಳಕಟ್ಟಿ ಜಯಂತಿ ನಿಮಿತ್ತ ಸನ್ಮಾನ ಸ್ವೀಕರಿಸಿದ ಸಂಶೋಧಕ ಡಾ. ಡಿ.ಎನ್. ಯೋಗೀಶ್ವರಪ್ಪ ಮಾತನಾಡಿ, ಕನ್ನಡ ಸಾಹಿತ್ಯದ ನವೋದಯ ಕಾಲದಲ್ಲಿ ಬಿ.ಎಂ.ಶ್ರೀ ಯವರು ಕನ್ನಡ ಕಟ್ಟುವ ಕೆಲಸ ಮಾಡುತ್ತಿದ್ದರೆ ಅವರ ಸಮಕಾಲೀನರಾಗಿ ಶ್ರೇಷ್ಠ ನ್ಯಾಯವಾದಿಗಳಾಗಿದ್ದ ಹಳಕಟ್ಟಿಯವರು ಮಧ್ಯಕಾಲೀನ ಕನ್ನಡ ಸಾಹಿತ್ಯವನ್ನು ಉದ್ದರಿಸಲು ಹೊರಟ ಮಹಾ ಪುರುಷರು. ವೃತ್ತಿಯಲ್ಲಿ ವಕೀಲರಾದರೂ ಪ್ರವೃತ್ತಿಯಲ್ಲಿ ಸಾಹಿತ್ಯವನ್ನು ತಮ್ಮ ಉಸಿರಾಗಿ ಸ್ವೀಕರಿಸಿದವರು. ತಾವು ಗಳಿಸಿದ್ದ ಹಣವನ್ನೆಲ್ಲಾ ವಚನ ಸಾಹಿತ್ಯ ಪ್ರಕಟಣೆಗೆ ವ್ಯಯಮಾಡಿ ಇದ್ದ ಮನೆಯನ್ನು ಮಾರಿಕೊಂಡು ಬದುಕಿನುದ್ದಕ್ಕೂ ಬಾಡಿಗೆ ಮನೆಯಲ್ಲಿ ವಾಸಿಸುತ್ತಾ ವಚನ ಸಂಶೋಧನೆಗೆ ತಮ್ಮ ಇಡೀ ಜೀವನವನ್ನು ಮಿಸಲಾಗಿಟ್ಟು ವಚನ ಸಂರಕ್ಷಣೆಯ ಪಿತಾಮಹ ಎನಿಸಿಕೊಂಡು ಅವರ ಕಾರ್ಯ ವೈಖರಿಯನ್ನು ಮೆಚ್ಚಿದ ಆಚಾರ್ಯ ಬಿ.ಎಂ.ಶ್ರೀಯವರು ಅವರನ್ನು ವಿಜಾಪುರದ ವಚನ ಗುಮ್ಮಟ ಎಂದು ಕರೆದಿದ್ದಾರೆ ಎಂದರು.ಸನ್ಮಾನ ಸ್ವೀಕರಿಸಿ ಮಾತನಾಡಿದ.ಡಾ. ಬಿ.ನಂಜುಂಡಸ್ವಾಮಿ.ಫ.ಗು. ಹಳಕಟ್ಟಿಯವರು ತುಮಕೂರು ಜಿಲ್ಲೆಯ ಗೋಡೆಕೆರೆ ಮಠದ ಕಾರ್ಯಕ್ರಮವೊಂದಕ್ಕೆ ಆಗಮಿಸಿ ವಚನಶಾಸ್ತ್ರ ಸಾರದ ಬಗ್ಗೆ ವಿಶೇಷ ಉಪನ್ಯಾಸ ನೀಡಿದ್ದರು ಆ ಸಂದರ್ಭದಲ್ಲಿ ಹಳಕಟ್ಟಿಯವರು ಈ ಭಾಗದಲ್ಲಿ ಸಿದ್ದರಾಮೇಶ್ವರರ ಭಕ್ತರೇ ಹೆಚ್ಚಾಗಿರುವುದನ್ನು ಮನಗಂಡು ಸಿದ್ದರಾಮೇಶ್ವರ ಜಯಂತಿಯನ್ನು ಆಚರಿಸಲು ಕರೆ ನೀಡಿದ್ದರು. ಇವರ ಸಾಹಿತ್ಯ ದುಡಿಮೆಯನ್ನು ಏಕವ್ಯಕ್ತಿ ಸಾಹಸ ಸಾಹಿತ್ಯ ದುಡಿಮೆಯೆಂದು ಹೇಳಬಹುದು ಎಂದು ಅಭಿಪ್ರಾಯಪಟ್ಟರು.ಬಸವಕೇಂದ್ರದ ಅಧ್ಯಕ್ಷರಾದ ಸಿದ್ದಗಂಗಮ್ಮ ಬಿ ಸಿದ್ದರಾಮಣ್ಣ ಅಧ್ಯಕ್ಷತೆ ವಹಿಸಿದ್ದರು. ಬಸವಕೇಂದ್ರದ ಕಾರ್ಯದರ್ಶಿ ಚಂದ್ರಶೇಖರ್ ನಿರೂಪಿಸಿದರು. ಕಲ್ಪನಾ ಬಿ ಉಮೇಶ್ ಸ್ವಾಗತಿಸಿದರು. ಆಧುನಿಕ ವಚನಕಾರ ಎಲೆರಾಂಪುರ ರುದ್ರಮೂರ್ತಿ ವಂದಿಸಿದರು ರಾಗಿಣಿ ವಚನಗಾಯನ ನಡೆಸಿಕೊಟ್ಟರು.
ವಚನ ಸಂರಕ್ಷಣೆಯ ಮಹಾರೂವಾರಿ ಫ.ಗು. ಹಳಕಟ್ಟಿ
ಫ.ಗು ಹಳಕಟ್ಟಿ ಅವರು ವಚನ ಸಾಹಿತ್ಯದ ಪುನರುಜ್ಜೀವನ ಮತ್ತು ಸಂರಕ್ಷಣೆಯ ಮಹಾರೂವಾರಿ ಆಗಿದ್ದಾರೆ
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.