ಜನವಸತಿ ಪ್ರದೇಶದಲ್ಲಿ ಬಾರ್, ಲಾಡ್ಜಿಂಗ್‌ಗೆ ಅವಕಾಶ ನೀಡಬೇಡಿ

KannadaprabhaNewsNetwork |  
Published : Jun 13, 2024, 12:51 AM IST
ಪೊಟೋ-ಪಟ್ಟಣದ ಮಾನ್ವಿ ಪೆಟ್ರೋಲ್ ಬಂಕ್ ಹತ್ತಿರ ಇರುವ ಹಾಲುಮತದ ಓಣಿಯಲ್ಲಿ ಸಂಗಮ ಬಾರ್ ಮತ್ತು ಲಾಡ್ಜ್ ತೆರಯಲು ಅವಕಾಶ ನೀಡಬಾರದು ಎಂದು ಮಹಿಳೆಯರು ಪ್ರತಿಭಟನೆ ನಡೆಸುತ್ತಿರುವುದು.    | Kannada Prabha

ಸಾರಾಂಶ

ಮನೆಯ ಪಕ್ಕದಲ್ಲಿಯೇ ಬಾರ್ ಮತ್ತು ಲಾಡ್ಜ್ ಆರಂಭವಾದರೆ ನಮ್ಮ ಸಂಸಾರವನ್ನು ಯಾರು ಕಾಪಾಡುತ್ತಾರೆ ಎಂದು ಮಹಳಿಯರು ಪ್ರಶ್ನಿಸಿದರು.

ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ

ಪಟ್ಟಣದ ಮಾನ್ವಿ ಪೆಟ್ರೋಲ್ ಬಂಕ್ ಹತ್ತಿರ ಬಾರ್ ಮತ್ತು ಲಾಡ್ಜ್ ಆರಂಭಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿ ಎಪಿಎಂಸಿ ಹತ್ತಿರದ ಹಾಲುಮತ ಸಮಾಜದ ಓಣಿಯ ಮಹಿಳೆಯರು ಮಂಗಳವಾರ ರಾತ್ರಿ 11 ಗಂಟೆಯ ಸುಮಾರಿಗೆ ಪ್ರತಿಭಟನೆ ನಡೆಸಿದರು.

ಈ ವೇಳೆ ಆಕ್ರೋಶ ವ್ಯಕ್ತಪಡಿಸಿದ ಮಹಿಳೆಯರು, ನಮ್ಮ ಮನೆಯ ಅಕ್ಕಪಕ್ಕದಲ್ಲಿ ಬಾರ್ ತೆರೆಯುವುದರಿಂದ ನಮ್ಮ ಗಂಡಂದಿರು, ನಮ್ಮ ಮನೆಯಲ್ಲಿನ ಹುಡುಗರು ಕುಡಿತದ ಚಟಕ್ಕೆ ದಾಸರಾಗುತ್ತಾರೆ. ಈಗಾಗಲೆ ಓಣಿಯಲ್ಲಿನ ಹಲವರು ಕುಡಿತದ ಚಟದ ದಾಸರಾಗಿದ್ದಾರೆ. ಇನ್ನೂ ಮನೆಯ ಪಕ್ಕದಲ್ಲಿಯೇ ಬಾರ್ ಮತ್ತು ಲಾಡ್ಜ್ ಆರಂಭವಾದರೆ ನಮ್ಮ ಸಂಸಾರವನ್ನು ಯಾರು ಕಾಪಾಡುತ್ತಾರೆ ಎಂದು ಪ್ರಶ್ನಿಸಿದರು.

5-6 ತಿಂಗಳ ಹಿಂದೆ ಇಲ್ಲಿ ಬಾರ್ ಮತ್ತು ಲಾಡ್ಜ್‌ ಆರಂಭಕ್ಕೆ ತಯಾರಿ ನಡೆದಿತ್ತು. ಆಗ ಪ್ರತಿಭಟನೆ ನಡೆಸಿ ಬಂದ್ ಮಾಡಿಸಿದ್ದೆವು. ಆದರೆ ಈಗ ಮತ್ತೆ ಕಟ್ಟಡದ ಮಾಲೀಕರು ಮದ್ಯದ ಬಾಟಲಿಗಳನ್ನು ಇಳಿಸುವ ಕಾರ್ಯ ಮಾಡುತ್ತಿರುವುದರಿಂದ ಮತ್ತೆ ಪ್ರತಿಭಟನೆ ಮಾಡುತ್ತಿದ್ದೇವೆ. ನಮ್ಮ ಕುಟುಂಬಗಳು ದಿನದ ದುಡಿಮೆಯಿಂದಲೆ ಜೀವನ ಸಾಗಿಸುತ್ತವೆ. ನಮ್ಮ ಮಕ್ಕಳು ಹಾಗೂ ನಮ್ಮ ಮನೆಯ ಹಿರಿಯರು ಕುಡಿತದ ಚಟಕ್ಕೆ ಬಿದ್ದರೆ ನಮ್ಮ ಗತಿಯೇನು? ಈಗಾಗಲೆ ಬಹಳಷ್ಟು ಕುಡಿತದ ಚಟಕ್ಕೆ ಬಿದ್ದು ಹೆಂಡತಿಯ ತಾಳಿ ಮಾರಿ ಕುಡಿಯುವ ಹಂತಕ್ಕೆ ಹೋಗಿದ್ದಾರೆ. ಹೆಂಡತಿಯನ್ನು ಹೊಡೆದು-ಬಡಿದು, ಅವರ ಹತ್ತಿರ ಇದ್ದ ಹಣ ಮತ್ತು ಬಂಗಾರದ ಆಭರಣ ಕಿತ್ತುಕೊಂಡು ಕುಡಿಯಲು ಹೋಗುವ ಪ್ರಕರಣಗಳು ನಡೆದಿವೆ. ಹೀಗಾಗಿ ಇಲ್ಲಿ ಬಾರ್ ತೆರೆಯಲು ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.

ಇಲ್ಲಿ ಜೀವನ ಸಾಗಿಸುತ್ತಿರುವ ಮಹಿಳೆಯರು ಕಡುಬಡವರಾಗಿದ್ದು, ಹಗಲು ಮತ್ತು ರಾತ್ರಿ ಹೊತ್ತಲ್ಲಿ ಕೆಲಸಕ್ಕೆ ಹೋಗುತ್ತಾರೆ. ಒಂದು ವೇಳೆ ಇಲ್ಲಿ ಲಾಡ್ಜ್ ಮತ್ತು ಬಾರ್ ತೆರೆದಲ್ಲಿ ಮಹಿಳೆಯರು ಓಡಾಡುವುದು ಅಸಾಧ್ಯವಾಗುತ್ತದೆ. ಆದ್ದರಿಂದ ನಮ್ಮ ನೆಮ್ಮದಿ ಹಾಳು ಮಾಡುವ ಕಾರ್ಯಕ್ಕೆ ತಹಸೀಲ್ದಾರರು ಹಾಗೂ ಅಬಕಾರಿ ಇಲಾಖೆಯ ಅಧಿಕಾರಿಗಳು ಅವಕಾಶ ನೀಡಬಾರದು. ಒಂದು ವೇಳೆ ನಮ್ಮ ಮಾತಿಗೆ ಬೆಲೆ ಕೊಡದೆ ಆರಂಭ ಮಾಡಿದ್ದೇ ಆದಲ್ಲಿ ಮುಂದೆ ಆಗುವ ಅನಾಹುತಕ್ಕೆ ನೀವೇ ಕಾರಣವಾಗುತ್ತೀರಿ ಎಂದು ಮಹಿಳೆಯರು ಎಚ್ಚರಿಸಿದರು. ಆನಂತರ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು.

PREV

Recommended Stories

''ಪ್ರಜ್ವಲ್‌ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''
ಸಾರಿಗೆ ಮುಷ್ಕರಿಂದ ನಾಲ್ಕು ನಿಗಮಗಳಿಗೆ 12 ಕೋಟಿ ನಷ್ಟ