ರಾಜ್ಯಾದ್ಯಂತ ‘ಬೆಲೆ ಏರಿಕೆ’ ಹೋರಾಟ : ಬಿಎಸ್‌ವೈ

KannadaprabhaNewsNetwork | Updated : Apr 03 2025, 11:57 AM IST

ಸಾರಾಂಶ

ರಾಜ್ಯದ ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆಯ ನಿರ್ಧಾರದಿಂದ ಹಿಂದಕ್ಕೆ ಸರಿಯುವವರೆಗೆ ರಾಜ್ಯಾದ್ಯಂತ ಬಿಜೆಪಿ ಹೋರಾಟ ಹಮ್ಮಿಕೊಳ್ಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

 ಬೆಂಗಳೂರು : ರಾಜ್ಯದ ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆಯ ನಿರ್ಧಾರದಿಂದ ಹಿಂದಕ್ಕೆ ಸರಿಯುವವರೆಗೆ ರಾಜ್ಯಾದ್ಯಂತ ಬಿಜೆಪಿ ಹೋರಾಟ ಹಮ್ಮಿಕೊಳ್ಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಬುಧವಾರ ಫ್ರೀಡಂಪಾರ್ಕ್‌ನಲ್ಲಿ ಕಾಂಗ್ರೆಸ್‌ ಸರ್ಕಾರದ ಬೆಲೆ ಏರಿಕೆ ನೀತಿ ವಿರೋಧಿಸಿ ಬಿಜೆಪಿ ನಡೆಸಿದ ಅಹೋರಾತ್ರಿ ಧರಣಿಯಲ್ಲಿ ಭಾಗವಹಿಸಿ ಮಾತನಾಡಿ, ಸರ್ಕಾರವು ಅಭಿವೃದ್ಧಿ ಕಾರ್ಯಗಳನ್ನು ಸ್ಥಗಿತಗೊಳಿಸಿದೆ. ನೀರಾವರಿ ಕಾರ್ಯಗಳನ್ನು ಕೈಗೊಂಡಿಲ್ಲ. ಬೆಲೆ ಏರಿಕೆ ಮೂಲಕ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಕಾಂಗ್ರೆಸ್‌ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರೆಯುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ಕಿಡಿಕಾರಿದರು.

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುತ್ತೇವೆ. ಸರ್ಕಾರ ಜನಹಿತ ಮರೆತು ಒಂದು ರೀತಿ ತುಘಲಕ್ ದರ್ಬಾರ್ ಮಾಡುತ್ತಿದ್ದು, ಇದನ್ನು ಪಕ್ಷದ ನಾಯಕರು, ಕಾರ್ಯಕರ್ತರು ಸೇರಿ ರಾಜ್ಯದ ಜನತೆ ತೀವ್ರವಾಗಿ ಖಂಡಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಕ್ಕೆ ಜನಹಿತ ಮುಖ್ಯವಲ್ಲ, ಹೆಚ್ಚು ದಿನ ಅಧಿಕಾರದಲ್ಲಿ ಉಳಿಯದಂತೆ ಹೋರಾಟ ನಡೆಸುವುದು ನಮ್ಮ- ನಿಮ್ಮೆಲ್ಲರ ಕರ್ತವ್ಯ ಎಂದರು.

ಅಜೀರ್ಣ ಆಗುವಷ್ಟು ಬಹುಮತವಿರುವ ಕಾಂಗ್ರೆಸ್‌ ಸರ್ಕಾರ ಜನಹಿತವನ್ನು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಸಂಪೂರ್ಣ ಮರೆತಿದೆ. ಎಲ್ಲ ವಸ್ತುಗಳ ಬೆಲೆ ಏರಿಕೆಯಿಂದ ಉಸಿರುಕಟ್ಟುವ ಪರಿಸ್ಥಿತಿ ಬಂದಿದೆ. ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ವಿರುದ್ಧ ಮನೆಮನೆಗೆ ತೆರಳಿ ಜನಜಾಗೃತಿ ಮೂಡಿಸಬೇಕು. ಈ ಸರ್ಕಾರಕ್ಕೆ ಪಾಠ ಕಲಿಸಬೇಕು ಮತ್ತು ಅಧಿಕಾರ ಬಿಟ್ಟು ತೊಲಗುವಂತೆ ಹೇಳಬೇಕಿದೆ ಎಂದು ಹೇಳಿದರು. 

ಇದು ಬೆಲೆ ಏರಿಕೆ ಗ್ಯಾರಂಟಿ ಸರ್ಕಾರ: ಬಿವೈವಿ ಟೀಕೆ 

ರಾಜ್ಯದಲ್ಲಿ ಬೆಲೆ ಏರಿಕೆ ಗ್ಯಾರಂಟಿ ನೀಡುವ ಕಾಂಗ್ರೆಸ್ ಪಕ್ಷದ ಸರ್ಕಾರ ಅಧಿಕಾರದಲ್ಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹರಿಹಾಯ್ದಿದ್ದಾರೆ.

ಧವಾರ ನಗರದ ಫ್ರೀಡಂ ಪಾರ್ಕ್‌ನಲ್ಲಿ ಕಾಂಗ್ರೆಸ್‌ ಸರ್ಕಾರದ ಬೆಲೆ ಏರಿಕೆ ನೀತಿ ವಿರೋಧಿಸಿ ಬಿಜೆಪಿ ಬುಧವಾರ ನಡೆಸಿದ ಅಹೋರಾತ್ರಿ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದರು.

ನುಡಿದಂತೆ ನಡೆದ ಸರ್ಕಾರ ಎಂದು ಜಾಹೀರಾತು ನೀಡುತ್ತಿರುವ ಇದು ಮನುಷ್ಯತ್ವ ಇರುವ ಸರ್ಕಾರವಲ್ಲ. ಅಧಿಕಾರಕ್ಕೆ ಬಂದ ಕೇವಲ 24 ಗಂಟೆಗಳಲ್ಲಿ ಗ್ಯಾರಂಟಿ ಅನುಷ್ಠಾನ ಮಾಡುವುದಾಗಿ ಹೇಳಿದ್ದರು. ಆದರೆ, ತಿಂಗಳುಗಳೇ ಕಳೆದರೂ ಗ್ಯಾರಂಟಿಗಳು ಸರಿಯಾಗಿ ಅನುಷ್ಠಾನವಾಗಿಲ್ಲ. ಮುಖ್ಯಮಂತ್ರಿಗಳು ಎಸಿ ರೂಮ್‌ನಿಂದ ಹೊರಗೆ ಬರಬೇಕು. ಬೆಂಗಳೂರಿನ ಮುಖ್ಯಮಂತ್ರಿಯಲ್ಲ, ರಾಯಚೂರು, ಕೊಪ್ಪಳ, ಬೆಳಗಾವಿ ಸೇರಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಸಚಿವರ ಜತೆ ಪ್ರವಾಸ ಕೈಗೊಂಡು ಜನರ ಸಮಸ್ಯೆಗಳನ್ನು ಆಲಿಸಿ ಆಡಳಿತ ನಡೆಸಬೇಕು ಎಂದು ಆಗ್ರಹಿಸಿದರು.

ಬಡವರು, ರೈತರು, ಜನಸಾಮಾನ್ಯರು ಇವತ್ತು ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲದ ದುಸ್ಥಿತಿ ಬಂದಿದೆ. ಪೆಟ್ರೋಲ್, ಡೀಸೆಲ್, ಹಾಲಿನ ದರ, ಸರ್ಕಾರಿ ಆಸ್ಪತ್ರೆಗಳ ಶುಲ್ಕ ಹೆಚ್ಚಿಸಿದ್ದಾರೆ. ಅಲ್ಲದೇ, ಡೀಸೆಲ್ ಬೆಲೆ 2 ರು. ಹೆಚ್ಚಳ ಮಾಡಲಾಗಿದ್ದು, ಇದರಿಂದ ಸರಕುಗಳ ದರವೂ ಹೆಚ್ಚಾಗಲಿದೆ ಎಂದು ವಿಜಯೇಂದ್ರ ಟೀಕಿಸಿದರು.

ಏ.7ರಿಂದ ಜನಾಕ್ರೋಶ ಯಾತ್ರೆ ಪ್ರಾರಂಭಿಸುತ್ತೇವೆ. ಕೇಂದ್ರದ ಸಚಿವ ಪ್ರಹ್ಲಾದ್‌ ಜೋಶಿಯವರು ಉದ್ಘಾಟಿಸಲಿದ್ದಾರೆ. ಸರ್ಕಾರದ ದುರಾಡಳಿತದ ವಿರೋಧಿಸಿ ಜನಾಕ್ರೋಶ ಯಾತ್ರೆ ಕೈಗೊಳ್ಳಲಿದ್ದೇವೆ ಎಂದು ಹೇಳಿದರು.

Share this article