ರೋಣ: ತಾಲೂಕಿನ ಆಯಾ ಗ್ರಾಪಂ ವ್ಯಾಪ್ತಿಯಲ್ಲಿಯೇ ದುಡಿಯುವ ಕೈಗಳಿಗೆ ರಾಷ್ಟ್ರೀಯ ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ಒದಗಿಸಲಾಗುವುದು. ಗ್ರಾಮೀಣ ಪ್ರದೇಶಗಳ ಜನರಿಗೆ ಯೋಜನೆಯ ಸದುಪಯೋಗಬೇಕು ಎಂದು ತಾಪಂ ಇಒ ಚಂದ್ರಶೇಖರ ಬಿ. ಕಂದಕೂರ ಹೇಳಿದರು.
ಪಟ್ಟಣದ ಕನ್ನಡ ಸಾಹಿತ್ಯ ಸಭಾಭವನದಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಕಾಯಕ ಬಂಧುಗಳು ಹಾಗೂ ನರೇಗಾ ಸಿಬ್ಬಂದಿಗೆ ಆಯೋಜಿಸಿದ್ದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಬರಗಾಲದಲ್ಲಿ ಕೆಲಸ ಸಿಗುವುದಿಲ್ಲ ಎಂದು ಆತಂಕದಲ್ಲಿರುವ ಗ್ರಾಮೀಣ ಪ್ರದೇಶದ ಕೂಲಿಕಾರರಿಗೆ ನೆರವಾಗಲು ಏಪ್ರಿಲ್ ಮೊದಲ ವಾರದಲ್ಲೇ ನರೇಗಾ ಯೋಜನೆಯಡಿಯಲ್ಲಿ ಸಮುದಾಯ ಕಾಮಗಾರಿಗಳನ್ನು ಆರಂಭಿಸಲಾಗುತ್ತಿದೆ. ಈ ಹಿನ್ನೆಲೆ ವಲಸೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾ, ತಾಪಂ ಮಹತ್ವದ ಹೆಜ್ಜೆ ಇಟ್ಟಿದೆ. ಅದಕ್ಕೆ ಪೂರಕವಾಗಿ ಪಿಡಿಒ, ಕಾಯಕಬಂಧುಗಳು ಶ್ರಮಿಸಬೇಕು ಎಂದರು. ವರ್ಷದಲ್ಲಿ 100 ದಿನಗಳ ವರೆಗೆ ಗ್ರಾಮೀಣ ಪ್ರದೇಶದ ಕೂಲಿಕಾರರಿಗೆ ಕೆಲಸ ಸಿಗುವಂತಾಗಬೇಕು. ಈ ಮೂಲಕ ಗ್ರಾಮೀಣ ಪ್ರದೇಶದ ಮೂಲಭೂತ ಸಮಸ್ಯೆಗಳನ್ನು ನಿವಾರಿಸಲು ನರೇಗಾ ವರದಾನವಾಗಲಿದೆ. ತಾಲೂಕಿನ ಎಲ್ಲ ಗ್ರಾಪಂಗಳ ಕಾಯಕ ಬಂಧುಗಳು ನರೇಗಾ ಕೆಲಸಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿಕಾರರನ್ನು ಸೇರಿಸುವ ಕೆಲಸ ಮಾಡಬೇಕು. ಬೇಸಿಗೆ ಅವಧಿಯ 60 ದಿನಗಳ ಕಾಲ ನರೇಗಾ ಯೋಜನೆಯಡಿ ಕೆಲಸ ಮಾಡಿದರೆ ಕೂಲಿಕಾರರಿಗೆ ₹22,200 ಸಿಗುತ್ತದೆ. ಕೂಲಿಕಾರರು ನರೇಗಾ ಯೋಜನೆಯಿಂದಾಗಿ ಬರುವ ಈ ಹಣ ಮುಂಗಾರಿನ ಕೃಷಿ ಬಿತ್ತನೆ ಕಾರ್ಯಕ್ಕೆ ನೆರವಾಗಲಿದೆ ಎಂದರು.ಬೇಸಿಗೆ ದಿನದಲ್ಲಿ ಕೆಲಸದ ಸಂದರ್ಭದಲ್ಲಿ ನರೇಗಾ ಕೂಲಿಕಾರರಿಗೆ ಕೆಲಸದ ಸ್ಥಳದಲ್ಲಿ ನೀರು ಮತ್ತು ನೆರಳಿನ ವ್ಯವಸ್ಥೆ ಬಗ್ಗೆ ಕಾಳಜಿ ವಹಿಸಬೇಕು. ಆಯುಕ್ತಾಲಯದ ಆದೇಶದಂತೆ ಎನ್.ಎಂ.ಎಂ.ಎಸ್. ಆ್ಯಪ್‌ನಲ್ಲಿ ಎರಡು ಸಾರಿ ಹಾಜರಾತಿ ಹಾಕುವುದನ್ನು ತಪ್ಪಿಸಬಾರದು ಎಂದರು.
ಬೇಸಿಗೆ ಅವಧಿಯಲ್ಲಿ ರೈತರ ಹೊಲದಲ್ಲಿ ನರೇಗಾ ಯೋಜನೆಯಡಿ ನಿರ್ಮಿಸುವ ಕಂದಕ, ಬದುಗಳ ನಿರ್ಮಾಣ ಮತ್ತು ಅನುಷ್ಠಾನ ಕುರಿತು ತಾಂತ್ರಿಕ ಸಂಯೋಜಕ ಪ್ರವೀಣ ಸೂಡಿ ವಿಷಯ ಮಂಡಿಸಿದರು. ರೋಣ ತಾಲೂಕಿನ 22 ಗ್ರಾಪಂಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಎಂಜಿನಿಯರ್‌ಗಳು ಹಾಜರಿದ್ದರು.