ಹೊಸ ವೃಂದ ನೇಮಕಾತಿ ನಿಯಮ 2016ಕ್ಕಿಂತ ಮುನ್ನ ಶಿಕ್ಷಕರಿಗೆ ಅನ್ವಯಿಸಬೇಡಿ

KannadaprabhaNewsNetwork | Published : Aug 6, 2024 12:36 AM

ಸಾರಾಂಶ

ಔರಾದ್ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕ ಸಂಘದಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಔರಾದ್

ಹೊಸ ವೃಂದ ನೇಮಕಾತಿ ನಿಯಮಗಳನ್ನು 2016ಕ್ಕಿಂತ ಮುಂಚೆ ನೇಮಕಾತಿಯಾದ ಶಿಕ್ಷಕರಿಗೆ ಪೂರ್ವಾನ್ವಯ ಗೊಳಿಸದಂತೆ ಆಗ್ರಹಿಸಿ ಸೋಮವಾರ ಪಟ್ಟಣದ ತಹಸೀಲ್ದಾರ್‌ ಕಚೇರಿ ಎದುರಿಗೆ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.

ಶಿಕ್ಷಣ ಇಲಾಖೆ ಆಯುಕ್ತರಿಗೆ ಬರೆದ ಪತ್ರ ತಹಸೀಲ್ದಾರ್ ಮಲಶೆಟ್ಟಿ ಚಿದ್ರೆ ಅವರಿಗೆ ಸಲ್ಲಿಸಿ ಮಾತನಾಡಿದ ಸಂಘದ ಜಿಲ್ಲಾ ಉಪಾಧ್ಯಕ್ಷ ಪಂಡರಿ ಆಡೆ, ಹೊಸ ವೃಂದ ಮತ್ತು ನೇಮಕಾತಿ ನಿಯಮಗಳಿಂದ ಪ್ರಾಥಮಿಕ (ಪಿಎಸ್‌ಟಿ) ಶಿಕ್ಷಕರಿಗೆ ಅನ್ಯಾಯವಾಗುತ್ತಿದೆ. ಪ್ರೌಢಶಾಲೆಗೆ ಬಡ್ತಿ ಪಡೆಯಲು ಅರ್ಹರಿದ್ದ ಶಿಕ್ಷಕರಿಗೆ ಅವರ ವಿದ್ಯಾರ್ಹತೆ ಪರಿಗಣಿಸಿ ಈ ಹಿಂದಿನಂತೆ ಬಡ್ತಿ ನೀಡುವುದು. ಸೇವಾ ಜೇಷ್ಠತೆ ಆಧಾರದ ಮೇಲೆ ಸಹ ಶಿಕ್ಷಕ ಹುದ್ದೆಯಿಂದ ಮುಖ್ಯ ಶಿಕ್ಷಕ, ಮುಖ್ಯ ಶಿಕ್ಷಕ ಹುದ್ದೆಯಿಂದ ಹಿರಿಯ ಮುಖ್ಯ ಶಿಕ್ಷಕ ಹುದ್ದೆಗೆ ಬಡ್ತಿ ನೀಡಬೇಕು ಎಂದು ಆಗ್ರಹಿಸಿದರು.

ಗಜಾನನ ಮಳ್ಳಾ ಮಾತನಾಡಿ, ಈ ಹಿಂದೆ ನೇಮಕರಾದ ಶಿಕ್ಷಕರು 1-7 ಹಾಗೂ 1-8ನೇ ತರಗತಿ ಬೋಧನೆ ಮಾಡುತ್ತಿದ್ದು, ಅವರಿಗೆ ಪಿಎಸ್‌ಟಿ (1-5ನೇ) ತರಗತಿಗಳಿಗೆ ಸಿಮೀತಗೊಳಿಸಿದ್ದು, ಹಿಂಬಡ್ತಿ ನೀಡಿದ್ದು ಖಂಡನೀಯವಾಗಿದೆ. ಒಂದು ವೇಳೆ ನಮ್ಮ ಸಮಸ್ಯೆಗಳಿಗೆ ಸ್ಪಂದಿಸದಿದ್ದಲ್ಲಿ ಆ.12ರಂದು ಶಾಲೆ ಮುಚ್ಚಿ ಬೆಂಗಳೂರನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು.

ಬಳಿಕ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೂ ಈ ಕುರಿತು ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ತಾಲೂಕು ಅಧ್ಯಕ್ಷ ಸಂಜೀವ ಮೇತ್ರೆ, ಜ್ಞಾನೇಶ್ವರ ವಾಡೇಕರ್, ರಾಜಕುಮಾರ ನಾಯಕವಾಡೆ, ಕಾಶಿನಾಥ ಮೆಗೂರೆ, ಶಿವಾನಂದ ಬಿರಾದಾರ, ಬಾಲಾಜಿ ಅಮರವಾಡಿ, ಶಿವಾನಂದ ಸ್ವಾಮಿ, ರಾಜಕುಮಾರ ಕರುಣಾಸಾಗರ, ಮಾರುತಿ ಚವ್ಹಾಣ, ವಿಠ್ಠಲ ದೇವಕತೆ, ಸಂತೋಷ ರೆಡ್ಡಿ, ಕಾಶಿನಾಥ ಬಿರಾದಾರ್, ವಿಜಯಕುಮಾರ್, ಪ್ರಕಾಶ ಬರ್ದಾಪೂರೆ, ವೆಂಕಟ ಔತಾಡೆ, ಇಮಾನವೆಲ್, ದಶರಥ ವಾಘಮಾರೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Share this article