ಭದ್ರಾ ಬಲದಂಡೆಯ ಕಾಲುವೆ ಸೀಳಿ ನೀರನ್ನು ಹರಿಸಬೇಡಿ

KannadaprabhaNewsNetwork |  
Published : Jun 14, 2025, 12:47 AM IST
ಪೋಟೋ: 13ಎಸ್‌ಎಂಜಿಕೆಪಿ01ಶಿವಮೊಗ್ಗದ ಪತ್ರಿಕಾಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡ ಕೆ.ಟಿ. ಗಂಗಾಧರ್ ಮಾತನಾಡಿದರು.  | Kannada Prabha

ಸಾರಾಂಶ

ಶಿವಮೊಗ್ಗ: ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಭದ್ರಾ ಜಲಾಶಯದಿಂದಲೇ ನೀರನ್ನು ಸರಬರಾಜು ಮಾಡಬೇಕೇ ಹೊರತು, ಭದ್ರಾ ಬಲದಂಡೆಯ ಕಾಲುವೆಯನ್ನು ಸೀಳಿ ಕಾಲುವೆಯ ಮೂಲಕ ನೀರನ್ನು ಹರಿಸಬಾರದು ಎಂದು ರೈತ ಮುಖಂಡ ಕೆ.ಟಿ.ಗಂಗಾಧರ್ ಆಗ್ರಹಿಸಿದರು.

ಶಿವಮೊಗ್ಗ: ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಭದ್ರಾ ಜಲಾಶಯದಿಂದಲೇ ನೀರನ್ನು ಸರಬರಾಜು ಮಾಡಬೇಕೇ ಹೊರತು, ಭದ್ರಾ ಬಲದಂಡೆಯ ಕಾಲುವೆಯನ್ನು ಸೀಳಿ ಕಾಲುವೆಯ ಮೂಲಕ ನೀರನ್ನು ಹರಿಸಬಾರದು ಎಂದು ರೈತ ಮುಖಂಡ ಕೆ.ಟಿ.ಗಂಗಾಧರ್ ಆಗ್ರಹಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಚಿಕ್ಕಮಗಳೂರು ತಾಲೂಕಿನ ಲಕ್ಯಾ ಹೋಬಳಿಯ ೭೪ ಗ್ರಾಮಗಳು, ಕಡೂರು ತಾಲೂಕಿನ 433 ಹಾಗೂ ತರೀಕೆರೆ ಪಟ್ಟಣ ಸೇರಿದಂತೆ ತಾಲೂಕು ವ್ಯಾಪ್ತಿಯ 273 ಗ್ರಾಮಗಳು ಮತ್ತು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣ ಮತ್ತು ಇತರೆ 346 ಜನವಸತಿಗಳಿಗೆ ಹಾಗೂ ತರೀಕೆರೆ ತಾಲೂಕಿನ 113 ಗ್ರಾಮಗಳಿಗೆ ಜಲಜೀವನ್ ಮಿಷನ್ ಯೋಜನೆ ಯಡಿ ಭದ್ರಾ ಜಲಾಶಯದಿಂದ ನೀರು ಸರಬರಾಜು ಮಾಡಲು ಜಾಕ್‌ವೆಲ್‌ಗೆ ನೀರು ಸಂಗ್ರಹಿಸಬೇಕಾಗಿದೆ. ಆದರೆ ಭದ್ರಾ ಜಲಾಶಯದಿಂದ ಜಾಕ್‌ವೆಲ್‌ಗೆ ನೀರು ಹರಿಸುವುದನ್ನು ಬಿಟ್ಟು ಭದ್ರಾ ಬಲದಂಡೆಯ ಕಾಲುವೆಯನ್ನು ಸೀಳಿ ಜಾಕ್‌ವೆಲ್‌ಗೆ ನೀರು ಹರಿಸುತ್ತಿರುವುದು ಅವೈಜ್ಞಾನಿಕವಾಗಿದೆ. ಹೀಗೆ ಕಾಲುವೆಯನ್ನು ಸೀಳುವುದರಿಂದ ಕಾಲುವೆಯಲ್ಲಿನ ನೀರಿನ ರಭಸ ಇಲ್ಲವಾಗಿ ಕೊನೆಯ ಭಾಗದ ರೈತರ ಜಮೀನುಗಳಿಗೆ ನೀರು ಹಾಯುವುದು ಸಾಧ್ಯವೇ ಇಲ್ಲವಾಗಿದೆ ಎಂದರು.

ಭದ್ರಾ ಕಾಲುವೆ ಪ್ರಮುಖವಾಗಿ ಅಚ್ಚುಕಟ್ಟುದಾರರ ಬೆಳೆಗಳಿಗೆ ನೀರುಣಿಸಲು ಇರುತ್ತದೆ. ಈಗಲೇ ಕೊನೆಯ ಭಾಗದ ರೈತರಿಗೆ ನೀರು ತಲುಪುವುದು ಕಷ್ಟವಾಗುತ್ತಿರುವಾಗ ಇದರ ಮಧ್ಯೆ ಭದ್ರಾ ಕಾಲುವೆಯನ್ನು ಸೀಳಿ ನೀರನ್ನು ಕುಡಿಯುವ ನೀರಿನ ಯೋಜನೆಗೆ ತೆಗೆದುಕೊಂಡು ಹೋದರೆ ರೈತರಿಗೆ ನೀರು ಇಲ್ಲದಂತಾಗುತ್ತದೆ. ಈ ಅವೈಜ್ಞಾನಿಕ ಯೋಜನೆ ಮತ್ತು ತೀರ್ಮಾನದಿಂದ ರೈತರು ತುಂಬಾ ಆತಂಕದಲ್ಲಿದ್ದಾರೆ. ಒಮ್ಮೆ ನಾಲೆಗೆ ಬಿಟ್ಟ ನೀರನ್ನು ನಡುವೆಯೇ ಈ ರೀತಿ ಬೇರೆ ಕಡೆ ವರ್ಗಾಯಿಸಿದರೆ ನೀರು ಮುಂದಕ್ಕೆ ಹೋಗುವುದಾದರೂ ಹೇಗೆ ಎಂದು ಪ್ರಶ್ನಿಸಿದರು

ಕುಡಿಯವ ನೀರಿನ ಯೋಜನೆಗೆ ನೀರು ಹರಿಸುವುದು ತಪ್ಪಲ್ಲ. ನೀರನ್ನು ಬಿಡುವುದು ನಮ್ಮ ಧರ್ಮ. ಆದರೆ ಈ ನೀರನ್ನು ಹೇಗೆ ಬಿಡಬೇಕು ಎಂಬ ತೀರ್ಮಾನ ಬಹಳ ಮುಖ್ಯ. ನಾಲೆಯಿಂದ ನೀರು ಬಿಡುವ ಬದಲು ನೇರವಾಗಿ ಅಣೆಕಟ್ಟಿನಿಂದ ನೀರು ಹರಿಸಬೇಕು. ಆಗ ಯಾವ ತೊಂದರೆಯೂ ಇರುವುದಿಲ್ಲ. ಆದ್ದರಿಂದ ಕೂಡಲೇ ಕಾಲುವೆಯಿಂದ ನೀರು ಹರಿಸುವುದನ್ನು ಬಿಟ್ಟು ಅಣೆಕಟ್ಟಿಯಿಂದ ನೇರವಾಗಿ ಜಾಕ್‌ವೆಲ್ ನೀರು ಹರಿಸಲಿ. ಅದರಲ್ಲೂ ಅಣೆಕಟ್ಟಿನಿಂದ ಸ್ವಲ್ಪ ದೂರದ ಕಾಲುವೆಯಿಂದಲೇ ನಾಲೆಯನ್ನು ಸೀಳಲಾಗಿದೆ ಎಂದು ಆರೋಪಿಸಿದರು.

ಇದು ಕೇವಲ ಗುತ್ತಿಗೆದಾರನ ಹಣ ಉಳಿಸಲು ಮಾಡಿರುವ ಅತ್ಯಂತ ಕೆಟ್ಟ ಯೋಜನೆಯಾಗಿದೆ. ಭದ್ರಾ ಬಲದಂಡೆ ಕಾಲುವೆಯಲ್ಲಿ ರೈತರ ಜೀವ-ಜೀವನವೇ ಇದೆ. ಆದ್ದರಿಂದ ಅಧಿಕಾರಿಗಳು ಮತ್ತು ಸರ್ಕಾರ ಕೂಡಲೇ ಈ ಅವೈಜ್ಞಾನಿಕ ಯೋಜನೆಯನ್ನು ನಿಲ್ಲಿಸಬೇಕಾಗಿದೆ. ನೀರಾವರಿ ಮಂತ್ರಿಯೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ತಕ್ಷಣವೇ ಇದರ ಬಾದಕಗಳನ್ನು ಗಮನಿಸಿ, ಕೂಡಲೇ ಕಾಲುವೆಯಿಂದ ನೀರು ಹರಿಸುವುದನ್ನು ಬಿಟ್ಟು ನೇರವಾಗಿ ಅಣೆಕಟ್ಟಿನಿಂದ ನೀರು ಹರಿಸಬೇಕು. ಇಲ್ಲದಿದ್ದರೆ ಅಚ್ಚುಕಟ್ಟು ರೈತರು ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಯಶವಂತರಾವ್ ಘೋರ್ಪಡೆ, ಕೆ.ಎಸ್.ಪುಟ್ಟಪ್ಪ , ಸೀನಪ್ಪ ಹಾರೋಬೆನವಳ್ಳಿ, ಬಸವರಾಜ್ ಎಮ್ಮೆಹಟ್ಟಿ, ಕೃಷ್ಣಮೂರ್ತಿ ಮಂಜುನಾಥ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯಕ್ತಿಯ ಅಕ್ರಮ ಬಂಧನದಲ್ಲಿಟ್ಟಿದ್ದಕ್ಕೆ ಸರ್ಕಾರಕ್ಕೆ ದಂಡ!
ಯಶವಂತಪುರ ಮೆಟ್ರೋ ಪ್ರವೇಶದ್ವಾರ ಸ್ಥಳಾಂತರ