ಶಿಕಾರಿಪುರ: ಸಸಿ ನೆಡುವಾಗ ತೋರಿಸುವ ಆಸಕ್ತಿಯನ್ನು ಬೆಳೆದು ಮರವಾಗಿಸುವ ರೀತಿಯಲ್ಲಿ ಪೋಷಿಸುವ ಜವಾಬ್ದಾರಿಯನ್ನು ನಾಗರಿಕರು ತೋರಿದಾಗ ಮಾತ್ರ ಪರಿಸರ ಅಸಮತೋಲನವನ್ನು ನಿವಾರಿಸಲು ಸಾಧ್ಯ ಎಂದು ಇಲ್ಲಿನ ಪುರಸಭಾಧ್ಯಕ್ಷೆ ಸುನಂದಾ ಮಂಜುನಾಥ್ ಹೇಳಿದರು.
ನಮ್ಮ ಪರಿಸರದ ಸ್ವಚ್ಛತೆ ಕಾಪಾಡುವುದು, ಹಸಿರನ್ನು ಬೆಳಿಸಿ ಉಳಿಸುವುದು, ಮಾಲಿನ್ಯವನ್ನು ತಡೆಗಟ್ಟುವುದು ಹಾಗೂ ಭೂಮಿ ಮೇಲಿರುವ ಪ್ರತಿ ಜೀವಿಗೂ ಸುಸ್ಥಿರ ಜೀವನಕ್ಕೆ ನೆರವಾಗಲು ಪರಿಸರವನ್ನು ಅಣಿಗೊಳಿಸುವುದು ಈ ದಿನದ ಆಚರಣೆಯ ಉದ್ದೇಶವಾಗಿದೆ ಎಂದ ಅವರು, ಪ್ರತಿಯೊಬ್ಬರೂ ತಾಯಿಯ ಹೆಸರಿನಲ್ಲಿ ಗಿಡವನ್ನು ನೆಡುವಂತೆ ಕರೆ ನೀಡಿದರು.
ಇತ್ತೀಚಿನ ದಿನದಲ್ಲಿ ಪರಿಸರ ದಿನಾಚರಣೆ ಕೇವಲ ಸಾಂಕೇತಿವಾಗುತ್ತಿದ್ದು, ಕೇವಲ ದಿನಾಚರಣೆಗಾಗಿ ಸಸಿ ನೆಡುವ ರೀತಿಯಲ್ಲಿ ಸೀಮಿತವಾಗದೆ ನೆಟ್ಟ ಸಸಿ ಬೆಳೆದು ಮರವಾಗುವ ರೀತಿಯಲ್ಲಿ ನೀರು ಹಾಕಿ ಪೋಷಿಸುವ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾಗಿದೆ ಎಂದರು.ಕೇವಲ ಸಸಿ ನೆಡುವುದಲ್ಲದೆ ಅವುಗಳ ರಕ್ಷಣೆ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ತೋರಬೇಕಾಗಿದೆ. ಸಸಿ ಬೆಳೆದು ಮರವಾಗಿಸಿದಲ್ಲಿ ಮಾತ್ರ ಪರಿಸರ ಅಸಮತೋಲನ ನಿವಾರಿಸಲು ಸಾಧ್ಯ ಈ ದಿಸೆಯಲ್ಲಿ ಮಹಿಳೆಯರು ವೃಕ್ಷ ಸಂರಕ್ಷಣೆಗೆ ಹೆಚ್ಚಿನ ಮಹತ್ವ ನೀಡಬೇಕಾಗಿದೆ ಎಂದು ಹೇಳಿದರು.
ಪುರಸಭೆ ಉಪಾಧ್ಯಕ್ಷೆ ರೂಪ ಮಂಜುನಾಥ್ ಮಾತನಾಡಿ, ಗಿಡಗಳನ್ನು ನೆಡುವ ಮೂಲಕ, ಮರುಬಳಕೆಯ ಕಾರ್ಯಕ್ರಮಗಳ ಮೂಲಕ, ಏಕ ಬಳಕೆ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸುವ ಶಪಥ ಮಾಡುವ ಮೂಲಕ ಜನತೆ ಈ ದಿನವನ್ನು ಆಚರಿಸಬೇಕು ಎಂದು ಕರೆ ನೀಡಿದರು.ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್, ಮುಖ್ಯಾಧಿಕಾರಿ ಭರತ್, ಸಮುದಾಯ ಸಂಘಟನಾಧಿಕಾರಿ ಸುರೇಶ್, ವ್ಯವಸ್ಥಾಪಕ ರಾಜಕುಮಾರ್, ಸೈಯದ್ ನವಾಜ್, ಪರಶುರಾಮಪ್ಪ, ದೇವರಾಜ್, ನವೀನ ಕುಮಾರ್, ಶ್ರೀನಿವಾಸ, ಪ್ರಮೋದ್, ಗೀತಾ, ಪ್ರಿಯಾಂಕಾ, ಯಶೋಧ, ದೇವರಾಜ ಮತ್ತಿತರರಿದ್ದರು.