ಯುವ ಸಿಬ್ಬಂದಿಗಳೇ ಪೊಲೀಸ್‌ ಇಲಾಖೆಗೆ ಬೆನ್ನೆಲುಬು: ನಿವೃತ್ತ ಪಿಎಸ್‌ಐ ಎಸ್.ಎಸ್. ಜಕ್ಕನಗೌಡ್ರ

KannadaprabhaNewsNetwork |  
Published : Apr 03, 2025, 12:35 AM IST
ಹುಬ್ಬಳ್ಳಿಯ ಕಾರವಾರ ರಸ್ತೆಯ ಹಳೆಯ ಸಶಸ್ತ್ರ ಮೀಸಲು ಪಡೆಯ ಕವಾಯತು ಮೈದಾನದಲ್ಲಿ ಬುಧವಾರ ಹು-ಧಾ ಪೊಲೀಸ್ ಆಯುಕ್ತಾಲಯದಿಂದ ಪೊಲೀಸ್ ಧ್ವಜ ದಿನಾಚರಣೆ ಆಚರಿಸಲಾಯಿತು. | Kannada Prabha

ಸಾರಾಂಶ

ಯುವ ಸಿಬ್ಬಂದಿಗಳ ಜ್ಞಾನ, ಶಕ್ತಿಯು ಪೊಲೀಸ್‌ ಇಲಾಖೆಗೆ ಬೆನ್ನಲುಬಾಗಿದೆ. ದೇಹದಲ್ಲಿ ಶಕ್ತಿ ಇದ್ದಾಗಲೇ ಮಹತ್ತರ ಸಾಧನೆ ಮಾಡಲು ಸಾಧ್ಯ ಎಂಬ ಅರಿವು ಪ್ರತಿಯೊಬ್ಬ ಪೊಲೀಸರಲ್ಲಿರಬೇಕು ಎಂದು ನಿವೃತ್ತ ಪಿಎಸ್‌ಐ ಎಸ್.ಎಸ್. ಜಕ್ಕನಗೌಡ್ರ ಹೇಳಿದರು.

ಹುಬ್ಬಳ್ಳಿ: ಯುವ ಸಿಬ್ಬಂದಿಗಳ ಜ್ಞಾನ, ಶಕ್ತಿಯು ಪೊಲೀಸ್‌ ಇಲಾಖೆಗೆ ಬೆನ್ನಲುಬಾಗಿದೆ. ದೇಹದಲ್ಲಿ ಶಕ್ತಿ ಇದ್ದಾಗಲೇ ಮಹತ್ತರ ಸಾಧನೆ ಮಾಡಲು ಸಾಧ್ಯ ಎಂಬ ಅರಿವು ಪ್ರತಿಯೊಬ್ಬ ಪೊಲೀಸರಲ್ಲಿರಬೇಕು ಎಂದು ನಿವೃತ್ತ ಪಿಎಸ್‌ಐ ಎಸ್.ಎಸ್. ಜಕ್ಕನಗೌಡ್ರ ಹೇಳಿದರು.

ಇಲ್ಲಿನ ಕಾರವಾರ ರಸ್ತೆಯ ಹಳೆಯ ಸಶಸ್ತ್ರ ಮೀಸಲು ಪಡೆಯ ಕವಾಯತು ಮೈದಾನದಲ್ಲಿ ಬುಧವಾರ ಹು-ಧಾ ಪೊಲೀಸ್ ಆಯುಕ್ತಾಲಯದಿಂದ ಆಯೋಜಿಸಿದ್ದ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಮಾತನಾಡಿದರು.

ಹಿರಿಯ, ಕಿರಿಯ ಅಧಿಕಾರಿಗಳನ್ನು ಒಗ್ಗೂಡಿಸಿ, ಅವರಿಗೆ ಧೈರ್ಯ ತುಂಬುವ ಕಾರ್ಯಕ್ರಮ ಇದಾಗಿದೆ. ರಾಜ್ಯದ ಪೊಲೀಸ್ ಇಲಾಖೆ ಅತ್ಯುತ್ತಮ ಕಾರ್ಯನಿರ್ವಹಣೆಯಿಂದ ಇಡೀ ರಾಷ್ಟ್ರದಲ್ಲಿ ಮನ್ನಣೆ ಗಳಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಉದ್ಯಮಿ, ಸ್ವರ್ಣ ಸಮೂಹ ಸಂಸ್ಥೆಯ ನಿರ್ದೇಶಕ ಡಾ. ವಿ.ಎಸ್.ವಿ. ಪ್ರಸಾದ ಮಾತನಾಡಿ, ಪೊಲೀಸ್ ಇಲಾಖೆ ಎಂದರೆ ಮೊದಲು ಸಾರ್ವಜನಿಕರಲ್ಲಿ ಭಯವಿತ್ತು. ಆದರೆ, ಇಂದು ಭಯದ ವಾತಾವರಣ ಮುಕ್ತವಾಗಿದೆ. ಪೊಲೀಸರು ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವಂತೆ ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಅವರು ನಿವೃತ್ತ ಪೊಲೀಸ್‌ ಅಧಿಕಾರಿಗಳ ಕಲ್ಯಾಣ ನಿಧಿಗೆ ₹1 ಲಕ್ಷ ಮೊತ್ತದ ಚೆಕ್‌ ವಿತರಿಸಿದರು.

ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾತನಾಡಿ, ಕಳೆದ ಸಾಲಿನಲ್ಲಿ ಪೊಲೀಸ್ ಪ್ರಧಾನ ಕಚೇರಿಯಿಂದ ₹33.50 ಲಕ್ಷ ಮೌಲ್ಯದ ಧ್ವಜಗಳಿಂದ ಸುಮಾರು ₹33.80 ಲಕ್ಷ ಮೊತ್ತವನ್ನು ಸಂಗ್ರಹಿಸಲಾಗಿತ್ತು. ಅದರಲ್ಲಿ ಶೇ. 50ರಷ್ಟು ಹಣವನ್ನು ನಿವೃತ್ತ ಪೊಲೀಸ್ ಅಧಿಕಾರಿಗಳ ಕಲ್ಯಾಣನಿಧಿ ಹಾಗೂ ಉಳಿದ ಶೇ. 50ರಷ್ಟು ಮೊತ್ತವನ್ನು ಕೇಂದ್ರ ನಿವೃತ್ತ ಪೊಲೀಸ್ ಅಧಿಕಾರಿಗಳ ಕಲ್ಯಾಣ ನಿಧಿಗೆ ಜಮೆ ಮಾಡಲಾಗಿದೆ. ಈ ಸಾಲಿನಲ್ಲಿ ₹37.55 ಲಕ್ಷ ಮೌಲ್ಯದ ಪೊಲೀಸ್ ಧ್ವಜಗಳನ್ನು ಹಂಚಿಕೆ ಮಾಡಲಾಗಿದೆ ಎಂದರು

ಪ್ರಾಧಿಕಾರದ ವಿಶೇಷ ಭೂಸ್ವಾಧೀನಾಧಿಕಾರಿ ದೇವರಾಜ, ಮಾರುತಿ ಬ್ಯಾಕೋಡ ಮಾತನಾಡಿದರು. ನಾಗರಾಜ ಪಾಟೀಲ ನೇತೃತ್ವದಲ್ಲಿ ಉತ್ತರ ವಿಭಾಗ, ದಕ್ಷಿಣ ವಿಭಾಗ, ಧಾರವಾಡ ವಿಭಾಗ, ಮಹಿಳಾ ವಿಭಾಗ, ಸಂಚಾರಿ ವಿಭಾಗ ಮತ್ತು ಸಿ.ಎ.ಆರ್. ವಿಭಾಗ ತಂಡಗಳು ಆಕರ್ಷಕ ಪಥ ಸಂಚಲನ ನಡೆಸಿದವು.

ಮಾಜಿ ಸಂಸದ ಪ್ರೊ. ಐ.ಜಿ. ಸನದಿ, ಡಿಸಿಪಿ ವೈ.ಕೆ. ಕಾಶಪ್ಪನವರ, ನಿವೃತ್ತ ಪೊಲೀಸ್ ಅಧಿಕಾರಿಗಳಾದ ರವಿ ನಾಯಕ, ಎ.ಎನ್. ಜೋಗಳೇಕರ್, ಆರ್.ಜಿ. ಅಂಗಡಿ, ಶಿವಶಂಕರ ಗಡಾದ, ಪ್ರಭುದೇವ, ಎ.ಬಿ. ಬಸರಗಿ, ಎಸ್.ಸಿ. ಯಾದವ, ಡಿ.ಡಿ. ಮಾಳಗಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಪೊಲೀಸ್ ಅಧಿಕಾರಿಗಳ ಕುಟುಂಬಸ್ಥರು, ಸಾರ್ವಜನಿಕರು ಪಾಲ್ಗೊಂಡಿದ್ದರು. ಪಿಐ ಮಾರುತಿ ಗುಳ್ಳಾರಿ ನಿರೂಪಿಸಿದರು. ಡಿಸಿಪಿ ಮಹಾನಿಂಗ ನಂದಗಾವಿ ವಂದಿಸಿದರು.

PREV

Recommended Stories

ರಾಹುಲ್‌ ಗಾಂಧಿ ಧರಣಿಗೆ 4500 ಪೊಲೀಸರ ಭದ್ರತೆ
ಹಳಿತಪ್ಪಿದ ಬೆಂಗಳೂರು ಉಪನಗರ ರೈಲು ಯೋಜನೆ : ಕೆ-ರೈಡ್ ಜತೆಗಿನ ಎಲ್‌ ಆ್ಯಂಡ್‌ ಟಿ ಗುತ್ತಿಗೆ ರದ್ದು