ಪುತ್ತೂರು: ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯಲ್ಲಿ ಒಂದಾಗಿರುವ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಕುರಿತು ಇಲಾಖೆಯ ವತಿಯಿಂದ ಪುನರ್ ಪರಿಶೀಲನೆ ಆರಂಭಗೊಂಡಿದ್ದು, ಈ ಬಗ್ಗೆ ಯಾವುದೇ ಗೊಂದಲಗಳಿಗೆ ಅವಕಾಶ ಮಾಡಿ ಕೊಡಬಾರದು ಎಂದು ಪುತ್ತೂರು ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಾರ್ಯಕರ್ತರನ್ನು ಬಳಸುವಂತಿಲ್ಲ: ಗೃಹಜ್ಯೋತಿ ಫಲಾನುಭವಿಗಳ ಪುನರ್ ಪರಿಶೀಲನೆಯನ್ನು ಈ ತಿಂಗಳ ಅಂತ್ಯದವರೆಗೆ ಮೆಸ್ಕಾಂ ಸಿಬ್ಬಂದಿಯೇ ಪ್ರತಿ ಮನೆಗಳಿಗೆ ತೆರಳಿ ದಾಖಲೆಗಳನ್ನು ಪರಿಶೀಲನೆ ವೆಬ್ ಸೈಟ್ ಗಳಿಗೆ ಅಪ್ ಲೋಡ್ ಮಾಡುವ ಕಾರ್ಯ ಮಾಡಲಿದ್ದಾರೆ. ತಿಂಗಳಾಂತ್ಯಕ್ಕೆ ಪೂರ್ಣಗೊಳ್ಳದಿದ್ದರೆ ಮುಂದೆ ಗ್ರಾಮ ಪಂಚಾಯಿತಿಗಳಲ್ಲಿ ಪರಿಶೀಲಿಸುವ ಕುರಿತು ಯೋಚನೆ ರೂಪಿಸಬೇಕು ಎಂದರು.
ಈಗಾಗಲೇ ಕೆಲವೊಂದು ಗ್ರಾಮ ಪಂಚಾಯಿತಿಗಳಲ್ಲಿ ಪರಿಶೀಲನೆ ಕಾರ್ಯ ನಡೆದಿದ್ದು, ಜನರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಆದರೆ ಪುತ್ತೂರಿನ ಮಂಜಲ್ಪಡ್ಪು ಭಾಗದಲ್ಲಿ ಒಂದು ಪಕ್ಷದ ಕಾರ್ಯಕರ್ತರು ಪರಿಶೀಲನಾ ಅರ್ಜಿಗಳನ್ನು ವಿತರಣೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ನೀವು ಸಹಕಾರ ಪಡೆಯುವುದಿದ್ದರೂ, ಮೆಸ್ಕಾಂ ಸಲಹಾ ಸಮಿತಿ ಸದಸ್ಯರು ಅಥವಾ ಗ್ಯಾರಂಟಿ ಯೋಜನಾ ಸಮಿತಿ ಸದಸ್ಯರ ಸಹಕಾರ ಪಡೆಯಬೇಕು. ಬದಲಿಗೆ ಪಕ್ಷದ ಕಾರ್ಯಕರ್ತರನ್ನು ಬಳಸುವಂತಿಲ್ಲ. ಮುಂದೆ ಹಾಗೆ ಆಗದಂತೆ ಗಮನಿಸಿಕೊಳ್ಳಿ ಎಂದು ಎಚ್ಚರಿಸಿದರು.ಮೆಸ್ಕಾಂ ಎಇಇ ಶಿವಶಂಕರ್ ಅವರು ಮಾಹಿತಿ ನೀಡಿ ಪ್ರಸ್ತುತ ನಮಗೆ ಪ್ರತಿ ಮನೆಗಳಿಗೆ ಹೋಗಿ ಪರಿಶೀಲನೆ ಮಾಡಲು ಆದೇಶವಾಗಿದೆ. ಈ ತಿಂಗಳು ನಮ್ಮ ಸಿಬಂದಿಗೆ ಮನೆಗಳಿಗೆ ತೆರಳಿ ಪರಿಶೀಲನೆ ಮಾಡುತ್ತಾರೆ. ಆದರೆ ನೆಟ್ ವರ್ಕ್ ಸಮಸ್ಯೆ ಇರುವಲ್ಲಿ ಅಪ್ ಲೋಡ್ ಮಾಡುವುದಕ್ಕೆ ತೊಂದರೆಯಾಗುತ್ತದೆ. ಜತೆಗೆ ನಮ್ಮ ಕಚೇರಿಗಳಲ್ಲೂ ದಾಖಲೆ ಪಡೆದು ಅಪ್ ಲೋಡ್ ಮಾಡಲಾಗುತ್ತಿದೆ. ಈ ಬಗ್ಗೆ ಯಾವುದೇ ಗೊಂದಲಗಳು ಇರುವುದಿಲ್ಲ. ಬಾಡಿಗೆ ಮನೆಗಳಲ್ಲಿ ಇರುವವರು ಸಹಿತ ಬಾಡಿಗೆ ಕರಾರು ಪತ್ರ ಸಹಿತ ದಾಖಲೆಗಳನ್ನು ನೀಡಿದರೆ ಸಾಕಾಗುತ್ತದೆ ಎಂದರು.
ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಜಿಲ್ಲಾ ಸಮಿತಿ ಉಪಾಧ್ಯಕ್ಷ ಜೋಕಿಂ ಡಿಸೋಜ ಉಪಸ್ಥಿತರಿದ್ದರು. ತಾಲೂಕು ಸಮಿತಿ ಸದಸ್ಯ ಕಾರ್ಯದರ್ಶಿಯಾದ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಸ್ವಾಗತಿಸಿದರು.