ಕನ್ನಡಪ್ರಭ ವಾರ್ತೆ ಕುಣಿಗಲ್
ಎಲ್ಲಾ ಧರ್ಮ ಜಾತಿ ಜನಾಂಗದ ಜೊತೆಗೆ ಬದುಕು ನಡೆಸುವ ಶಕ್ತಿ ವೀರಶೈವ ಲಿಂಗಾಯಿತ ಧರ್ಮಕ್ಕಿದೆ ಎಂದು ಕೇಂದ್ರ ಸಚಿವ ವಿ ಸೋಮಣ್ಣ ತಿಳಿಸಿದ್ದಾರೆ.ಪಟ್ಟಣದ ಅಟವೀಸ್ವಾಮಿ ದೇವಾಲಯದಲ್ಲಿ ತಾಲೂಕು ವೀರಶೈವ ಸಮಾಜದ ವತಿಯಿಂದ ಏರ್ಪಡಿಸಿದ್ದ ಬಸವ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ವೀರಶೈವ ಲಿಂಗಾಯತ ಧರ್ಮ ಎಲ್ಲರನ್ನು ತನ್ನ ಜೊತೆಗೆ ತೆಗೆದುಕೊಂಡು ಹೋಗುವ ಧರ್ಮವಾಗಿದ್ದು, ಈ ಹಿಂದಿನ ರಂಭಾಪುರಿ ಜಗದ್ಗುರುಗಳಾಗಿದ್ದ ಲಿಂ.ಶ್ರೀ ವೀರಗಂಗಾಧರ ಶಿವಾಚಾರ್ಯರು ಮಾನವ ಧರ್ಮಕ್ಕೆ ಜಯವಾಗಲಿ ಎಂದು ಹೇಳಿದ್ದಾರೆ. ಅಂದರೆ ಎಲ್ಲರಿಗೂ ಜಯವಾಗಲಿ ಎಂದು ಅರ್ಥ. ಇದನ್ನು ಜಾರಿಗೆ ತಂದಿರುವ ವೀರಶೈವ ಲಿಂಗಾಯರು ಇಂದಿಗೂ ಸಹ ಸಮಾಜದಲ್ಲಿ ಶಾಂತಿ ಸೌಹಾರ್ದತೆಗೆ ಹೆಸರುವಾಸಿಯಾಗಿದ್ದಾರೆ. ದಾಸೋಹ ಸಂಸ್ಕೃತಿ ಮೂಲಕ ಎಲ್ಲರಿಗೂ ಅನ್ನದಾನ ಮಾಡುವ ನಾವುಗಳು ಎಲ್ಲರನ್ನು ಸಮಾನವಾಗಿ ಕಾಣುತ್ತೇವೆ. ಇದರಿಂದಾಗಿ ಇಂದಿಗೂ ಸಹ ವೀರಶೈವ ಲಿಂಗಾಯತರು ಎಲ್ಲಿಯೇ ಹೋದರು ಅವರಿಗೆ ಗೌರವಾದರಗಳನ್ನು ನಾವು ಕಾಣಬಹುದಾಗಿದೆ. ಕುಣಿಗಲ್ ನಲ್ಲಿ ವೀರಶೈವ ಲಿಂಗಾಯಿತ ಸಮಾಜದವರು ಕಡಿಮೆ ಸಂಖ್ಯೆ ವಾಸಿಸುತ್ತಿದ್ದಾರೆ.ಆದರೆ ಅವರು ಎಲ್ಲರೂ ಒಟ್ಟಾಗಿ ಬಸವ ಜಯಂತಿ ಆಚರಿಸುತ್ತಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡುತ್ತಿದ್ದಾರೆ ಅವರ ಕಾರ್ಯಕ್ಕೆ ಅಭಿನಂದನೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಅಧ್ಯಕ್ಷ ವಸಂತ್ ಕುಮಾರ್ ಸಮಾಜದ ಅಭಿವೃದ್ಧಿಗೆ ಹಾಗೂ ತಾಲೂಕಿಗೆ ಕೇಂದ್ರ ಸವಲತ್ತು ನೀಡುವುದರ ಜೊತೆಗೆ ಕುಣಿಗಲ್ ಗೆ ತಿರುಪತಿ ರೈಲು ಹಾಗೂ ವಂದೇ ಮಾತರಂ ನಿಲುಗಡೆ ನೀಡುವಂತೆ ಮನವಿ ಮಾಡಿದರು.ಬೆಂಗಳೂರು ಗ್ರಾಮಾಂತರ ಸಂಸದ ಡಾ. ಸಿ ಎನ್ ಮಂಜುನಾಥ್ ಕಲಿಕೆಯು ಉತ್ತಮವಾಗಿರಬೇಕು. ತಂದೆ ತಾಯಿಗಳ ಸಹಕಾರ ಅವಶ್ಯ ಉತ್ತಮರ ಸಹಕಾರದಿಂದ ಒಳಿತಾಗುತ್ತೆ ಕೆಲವರ ಸಹವಾಸ ಅಪಾಯ ಎಂದು ಎಚ್ಚರಿಸಿದರು .
ಶಾಸಕ ಡಾ.ರಂಗನಾಥ ಮಾತನಾಡಿ ತಾಲೂಕಿನಲ್ಲಿರುವ ವೀರಶೈವ ಲಿಂಗಾಯಿತ ಜನಾಂಗದ ಅಭಿವೃದ್ದಿಗೆ ಶ್ರಮಿಸುವ ಗುಣವನ್ನು ಅಧ್ಯಕ್ಷ ವಸಂತ ಕುಮಾರ್ ಬೆಳೆಸಿಕೊಂಡಿದ್ದಾರೆ ಇಂತಹ ಕಾರ್ಯಕ್ರಮ ನಡೆಸುವ ಪರಿಶ್ರಮದ ಫಲವಾಗಿದೆ ಸಮಾಜದ ಏಳಿಗೆಗಾಗಿ ನಮ್ಮ ಸಹಕಾರ ಸದಾ ಸಿಗಲಿದೆ ಎಂದರು .
ಬೆಟ್ಟಹಳ್ಳಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಮಠದ ಕಾರ್ಯಕ್ರಮ ಮಾಡುವುದು ಸುಲಭದ ಮಾತಲ್ಲ. ನೆಲಮಂಗಲದ ಪವಾಡ ಶ್ರೀ ಬಸವಣ್ಣದೇವರ ಮಠದ ಸಿದ್ಧಲಿಂಗ ಸ್ವಾಮೀಜಿ ಸಮಾಜದ ಸಂಘಟನೆಗೆ ಸಾಕಷ್ಟು ಪರಿಶ್ರಮ ನಡೆಸಿದ್ದಾರೆ ಅದು ನಿರಂತರವಾಗಿ ನಡೆಯಬೇಕಿದೆ ಎಂದರು.
ಈ ಸಂದರ್ಭದಲ್ಲಿ ತಾಲೂಕಿನ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಭದ್ರಗಿರಿ ಮಠದ ಶ್ರೀ ವೀರಭದ್ರ ಶಿವಾನಂದ ಶಿವಾಚಾರ್ಯ ಸ್ವಾಮೀಜಿ , ಕುಣಿಗಲ್ ಹಿರೇಮಠದ ವೀರರುದ್ರ ಶಿವಾಚಾರ್ಯ ಸ್ವಾಮೀಜಿ, ಡಿ ನಾಗರಾಜಯ್ಯ , ಕೃಷ್ಣಕುಮಾರ್ , ಪ್ರಸಾದ್ , ಕೆ ಎಸ್ ಚೇತನ್ , ಶಿವನಂಜಯ್ಯ , ಲೋಕೇಶ್ ಸೇರಿದಂತೆ ಇತರರು ಇದ್ದರು .