ಕನ್ನಡಪ್ರಭ ವಾರ್ತೆ ಬೀದರ್
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಕೇಬಲ್ ಟೆಲಿವಿಷನ್ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಟಿವಿಗಳಲ್ಲಿ ಕೇವಲ ಒಳ್ಳೆಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡಬೇಕು ಮತ್ತು ಯಾವುದೇ ಅಶ್ಲೀಲ ಚಿತ್ರಗಳ ಪ್ರಸಾರ, ಸಮುದಾಯದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡಬಾರದು. ಹಾಗೇನಾದರು ಮಾಡಿದ್ದಲ್ಲಿ ಕೇಬಲ್ ಟೆಲಿವಿಷನ್ ನೆಟ್‌ವರ್ಕ್ ಅಧಿನಿಯಮ 1995 ರ ಪ್ರಕಾರ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದರು.
ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಹಾಗೂ ಕೇಬಲ್ ಟೆಲಿವಿಷನ್ ನೆಟ್‌ವರ್ಕ್ ನಿಯಮಗಳ ಪ್ರಕಾರ ಕಾರ್ಯಕ್ರಮಗಳನ್ನು ಪ್ರಸಾರ ಮಾಡಬೇಕು. ಬೀದರ್ ಜಿಲ್ಲೆಯಲ್ಲಿ ಯಾವುದೇ ನಕಲಿ ಕೇಬಲ್ ಟಿವಿಗಳ ಪ್ರಸಾರ ಕುರಿತು ಸಾರ್ವಜನಿಕರಿಂದ ದೂರುಗಳೇನಾದರು ಕಂಡು ಬಂದಲ್ಲಿ ಅಂತಹವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.ಕೇಬಲ ಟೆಲಿವಿಷನ್ ಚಾನಲ್‌ಗೆ ಸಂಬಂಧಿಸಿದ ಯಾವುದೇ ದೂರುಗಳಿದ್ದರೆ ಸಾರ್ವಜನಿಕರು ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಬೀದರ್‌ನಲ್ಲಿರುವ ದೂರು ಕೋಷದಲ್ಲಿ ತಮ್ಮ ದೂರುಗಳನ್ನು ಸಲ್ಲಿಸಬಹುದಾಗಿದೆ. ಈ ಮಾಹಿತಿಯನ್ನು ಸ್ಥಳೀಯ ಕೇಬಲ್ ಟಿವಿಗಳಲ್ಲಿ ಹೆಡಲೈನ್ ಮೂಲಕ ಸಾರ್ವಜನಿಕರ ಗಮನಕ್ಕೆ ತರಬೇಕೆಂದು ಹೇಳಿದರು.
ಸ್ಥಳಿಯ ಕೇಬಲ್ ಟೆಲಿವಿಷನ್‌ಗೆ ಸಂಬಂಧಿಸಿದ ಯಾವುದೇ ದೂರುಗಳು ಬಂದರೆ ತಕ್ಷಣ ಕ್ರಮ ವಹಿಸುವಂತೆ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಸುರೇಶ ಅವರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಈ ಸಭೆಯಲ್ಲಿ ಕರ್ನಲ್ ಶರಣಪ್ಪ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಮನೋಜಕುಮಾರ, ಶಂಬುಲಿಂಗ ವಾಲದೊಡ್ಡಿ, ಡಾನ ಬಾಸ್ಕೋ ಸಂಸ್ಥೆಯ ಪಾಧರ ಜಾರ್ಜ, ನವೀನ ಪಬ್ಲಿಕ್ ಶಾಲೆಯ ಮುಖ್ಯಸ್ಥರಾದ ರತ್ನ ಪಾಟೀಲ, ಮನಶಾಸ್ತ್ರಜ್ಞರಾದ ಮಲ್ಲಿಕಾರ್ಜುನ ಎಸ್. ಗುಡ್ಡೆ, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕರಾದ ಜಿ.ಸುರೇಶ, ವಿಜಯ ಕೃಷ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.