ಹೊನ್ನಾವರ: ಜಿಲ್ಲೆಯು ಪಶ್ಚಿಮ ಘಟ್ಟದ ಹೃದಯವಿದ್ದಂತೆ. ಅಭಿವೃದ್ಧಿ ಹೆಸರಿನಲ್ಲಿ ಈ ಹೃದಯಕ್ಕೆ ಶಸ್ತ್ರಚಿಕಿತ್ಸೆ ಮಾಡಲು ಹೊರಟಿದ್ದಾರೆ ಎಂದು ಬಂಗಾರಮಕ್ಕಿಯ ಮಾರುತಿ ಗುರೂಜಿ ಹೇಳಿದರು.
ಜಗತ್ತಿನಲ್ಲಿ ಯಾರೂ ಕಾಣದ ಶ್ರೇಷ್ಠ ಪರಿಸರವನ್ನು ನಾವು ಪಡೆದಿದ್ದೇವೆ. ಪಶ್ಚಿಮಘಟ್ಟವು ಜಗತ್ತಿನ ಉಸಿರನ್ನು ಉಳಿಸುತ್ತಿದೆ. ಹಿತ್ತಲಗಿಡ ಮದ್ದಲ್ಲ ಎನ್ನುವಂತೆ ನಮ್ಮ ಜಿಲ್ಲೆಯ ಮಹತ್ವವನ್ನು ಅರಿತಿಲ್ಲ. ನಮ್ಮ ಜಿಲ್ಲೆ ನೀರು, ವಿದ್ಯುತ್, ವಿಜ್ಞಾನಿಗಳು, ತಂತ್ರಜ್ಞರು, ಚಿಂತಕರನ್ನು ಕೊಟ್ಟಿದೆ. ಆದರೆ ನಮ್ಮ ಜಿಲ್ಲೆಯಲ್ಲಿ ಒಂದೇ ಒಂದು ವಿಶ್ವವಿದ್ಯಾಲಯವಿಲ್ಲ. ಕೈಗಾ ಯೋಜನೆಯ ಮೂಲಕ ೩೨ ಸಾವಿರ ಹೆಕ್ಟೇರ್ ಜಾಗವನ್ನು ನುಂಗಿ ನೀರು ಕುಡಿದಿದ್ದಾರೆ. ಡಾ. ಕುಸುಮಾ ಸೊರಬ ಅವರ ಚಿಂತನೆಗಳನ್ನು ಅಳವಡಿಸಿ ಅನುಸರಿಸಿದರೆ ಉತ್ತರ ಕಾಣದ ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಸಹಕಾರಿಯಾಗಬಹುದು ಎಂದರು.
ಪಶ್ಚಿಮ ಘಟ್ಟಗಳ ಸೂಕ್ಷ್ಮ ಪರಿಸರ ವಲಯದ ಮಹತ್ವ ಹಾಗೂ ಡಾ. ಕುಸುಮಾ ಸೊರಬ ಅವರ ಸಾಧನೆಗಳನ್ನು ಬಿಂಬಿಸುವ ಸರೋಜಾ ಪ್ರಕಾಶ್ ಸಂಪಾದಿಸಿರುವ ಘಟ್ಟ ಮತ್ತು ಕಡಲ ಒಡಲ ನಡುವೆ ಕುಡಿ ಒಡಲು ಪುಸ್ತಕವನ್ನು ಮಾರುತಿ ಗುರೂಜಿ ಬಿಡುಗಡೆಗೊಳಿಸಿದರು.ಪರಿಸರತಜ್ಞ ಶಿವಾನಂದ ಕಳವೆ ಮಾತನಾಡಿ, ಇಂದು ಮಳೆ ಇಲ್ಲ, ಕಾಡಿಲ್ಲ, ಬರಗಾಲ ಬರುತ್ತಿದೆ. ೫೫ ಲಕ್ಷ ಕೊಳವೆಬಾವಿಗಳು ಇವೆ. ಹೊಸ ಹೊಸ ಯೋಜನೆಗಳನ್ನು ಘೋಷಣೆ ಮಾಡುವ ಸರ್ಕಾರಗಳಿವೆ. ಕುಸುಮಕ್ಕ ಪರಿಸರಕ್ಕೆ ಮಾರಕವಾದವುಗಳ ವಿರುದ್ಧ ದಿಟ್ಟವಾಗಿ ಎದುರಿಸಿದ್ದರು. ನಾವು ಜಗತ್ತಿನ ಮೂಲೆ ತಲುಪುವ ಬದಲು ಹಳ್ಳಿಯಲ್ಲಿ ನೆಲೆ ನಿಲ್ಲೋಣ. ಜಿಲ್ಲೆಯನ್ನು ಉಳಿಸಲು ಹೆಜ್ಜೆ ಇಡೋಣ. ಪರಿಸರವನ್ನು ಕಣ್ತೆರೆದು ನೋಡುವ ಪ್ರಜ್ಞೆ ಎಲ್ಲರಲ್ಲೂ ಬರಲಿ ಎಂದರು.
ಸ್ನೇಹಕುಂಜದ ಅಧ್ಯಕ್ಷ ರಾಮಕೃಷ್ಣ ಭಟ್ಟ ಇದ್ದರು. ಮಹೇಶ ಹೆಗಡೆ ಕಲ್ಲರೆ ಅವರು ನಿರ್ಮಿಸಿರುವ ಮೂಕ ವನದ ಧ್ವನಿ ಡಾ. ಕುಸುಮಾ ಸೊರಬ ಅವರಸಾಕ್ಷ್ಯಚಿತ್ರದ ಬಿಡುಗಡೆ ಹಾಗೂ ಸಂವಾದ ನಡೆಯಿತು. ನಂತರ ವಿವಿಧ ಗೋಷ್ಠಿಗಳು ನಡೆದವು.