ಕನ್ನಡಪ್ರಭ ವಾರ್ತೆ ಹರಿಹರ
ಸರ್ಕಾರದಿಂದ ರೈತರಿಗೆ ಅನೇಕ ಉಚಿತ ಅನುಕೂಲಗಳನ್ನು ನೀಡುವ ನಿಟ್ಟಿನಲ್ಲಿ ತಾಲೂಕು ಆಡಳಿತ ಮನೆ ಬಾಗಿಲಿಗೆ ಬಂದಿದೆ ಅದರ ಸದುಪಯೋಗ ಪಡೆಯಿರಿ ಎಂದು ತಹಸೀಲ್ದಾರ ಗುರುಬಸವರಾಜ್ ತಿಳಿಸಿದರು.ತಾಲೂಕಿನ ಸಾರಥಿ, ಗಂಗನರಸಿ, ದೊಗ್ಗಳಿ ಗ್ರಾಮಗಳಲ್ಲಿ ಬುಧವಾರ ಕಂದಾಯ ಇಲಾಖೆ ಹಮ್ಮಿಕೊಂಡಿದ್ದ ಪೋಡಿಮುಕ್ತ ಗ್ರಾಮ ಅಭಿಯಾನಕ್ಕೆ ಗಂಗನರಸಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ರೈತರಿಗೆ ಯಾವುದೇ ಶುಲ್ಕವಿಲ್ಲದೇ, ಪೋಡಿ ಅಳತೆ ಮಾಡುವುದು. ಆರ್‌ಟಿಸಿ ಮತ್ತು ಭೂ ದಾಖಲೆಗಳಲ್ಲಿ ಇರುವ ಕ್ಷೇತ್ರದ ವ್ಯತ್ಯಾಸ ಸರಿಪಡಿಸುವುದು. ಗ್ರಾಮವಾರು ಬಾಕಿ ಇರುವ ಪೋಡಿ ಪ್ರಕರಣಗಳನ್ನು ಅಳತೆ ಮಾಡುವುದು ಹಾಗೂ ಬಹು ಮಾಲೀಕತ್ವದ ಪಹಣಿ ಪತ್ರಗಳನ್ನು ಹೊಂದಿರುವ ರೈತರಿಗೆ ಪ್ರತ್ಯೇಕ ಪಹಣಿ ನಕಾಶೆ ವಿತರಿಸುವುದು ಅಭಿಯಾನದ ಉದ್ದೇಶವಾಗಿದೆ ಎಂದು ವಿವರಿಸಿದರು.ಗ್ರಾಮದ ರೈತರು ತಾಲೂಕಿನ ಕಚೇರಿಗಳಿಗೆ ಪೋಡಿ ಅಳತೆ ಹಾಗೂ ಮುಂತಾದ ಕಾರ್ಯಗಳಿಗೆ ಅಲೆಯುವುದರಿಂದ ವೃಥಾ ಸಮಯ ಹಾಗೂ ಹಣ ವ್ಯರ್ಥವಾಗುತ್ತದೆ. ಅಲ್ಲದೇ ಕೃಷಿ ಕ್ಷೇತ್ರದ ಕೆಲಸಗಳು ತಾತ್ಕಾಲಿಕ ನಿಲುಗಡೆ ಆಗುವ ಸಾಧ್ಯತೆ ಇದೆ. ಅದನ್ನು ತಪ್ಪಿಸುವ ಸಲುವಾಗಿ ಪೋಡಿಮುಕ್ತ ಗ್ರಾಮ ಅಭಿಯಾನ ಪ್ರಾರಂಭವಾಗಿದೆ. ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ನಡೆಯಲಿರುವ ಈ ಕಾರ್ಯಕ್ರಮದ ಅನುಕೂಲಗಳನ್ನು ಗ್ರಾಮಸ್ಥರು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಗ್ರಾಮಗಳಲ್ಲಿ ತಮಟೆ ಬಾರಿಸಿ ರೈತರ ಗಮಕ್ಕೆ ತಂದರೂ, ಬೆರಳೆಣಿಕೆಯಷ್ಟು ಜನರು ಮಾತ್ರ ಸೇರಿರುವುದು ಬೇಸರದ ಸಂಗತಿ. ಸರ್ಕಾರವೇ ರೈತರ ಮನೆಗೆ ಬಂದು ಸೌಲಭ್ಯ ನೀಡಿದಾಗ ರೈತರು ಇದನ್ನು ಅಲಕ್ಷಿಸದೆ ಇದರ ಸದುಪಯೋಗ ಪಡೆದುಕೊಳ್ಳುಬೇಕು ಎಂದರು.ಈ ಸಂದರ್ಭದಲ್ಲಿ ಸರ್ವೆ ಸೂಪರ್‌ವೈಜರ್ ವಿಜಯ ಪ್ರಕಾಶ್, ಆರ್‌ಐ ಆರ್. ಸಮೀರ್ ಅಹಮದ್, ಗ್ರಾಮ ಲೆಕ್ಕಾಧಿಕಾರಿ ಶಿವಕುಮಾರ್, ಗ್ರಾಮ ಸಹಾಯಕ ಅಜ್ಜಪ್ಪ, ಗ್ರಾಮಸ್ಥರಾದ ಗೌಡ್ರು ಅಬ್ಲೂರಪ್ಪ, ಗೌಡ್ರು ಮಲ್ಲಿಕಾರ್ಜುನ, ಗೋಣೆಪ್ಪ, ಗುತ್ತೂರ ರೇವಣಸಿದ್ದಪ್ಪ ಗೌಡ್ರು, ಕರಿಗೌಡಪ್ಪ, ಬವರಾಜ್, ಹನುಮಂತಪ್ಪ, ಮತ್ತಿತರರು ಉಪಸ್ಥಿತರಿದ್ದರು.