ಪೊಲೀಸ್‌ ವೃತ್ತಿಯಲ್ಲಿ ಕರ್ತವ್ಯ ಮರೆಯದಿರಿ

KannadaprabhaNewsNetwork | Published : Apr 3, 2025 12:35 AM

ಸಾರಾಂಶ

ಪೊಲೀಸ್ ಇಲಾಖೆಯಲ್ಲಿ ನಾವು ಮಾಡುವ ಕೆಲಸ ನಿಷ್ಠೆಯಿಂದ ಮಾಡಬೇಕು. ಪ್ರಶಸ್ತಿಗಾಗಿ ನಾವು ಕೆಲಸ ಮಾಡಬಾರದು

ಕೊಪ್ಪಳ: ಪೊಲೀಸ್ ವೃತ್ತಿಯಲ್ಲಿ ಎಂದಿಗೂ ಕರ್ತವ್ಯ ಮರೆಯಬಾರದು ಎಂದು ನಿವೃತ್ತ ಪಿಎಸ್‌ಐ ವಿರುಪಯ್ಯ ಹೇಳಿದರು.

ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಪೊಲೀಸ್ ಇಲಾಖೆಯಿಂದ ಜರುಗಿದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪೊಲೀಸ್ ಇಲಾಖೆಯಲ್ಲಿ ೩೧ ವರ್ಷಗಳ ಕಾಲ ನಾನು ಸೇವೆ ಸಲ್ಲಿಸಿದ್ದೇನೆ. ಈ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದು ನನಗೆ ತೃಪ್ತಿ ತಂದಿದೆ. ನಾನೂ ಆರಂಭದಲ್ಲಿ ಶಿಕ್ಷಕ ಆಗಬೇಕು ಎಂದು ಕನಸು ಕಂಡಿದ್ದೆ.೨೯ನೇ ವರ್ಷಕ್ಕೆ ನನಗೆ ಪೊಲೀಸ್ ನೌಕರಿ ದೊರೆಯಿತು. ಅದೇ ನೌಕರಿಯಲ್ಲಿ ಸಂತೋಷದಿಂದ ಕೆಲಸ ಮಾಡಿದ್ದೇನೆ.ಇದೇ ನನ್ನ ಪುಣ್ಯವೆಂದು ೩೧ ವರ್ಷಗಳ ಕಾಲ ಜನ ಸೇವೆ ಮಾಡಿ ಸಂತೋಷದಿಂದ ನಿವೃತ್ತಿಯಾಗಿದ್ದೇನೆ. ಕರ್ತವ್ಯದಲ್ಲಿದ್ದ ವೇಳೆ ಹಲವು ತೊಂದರೆಗಳು ಬರುತ್ತವೆ. ಅವುಗಳನ್ನು ನಿರ್ಲಕ್ಷ್ಯ ಮಾಡದೇ ಸಂತೃಪ್ತಿಯಿಂದ ಸೇವೆ ಮಾಡಬೇಕು. ವೃತ್ತಿ ಬದುಕಿನಲ್ಲಿ ಎಲ್ಲವನ್ನೂ ಸಹಿಸಿಕೊಂಡು ಕೆಲಸ ಮಾಡಬೇಕು ಎಂದರು.

ಪೊಲೀಸ್ ಇಲಾಖೆಯಲ್ಲಿ ನಾವು ಮಾಡುವ ಕೆಲಸ ನಿಷ್ಠೆಯಿಂದ ಮಾಡಬೇಕು. ಪ್ರಶಸ್ತಿಗಾಗಿ ನಾವು ಕೆಲಸ ಮಾಡಬಾರದು. ಈ ಇಲಾಖೆಯಲ್ಲಿ ಎಲ್ಲರಿಗೂ ಒತ್ತಡ ಇರುತ್ತವೆ. ನಮ್ಮ ಕರ್ತವ್ಯ ಒತ್ತಡ ಎಂದು ತಿಳಿಯಬಾರದು. ಹಿರಿಯ ಅಧಿಕಾರಿಗಳು ಕೊಟ್ಟ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸಬೇಕು. ನಮ್ಮದು ಸಾರ್ವಜನಿಕ ಸೇವೆ ಕೊಡುವ ಕಾಯಕವಾಗಿದೆ. ಜನರ ಸಮಸ್ಯೆ ಬಂದಾಗ ಅವರಿಗೆ ನ್ಯಾಯ ಸಿಗಬೇಕು. ಬಡವರಿಗೆ ಕನಿಷ್ಟ ನ್ಯಾಯ ಒದಗಿಸುವ ಕೆಲಸ ಮಾಡಬೇಕು ಎಂದರು.

ಪೊಲೀಸ್ ಎಂದರೆ ಶಿಸ್ತು, ನಮ್ಮ ಶಿಸ್ತು ನಾವು ಎಂದೂ ಮರೆಯಬಾರದು. ಹಿರಿಯ ಅಧಿಕಾರಿಗಳು ಕೆಲಸ ಹೇಳುತ್ತಾರೆ ಎಂದು ನಾವು ಒತ್ತಡಕ್ಕೆ ಒಳಗಾಗದೆ ಕರ್ತವ್ಯ ನಿರ್ವಹಿಸಬೇಕು.ಕುಟುಂಬದ ಜತೆಗೂ ಕಾಲ ಕಳೆಯಿರಿ, ದುಶ್ಚಟಕ್ಕೆ ಬಲಿಯಾಗದೇ ಮಕ್ಕಳೊಂದಿಗೆ ನೆಮ್ಮದಿಯಿಂದ ಜೀವನ ಸಾಗಿಸಬೇಕು. ಜನರೇ ನಮ್ಮ ಕರ್ತವ್ಯಕ್ಕೆ ಅಂಕ ಕೊಡುವಂತೆ ಇರಬೇಕು. ಹಿಂದೆಲ್ಲ ನಾವು ಸೈಕಲ್‌ನಲ್ಲಿ ಹಳ್ಳಿ ಹಳ್ಳಿಗೆ ಹೋಗುತ್ತಿದ್ದೆವು. ಈಗ ೧೧೨ಗೆ ಕರೆ ಮಾಡಿದರೆ ಎಲ್ಲವೂ ಸ್ಥಳದಲ್ಲಿಯೇ ಸಮಸ್ಯೆ ಬಗೆಹರಿಯಲಿದೆ. ನಾವು ಒಳ್ಳೆಯ ಹೆಸರು ತಂದರೆ ನಮ್ಮ ಇಲಾಖೆಗೆ ಕೀರ್ತಿ ಬರುತ್ತದೆ. ನಮಗೆ ಯಾವುದೇ ಪ್ರಶಸ್ತಿ ಬೇಡ, ಪೊಲೀಸ್ ಇಲಾಖೆಯಲ್ಲಿ ನನ್ನನ್ನು ಕರೆಯಿಸಿ ಅತಿಥಿಯನ್ನಾಗಿ ಮಾಡಿದ್ದಾರೆ ಅದೇ ನಮಗೆ ದೊಡ್ಡ ಪ್ರಶಸ್ತಿಯಾಗಿದೆ. ಇದಕ್ಕಿಂತ ದೊಡ್ಡ ಪ್ರಶಸ್ತಿಯು ಮತ್ತೊಂದಿಲ್ಲ ಎಂದರು.

ಎಸ್ಪಿ ಡಾ. ರಾಮ್ ಎಲ್ ಅರಸಿದ್ದಿ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷದಂದು ಪೊಲೀಸ್ ಧ್ವಜ ದಿನಾಚರಣೆ ಆಚರಿಸಲಾಗುತ್ತಿದೆ. ೧೯೬೫ ಏ. ೨ ರಂದು ಕರ್ನಾಟಕ ಪೊಲೀಸ್ ಕಾಯ್ದೆ ಜಾರಿ ಬಂದಿದ್ದು, ಆ ನೆನಪಿಗಾಗಿ ಈ ಧ್ವಜ ದಿನಾಚರಣೆ ಆಚರಿಸಲಾಗುತ್ತಿದೆ. ಈ ನಿಮಿತ್ತ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ಗೌರವ ಸಲ್ಲಿಸಲು ಈ ದಿನಾಚರಣೆ ಆಚರಿಸಲಾಗುತ್ತಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಅವಿಸ್ಮರಣೀಯವಾಗಿ ಸೇವೆ ಸಲ್ಲಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.ರಾಜ್ಯ ಪೊಲೀಸ್ ಕಲ್ಯಾಣ ನಿಧಿ ಧ್ವಜ ಮಾರಾಟ ಮಾಡಿ ನಿಧಿ ಸಂಗ್ರಹಿಸಲಾಗುತ್ತಿದೆ. ಇದರಲ್ಲಿ ಶೇ.೫೦ ರಷ್ಟು ಹಣ ಪೊಲೀಸರ ಆರೋಗ್ಯಕ್ಕಾಗಿ ಬಳಕೆ ಮಾಡಲಾಗುತ್ತಿದ್ದರೆ ಉಳಿದ ಶೇ.೫೦ ರಷ್ಟು ಹಣ ನಿವೃತ್ತ ಪೊಲೀಸ್ ನೌಕರರ ಕಲ್ಯಾಣ ನಿಧಿ ಜಮೆ ಮಾಡಿ ನಿವೃತ್ತ ಪೊಲೀಸರ ಹಾಗೂ ಆ ಕುಟುಂಬದ ವೈದ್ಯಕೀಯ ಹಾಗೂ ನಿಧನದ ಕಾಲದಲ್ಲಿ ಹಣ ವಿತರಿಸುತ್ತಿದೆ ಬಂದಿದೆ. ನಿವೃತ್ತ ಪೊಲೀಸ್ ಅಧಿಕಾರಿಗಳಿಗೆ ಆರೋಗ್ಯ ಭಾಗ್ಯ ಯೋಜನೆ ಆರಂಭಿಸಲಾಗಿದ್ದು, ಕೊಪ್ಪಳ ಜಿಲ್ಲಾ ಪೊಲೀಸ್ ಘಟಕದಲ್ಲಿ ೨೦೨೪-೨೫ನೇ ಸಾಲಿನಲ್ಲಿ ೪೧ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಆರೋಗ್ಯ ಭಾಗ್ಯ ಯೋಜನೆಯಡಿ ಚಿಕಿತ್ಸೆ ಪಡೆದಿದ್ದಾರೆ. ಪ್ರಸ್ತುತ ಸಾಲಿನಲ್ಲಿ ಕ್ಷೇಮ ನಿಧಿಯಿಂದ ವೈದ್ಯಕೀಯ ಚಿಕಿತ್ಸೆಗೆ ೧೧೨ಅರ್ಜಿಗಳು ಬಂದಿದ್ದು, ೧೧೨ಅರ್ಜಿ ಇತ್ಯರ್ಥ ಮಾಡಿ ೧೦,೭೩,೮೨೪ ರೂ. ಧನಸಹಾಯ ಒದಗಿಸಲಾಗಿದೆ. ಪ್ರಸ್ತುತ ಅನಾರೋಗ್ಯ ಮತ್ತು ವಯೋಸಹಜ ಕಾಯಿಲೆಯಿಂದ ಮರಣ ಹೊಂದಿದ ೧೫ ಮೃತ ಕುಟುಂಬಕ್ಕೆ ತಲಾ ₹೧೦ ಸಾವಿರ ಹಣ ಅಂತ್ಯ ಸಂಸ್ಕಾರಕ್ಕೆ ಒದಗಿಸಲಾಗಿದೆ. ಪ್ರಸ್ತುತ ನಿವೃತ್ತ ಪೊಲೀಸ್ ನೌಕರರ ಕ್ಷೇಮ ನಿಧಿಯಲ್ಲಿ ನಿಶ್ಚಿತ ₹೯೯ ಲಕ್ಷ ಹಣವಿದ್ದು, ಉಳಿತಾಯ ಖಾತೆಯಲ್ಲಿ ₹೧೫ ಲಕ್ಷ ಜಮೆ ಇರುತ್ತದೆ. ಪೊಲೀಸರ ಅವಿಸ್ಮರಣೀಯ ಸೇವೆಗೆ ಈ ಹಣ ವಿನಿಯೋಗಿಸಲಾಗುತ್ತಿದೆ. ಕೊಪ್ಪಳ ಜಿಲ್ಲೆಯಿಂದ ಈ ವರ್ಷ ಮುಖ್ಯಮಂತ್ರಿಗಳ ಪದಕಕ್ಕೆ ಮೂವರು ಆಯ್ಕೆಯಾಗಿದ್ದು ಅವರಿಗೆ ಅಭಿನಂದನೆ ಸಲ್ಲಿಸುವೆ ಎಂದರು.

ಹೆಚ್ಚುವರಿ ಎಸ್ಪಿ ಹೇಮಂತಕುಮಾರ, ಡಿಎಸ್‌ಪಿ, ವಿವಿಧ ಠಾಣೆಗಳ ಪಿಎಸ್‌ಐ ಸೇರಿ ಸಿಬ್ಬಂದಿಗಳು, ಲಿಪಿಕ ಸಿಬ್ಬಂದಿ ಸೇರಿ ನಿವೃತ್ತ ಪೊಲೀಸ್ ಅಧಿಕಾರಿಗಳ ಕುಟುಂಬ ವರ್ಗವು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ಸನ್ಮಾನಿಸಲಾಯಿತು.

Share this article