ಹರಪನಹಳ್ಳಿ: ವಿದ್ಯಾರ್ಥಿಗಳು ಪ್ರೀತಿ, ಪ್ರೇಮದ ಆಕರ್ಷಣೆಗೆ ಒಳಗಾಗಿ ತಮ್ಮ ಭವಿಷ್ಯ ಹಾಳು ಮಾಡಿಕೊಳ್ಳದೇ ತಂದೆ-ತಾಯಿಯ ಪ್ರೀತಿಗೆ ದ್ರೋಹ ಮಾಡದೆ, ಮೊದಲು ಶಿಕ್ಷಣದ ಮೂಲಕ ಸಾಧನೆ ಮಾಡಬೇಕು ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹೇಳಿದರು.
ವಿದ್ಯಾರ್ಥಿ ಜೀವನವು ಭವಿಷ್ಯ ರೂಪಿಸಿಕೊಳ್ಳುವ ಮಹತ್ವದ ಹಂತವಾಗಿದೆ. ಈ ಅವಧಿಯಲ್ಲಿ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು. ಅನಗತ್ಯ ಆಆಕರ್ಷಣೆಗಳಿಗೆ ಒಳಗಾಗದೇ ಸಮಯ ಸದುಪಯೋಗಪಡಿಸಿಕೊಂಡು ಗುರಿ ಸಾಧನೆಗೆ ನಿರಂತರ ಪ್ರಯತ್ನಿಸಬೇಕು. ಉತ್ತಮ ಶಿಕ್ಷಣ ಪಡೆದು ಸ್ವಾವಲಂಬಿಗಳಾದ ಬಳಿಕ ತಮ್ಮ ಜೀವನದ ನಿರ್ಧಾರ ತೆಗೆದುಕೊಳ್ಳಬಹುದು. ತಂದೆ-ತಾಯಿಯ ತ್ಯಾಗ ಮತ್ತು ಪರಿಶ್ರಮ ಅರಿತುಕೊಂಡು ಜವಾಬ್ದಾರಿಯುತ ನಾಗರಿಕರಾಗಿ ರೂಪುಗೊಳ್ಳಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳ ಜತೆಗೆ ಪಠ್ಯಪೂರಕ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಇವು ವ್ಯಕ್ತಿತ್ವ ವಿಕಸನ, ನಾಯಕತ್ವ ಗುಣ ಹಾಗೂ ಆತ್ಮವಿಶ್ವಾಸ ಬೆಳೆಸಲು ಸಹಕಾರಿಯಾಗುತ್ತವೆ. ಶಿಸ್ತು, ಪರಿಶ್ರಮ ಮತ್ತು ನಿರಂತರ ಕಲಿಕೆಯ ಮೂಲಕ ಜೀವನದಲ್ಲಿ ಉನ್ನತ ಸಾಧನೆ ಮಾಡಬೇಕು ಎಂದು ತಿಳಿಸಿದರು.ಡಿವೈಎಸ್ಪಿ ಡಾ. ಸಂತೋಷ್ ಚಾವ್ಹಾಣ್ ಮಾತನಾಡಿ, ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ವಿದ್ಯಾರ್ಥಿಗಳ ಜೀವನದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಮೊಬೈಲ್ ಬಳಕೆಯಿಂದ ಅನೇಕ ಯುವಕರು ದಾರಿ ತಪ್ಪುತ್ತಿದ್ದಾರೆ. ಪ್ರೀತಿ, ಪ್ರೇಮ ಹಾಗೂ ಪ್ರಣಯದ ಆಕರ್ಷಣೆಗೆ ಒಳಗಾಗಿ ಭವಿಷ್ಯ ಹಾಳು ಮಾಡಿಕೊಳ್ಳದೇ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿ ಯಶಸ್ಸಿನ ಗುರಿ ಸಾಧಿಸಬೇಕು ಎಂದರು.
ಈ ಸಂದರ್ಭದಲ್ಲಿ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಕಮ್ಮಾರ ಮಂಜುನಾಥ್, ಉಪನ್ಯಾಸಕ ಜಿ.ತಿಪ್ಪೇಸ್ವಾಮಿ, ಡಾ.ಭೀಮಪ್ಪ, ಡಾ.ಎಂ. ಸುರೇಶ, ಡಾ.ಕಲ್ಲೇಶ್, ಉಮಾದೇವಿ, ಡಾ.ಹರೀಶ, ಗೋಣಿಬಸಪ್ಪ, ಲಾವಣ್ಯ, ಜಿ.ಕುಸುಮಾ, ಕೆ.ಸುನೀತಾ ದೇವಿ, ರಿಮಾ ಎಲ್. ಕೋಟ್ಯಾನ್, ಗುಡಿಹಳ್ಳಿ ಸುರೇಶ, ಶೇಖರ್ ನಾಯ್ಕ್, ಪ್ರಭು ಸೇರಿದಂತೆ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ಉಪಸ್ಥಿತರಿದ್ದರು.