- ಇಂದಿನಿಂದ ಪರಿಶಿಷ್ಟ ಜಾತಿ ಸಮೀಕ್ಷೆ ಹಿನ್ನೆಲೆ ಜಿಲ್ಲಾಡಳಿತಕ್ಕೆ ಒತ್ತಾಯ
- ಜಿಲ್ಲೆಯಲ್ಲಿ ವೀರಶೈವ ಜಂಗಮರು ಮಕ್ಕಳ ಶಾಲೆ ದಾಖಲಾತಿಗಳಲ್ಲಿ ಬೇಡ ಜಂಗಮ ಎಂದು ಬರೆಸಿದ್ದಾರೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ವೀರಶೈವ ಜಂಗಮರನ್ನು ಬೇಡ ಜಂಗಮರೆಂದು ಪರಿಶಿಷ್ಟ ಜಾತಿಯಲ್ಲಿ ದಾಖಲಿಸುವ ಅಪಾಯವಿರುವ ಹಿನ್ನೆಲೆಯಲ್ಲಿ ಅದಕ್ಕೆ ನ್ಯಾಯಮೂರ್ತಿ ನಾಗಮೋಹನ ದಾಸ್ ಏಕ ಸದಸ್ಯ ವಿಚಾರಣಾ ಆಯೋಗವು ಅವಕಾಶ ನೀಡಬಾರದು. ಪರಿಶಿಷ್ಟ ಜಾತಿಗಳ ಸಮೀಕ್ಷೆ ವೇಳೆ ವೀರಶೈವ ಲಿಂಗಾಯತ ಜಂಗಮರ ಪೈಕಿ ಕೆಲವರು ಬೇಡ ಜಂಗಮ ಎಂಬುದಾಗಿ ಬರೆಸಿ, ಅಕ್ರಮವಾಗಿ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಸೇರುವ ಅಪಾಯವಿದೆ. ಅದನ್ನು ತಡೆಯಬೇಕು ಎಂದು ಸಂಘಟನೆ ಮುಖಂಡರು ಭಾನುವಾರ ಜಿಲ್ಲಾಡಳಿತ ಮೂಲಕ ಆಯೋಗಕ್ಕೆ ಮನವಿ ಮಾಡಿದ್ದಾರೆ.
ವೀರಶೈವ ಜಂಗಮರು ವೀರಶೈವರಿಗೆ ಗುರುಗಳಾಗಿದ್ದು, ಆರ್ಥಿಕವಾಗಿ ಸ್ಥಿತಿವಂತರಾಗಿದ್ದಾರೆ. ಜನವಸತಿ ಪ್ರದೇಶಗಳ ನಿವಾಸಿಗಳಾಗಿರುತ್ತಾರೆ. ಒಂದೊಮ್ಮೆ ವೀರಶೈವ ಜಂಗಮರು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರಿದರೆ ಪುನಾ ಅಸ್ಪೃಶ್ಯ ಸಮುದಾಯಗಳಿಗೆ ತೀವ್ರ ಅನ್ಯಾಯವಾಗಲಿದೆ. ಆದ್ದರಿಂದ ಗಣತಿದಾರರು ಯಾವುದೇ ಕಾರಣಕ್ಕೂ ವೀರಶೈವ ಜಂಗಮರನ್ನು ಪರಿಶಿಷ್ಟ ಜಾತಿ ಸಮೀಕ್ಷೆಯಲ್ಲಿ ಪರಿಗಣಿಸಬಾರದು. ಈ ಬಗ್ಗೆ ಆಯೋಗವೂ ಜಿಲ್ಲಾಡಳಿತ, ಗಣತಿದಾರರಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಪರಿಶಿಷ್ಟ ಜಾತಿಗಣತಿಗೆ ಮನೆ ಮನೆ ಬಾಗಿಲಿಗೆ ಬರುವ ಗಣತಿದಾರರು ಪರಿಶಿಷ್ಟ ಜಾತಿಯ ಸಮುದಾಯಗಳಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕು. ಗಣತಿದಾರರು ಯಾವುದೇ ಕಾರಣಕ್ಕೂ ವೀರಶೈವ ಜಂಗಮರನ್ನು ಪರಿಶಿಷ್ಟ ಜಾತಿ ಸಮೀಕ್ಷೆಯಲ್ಲಿ ಪರಿಗಣಿಸಬಾರದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಹೆಗ್ಗೆರೆ ರಂಗಪ್ಪ, ದಲಿತ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಸಿ.ಬವರಾಜ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಜಿಗಳಿ ಹಾಲೇಶ, ಪ್ರಧಾನ ಕಾರ್ಯದರ್ಶಿ ಎಚ್.ಸಿ.ಸಿದ್ದೇಶ ಬಾತಿ, ತಾಲೂಕು ಅಧ್ಯಕ್ಷ ಎನ್.ಮಲ್ಲೇಶ ಚಿಕ್ಕನಹಳ್ಳಿ, ಉಪಾಧ್ಯಕ್ಷ ಎಚ್.ಕೃಷ್ಣಪ್ಪ ಹಳೆ ಚಿಕ್ಕನಹಳ್ಳಿ, ಪ್ರಧಾನ ಕಾರ್ಯದರ್ಶಿ ನಾಗರಾಜ ಎಚ್.ಚಿಕ್ಕನಹಳ್ಳಿ, ಕಲಾ ಮಂಡಳಿ ಜಿಲ್ಲಾಧ್ಯಕ್ಷ ದೊಡ್ಡಪ್ಪ ಆವರಗೊಳ್ಳ ಸೇರಿದಂತೆ ದಲಿತಪರ ಮುಖಂಡರು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.
-(ಸಾಂದರ್ಭಿಕ ಚಿತ್ರ)