ಬಡ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಕೊಪ್ಪಳ ವಿವಿ ಬದ್ಧ: ಕೊಪ್ಪಳ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಬಿ.ಕೆ ರವಿ

KannadaprabhaNewsNetwork |  
Published : Feb 09, 2024, 01:48 AM IST
ಕನಕಗಿರಿ ಪಟ್ಟಣದ ಶ್ರೀ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಪ್ಪಳ ವಿವಿ ಕುಲಪತಿ ಬಿ.ಕೆ. ರವಿ ಮಾತನಾಡಿದರು. | Kannada Prabha

ಸಾರಾಂಶ

ಅತಿಯಾದ ಮೊಬೈಲ್ ಬಳಕೆಯಿಂದ ಮಾನಸಿಕ ನೆಮ್ಮದಿ ಹಾಳಾಗುತ್ತದೆ. ವಿದ್ಯಾರ್ಥಿಗಳು ತಂತ್ರಜ್ಞಾನ ಬಳಸಿಕೊಂಡು ಉನ್ನತ ಸ್ಥಾನಕ್ಕೆ ಬೆಳೆಯುವಂತಾಗಬೇಕು. ಸಾಮಾಜಿಕ ಪರಿವರ್ತನೆ ಹಾಗೂ ಬಡತನ ನಿರ್ಮೂಲನೆಗೆ ಶಿಕ್ಷಣ ಭದ್ರ ಬುನಾದಿಯಾಗಿದ್ದು, ಶೋಷಿತ, ಬಡ ಮಕ್ಕಳ ಶ್ರೇಯೋಭಿವೃದ್ಧಿಗೆ ಕಾಲೇಜಿನಲ್ಲಿ ಹೊಸ-ಹೊಸ ಕೋರ್ಸ್‌ ಆರಂಭಿಸಿ ಹಿಂದುಳಿದ ಕೊಪ್ಪಳ ವಿವಿಗೆ ಹೆಸರು ತರಬೇಕು.

ಕನಕಗಿರಿ: ಶೋಷಿತ, ಬಡ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಕೊಪ್ಪಳ ವಿಶ್ವವಿದ್ಯಾಲಯ ಬದ್ಧವಾಗಿದೆ ಎಂದು ಕೊಪ್ಪಳ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಬಿ.ಕೆ ರವಿ ಹೇಳಿದರು.

ಪಟ್ಟಣದ ಶ್ರೀ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪಠ್ಯೇತರ ಚಟುವಟಿಕೆ, ಸ್ಮರಣ ಸಂಚಿಕೆ ಬಿಡುಗಡೆ, ಪತ್ರಿಕೋದ್ಯಮ ವಿಭಾಗದ ಉದ್ಘಾಟನೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.ಅತಿಯಾದ ಮೊಬೈಲ್ ಬಳಕೆಯಿಂದ ಮಾನಸಿಕ ನೆಮ್ಮದಿ ಹಾಳಾಗುತ್ತದೆ. ವಿದ್ಯಾರ್ಥಿಗಳು ತಂತ್ರಜ್ಞಾನ ಬಳಸಿಕೊಂಡು ಉನ್ನತ ಸ್ಥಾನಕ್ಕೆ ಬೆಳೆಯುವಂತಾಗಬೇಕು. ಸಾಮಾಜಿಕ ಪರಿವರ್ತನೆ ಹಾಗೂ ಬಡತನ ನಿರ್ಮೂಲನೆಗೆ ಶಿಕ್ಷಣ ಭದ್ರ ಬುನಾದಿಯಾಗಿದ್ದು, ಶೋಷಿತ, ಬಡ ಮಕ್ಕಳ ಶ್ರೇಯೋಭಿವೃದ್ಧಿಗೆ ಕಾಲೇಜಿನಲ್ಲಿ ಹೊಸ-ಹೊಸ ಕೋರ್ಸ್‌ ಆರಂಭಿಸಿ ಹಿಂದುಳಿದ ಕೊಪ್ಪಳ ವಿವಿಗೆ ಹೆಸರು ತರಬೇಕು ಎಂದು ಹೇಳಿದರು.

ವಿಜ್ಞಾನ ಕ್ಷೇತ್ರದಲ್ಲಿ ಭಾರತ ಉತ್ತುಂಗಕ್ಕೆ ಬೆಳೆಯುತ್ತಿರುವ ಸಂದರ್ಭದಲ್ಲಿ ವಿಜ್ಞಾನ ಕೋರ್ಸಿಗೆ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇನ್ನು ಗುರು ತೋರಿದ ಮಾರ್ಗ, ಕಠಿಣ ಶ್ರಮ, ಶ್ರದ್ಧೆ ಹಾಗೂ ಪ್ರಾಮಾಣಿಕತೆಯನ್ನು ಅನುಕರಣೆಯಿಂದ ಬದುಕು ಹಸನಾಗಲಿದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ನಂತರ ಪ್ರಾಂಶುಪಾಲ ಬಜರಂಗ ಬಲಿ ಮಾತನಾಡಿ, ಕಾಲೇಜು ವರ್ಷದಿಂದ ವರ್ಷಕ್ಕೆ ಬದಲಾವಣೆಯತ್ತ ಸಾಗಿದೆ. ಈ ವರ್ಷ ಪತ್ರಿಕೋದ್ಯಮ ವಿಭಾಗವನ್ನು ಆರಂಭಿಸಲಾಗಿದೆ. ಮುಂದಿನ ವರ್ಷ ವಿದ್ಯಾರ್ಥಿಗಳ ಬೇಡಿಕೆ ಅನುಗುಣವಾಗಿ ಕೋರ್ಸ್‌ಗಳನ್ನು ಆರಂಭಿಸಲಾಗುವುದು. ವಿಜ್ಞಾನದ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿ ಬಿಎಸ್‌ಸಿ ವಿಭಾಗವನ್ನೂ ಆರಂಭಿಸಲಾಗುವುದು. ಹಿಂದುಳಿದ ತಾಲೂಕಿನಲ್ಲಿ ಪರಿವರ್ತನೆಯ ಗಾಳಿ ಸೂಸುವಂತೆ ಕಾಲೇಜಿನ ಉಪನ್ಯಾಸಕರು ಶ್ರಮಿಸುತ್ತಿರುವುದಾಗಿ ತಿಳಿಸಿದರು.

ಇತಿಹಾಸ ಸಂಶೋಧಕ ಹಾಗೂ ಗಂಗಾವತಿಯ ಕಲ್ಮಠದ ಚನ್ನಬಸವಸ್ವಾಮಿ ಮಹಿಳಾ ಪಿಯು ಕಾಲೇಜಿನ ಪ್ರಾಂಶುಪಾಲ ಶರಣಬಸಪ್ಪ ಕೋಲ್ಕಾರ್, ದೂರ ಶಿಕ್ಷಣ ನಿರ್ದೇಶಕ, ಚರಿತ್ರೆ ವಿಭಾಗದ ಪ್ರಾಧ್ಯಾಪಕ ಚಿನ್ನಸ್ವಾಮಿ ಸೋಸಲೆ ಮಾತನಾಡಿದರು.

ಕನ್ನಡ ಪ್ರಾಧ್ಯಾಪಕಿ ಆಶಿಕಾ ಎಚ್.ಸಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜು ನಿರ್ಮಾಣಕ್ಕೆ ಭೂಮಿ ದಾನ ನೀಡಿದ ಬಸವರಾಜ ಗುಗ್ಗಳಶೆಟ್ರ ಅವರನ್ನು ಗೌರವಿಸಲಾಯಿತು.ಉಪನ್ಯಾಸಕರಾದ ತಬಸ್ಸುಮ್ ಆರಾ, ಮರ್ವಿನ್ ಡಿಸೋಜ, ವೀರೇಶ ಕೆಂಗಲ್, ಲಲಿತಾ ಕಿನ್ನಾಳ, ಗೋಪಾಲರೆಡ್ಡಿ ಮಾದಿನಾಳ, ಬಾಳಪ್ಪ ಸೂಳೇಕಲ್, ಮಾರುತೇಶ, ರವಿಕುಮಾರ, ಲಕ್ಷ್ಮೀ ಹಾಗೂ ವಿದ್ಯಾರ್ಥಿಗಳು ಇದ್ದರು.

PREV

Recommended Stories

ಮುಸುಕುಧಾರಿ ಯಾರು ? ಸ್ನೇಹಿತನಿಂದ ವಿವರ ಸಂಗ್ರಹಿಸಿದ ಎಸ್‌ಐಟಿ
ಅನನ್ಯಾ ಭಟ್‌ ನಾಪತ್ತೆ ಆಗಿದ್ದಾಳೆಂಬ ಪ್ರಕರಣಕ್ಕೆ ಬಹುದೊಡ್ಡ ತಿರುವು ..!