ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಗೆ ಅದ್ಧೂರಿ ಸಿದ್ಧತೆ

KannadaprabhaNewsNetwork | Published : Sep 13, 2024 1:33 AM

ಸಾರಾಂಶ

ತಾಲೂಕಿನಾದ್ಯಂತ ಶಾಲಾ,ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು,ಪ್ರಾಚಾರ್ಯರು,ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ, ಎಲ್ಲ ಇಲಾಖೆಯ ಸಿಬ್ಬಂದಿ, ವಿವಿಧ ಕನ್ನಡಪರ ಸಂಘಟನೆಗಳು, ದಲಿತಪರ ಸಂಘಟನೆಗಳು, ರೈತ ಸಂಘಟನೆಗಳು,ಸ್ತ್ರೀಶಕ್ತಿ ಮಹಿಳಾ ಸ್ವ ಸಹಾಯ ಸಂಘಗಳು ಭಾಗಿ

ಲಕ್ಷ್ಮೇಶ್ವರ: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಬೀದರದಿಂದ ಚಾಮರಾಜನಗರವರೆಗೆ ನಡೆಯಲಿರುವ ಮಾನವ ಸರಪಳಿ ಕಾರ್ಯಕ್ರಮಕ್ಕೆ ತಾಲೂಕಿನಾದ್ಯಂತ ಜನಪ್ರತಿನಿಧಿ, ಸ್ಥಳೀಯ ಜನ ಪ್ರತಿನಿಧಿ, ಸಂಘಟನೆ, ಸಂಘ ಸಂಸ್ಥೆ,ಶಾಲಾ ಕಾಲೇಜು ಹಾಗೂ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸೆ.೧೫ ರಂದು ಭಾನುವಾರ ಬೆಳಗ್ಗೆ ೯ಗಂಟೆಗೆ ತಾಲೂಕಿ ಬಾಲೆಹೊಸೂರ ಗ್ರಾಮದಿಂದ ಪ್ರಾರಂಭವಾಗುವ ಬೃಹತ್ ಮಾನವ ಸರಪಳಿ ಅಭೂತಪೂರ್ವ ಯಶಸ್ಸು ಕಾಣುವ ವಿಶ್ವಾಸವಿದೆ ಎಂದು ತಹಸೀಲ್ದಾರ ವಾಸುದೇವ ಸ್ವಾಮಿ ಹೇಳಿದರು.

ತಹಸೀಲ್ದಾರ ಕಚೇರಿಯಲ್ಲಿ ಗುರುವಾರ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಮಾನವ ಸರಪಳಿ ನಿರ್ಮಿಸುವ ಕುರಿತು ವಿವಿಧ ಸಂಘಟನೆಗಳ, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ರಾಜ್ಯಾದ್ಯಂತ ಸೆ.೧೫ ರಂದು ಬೆಳಗ್ಗೆ ೯ಗಂಟೆಗೆ ಮಾನವ ಸರಪಳಿ ನಿರ್ಮಿಸಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮ ಆಚರಿಸಲು ಸರ್ಕಾರ ನಿರ್ದೇಶನ ನೀಡಿದಂತೆ ತಾಲೂಕಿನ ಬಾಲೆಹೊಸೂರ ಸರಹದ್ದಿನಿಂದ ಪ್ರಾರಂಭವಾಗಿ ಸೂರಣಗಿ,ನೆಲೋಗಲ್ ಗ್ರಾಮದ ಸರಹದ್ದಿನವರೆಗೆ ಸುಮಾರು ೧೮ ಕಿಮಿ ಮಾನವ ಸರಪಳಿ ನಿರ್ಮಾಣ ಮಾಡಲಾಗುವುದು.ತಾಲೂಕಿನಾದ್ಯಂತ ಶಾಲಾ,ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು,ಪ್ರಾಚಾರ್ಯರು,ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ, ಎಲ್ಲ ಇಲಾಖೆಯ ಸಿಬ್ಬಂದಿ, ವಿವಿಧ ಕನ್ನಡಪರ ಸಂಘಟನೆಗಳು, ದಲಿತಪರ ಸಂಘಟನೆಗಳು, ರೈತ ಸಂಘಟನೆಗಳು,ಸ್ತ್ರೀಶಕ್ತಿ ಮಹಿಳಾ ಸ್ವ ಸಹಾಯ ಸಂಘಗಳು ಹಾಗೂ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಪಾಲ್ಗೊಳ್ಳಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಸುಮಾರು ೧೮-೨೦ಸಾವಿರ ಜನರು ಸೇರುವ ಮೂಲಕ ಯಶಸ್ವಿಗೊಳಿಸಲಿದ್ದಾರೆ.ಇದಕ್ಕಾಗಿ ತಾಲೂಕಾಡಳಿತ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ಈಗಾಗಲೇ ಗದಗ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿಪಂ ಕಾರ್ಯನಿರ್ವಹಾಕ ಅಧಿಕಾರಿ ಸಿ. ಭರತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ತಾಲೂಕು ವ್ಯಾಪ್ತಿಗೆ ಬರುವ ಸೂರಣಗಿ, ಬಾಲೆಹೊಸೂರು, ಸೂರಣಗಿ, ನೆಲೂಗಲ್ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಜನಪ್ರತಿನಿಧಿ, ಸಂಘ ಸಂಸ್ಥೆ, ಸಾರ್ವಜನಿಕರೊಂದಿಗೆ ಚರ್ಚೆ ನಡೆಸಿದ್ದು, ಎಲ್ಲ ಗ್ರಾಮಸ್ಥರು ಕಾರ್ಯಕ್ರಮ ಯಶಸ್ವಿಗೆ ಸಂಪೂರ್ಣ ಸಹಕಾರ ನೀಡುವದಾಗಿ ಭರವಸೆ ನೀಡಿದ್ದಾರೆ.

ಭಾನುವಾರ ಬೆಳಗ್ಗೆ ೯.೧೫ ಕ್ಕೆ ಸಂವಿಧಾನ ಪೀಠಿಕೆ ಓದುವದು, ಈ ವೇಳೆಯಲ್ಲಿ ರಾಷ್ಟ್ರಗೀತೆ, ಜೈಹಿಂದ್ ಘೋಷಣೆ ಮೊಳಗಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮಕ್ಕಳಿಗೆ ಹೋಗಿ ಬರಲು ವಾಹನಗಳ ವ್ಯವಸ್ಥೆ ಕಲ್ಪಿಸಿದ್ದು, ಎಲ್ಲರೂ ಸ್ವಯಂಪ್ರೇರಿತರಾಗಿ ಬನ್ನಿ ಅಭೂತಪೂರ್ವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ ಎಂದು ಕರೆ ನೀಡಿದರು.

ಈ ವೇಳೆ ತಾಪಂ ಇ.ಓ. ಕೃಷ್ಣಪ್ಪ ಧರ್ಮರ, ಪಿಎಸ್ಐ ಈರಪ್ಪ ರಿತ್ತಿ, ಗ್ರೇಡ್೨ ತಹಸೀಲ್ದಾರ್‌ ಮಂಜುನಾಥ ಅಮಾಸಿ, ಉಪತಹಸೀಲ್ದಾರ್‌ ಪ್ರಶಾಂತ ಕಿಮಾಯಿ, ಪ್ರಶಾಂತ ಸನದಿ, ಹಿರಿಯ ಆರೋಗ್ಯ ನಿರೀಕ್ಷಕ ಬಿ.ಎಸ್. ಹಿರೇಮಠ, ಸಾರಿಗೆ ಘಟಕ ವ್ಯವಸ್ಥಾಪಕಿ ಸವಿತಾ ಆದಿ, ಪುರಸಭೆಯ ಕಂದಾಯ ನಿರೀಕ್ಷಕ ಶಿವಾನಂದ ಅಜ್ಜಣ್ಣವರ, ಜೆ.ಎ. ಮನಿಯಾರ, ಈಶ್ವರ ಮೇಡ್ಲೇರಿ ಸೇರಿದಂತೆ ಇದ್ದರು.

Share this article