ಕನಕಾಪುರ ಮುಕುಂದ್ ಸುಮಿ ವಿಸ್ತರಣೆಗೆ ಎನ್‌ಒಸಿ ನೀಡದಿರಲು ಆಗ್ರಹ

KannadaprabhaNewsNetwork |  
Published : Sep 22, 2026, 02:15 AM IST
ಕಾರ್ಖಾನೆ ವಿಸ್ತರಣೆ ವಿರೋಧಿಸಿ ಕೊಪ್ಪಳದಲ್ಲಿ ಪ್ರತಿಭಟನೆ ನಡೆಯಿತು. | Kannada Prabha

ಸಾರಾಂಶ

ಕೊಪ್ಪಳ ತಾಲೂಕಿನ ಹಿರೇಬಗನಾಳ, ಕನಕಾಪುರ, ಬೇವಿನಹಳ್ಳಿ, ಹುಲಿಗಿ, ಅಲ್ಲಾನಗರ, ಕುಣಿಕೇರಿ ತಾಂಡಾ, ಚಿಕ್ಕಬಗನಾಳ, ಕಾಸನಕಂಡಿ, ಹಾಲವರ್ತಿ, ಗಿಣಿಗೇರಿ ಸೇರಿದಂತೆ 22 ಕಾರ್ಖಾನೆ ಬಾಧಿತ ಗ್ರಾಮಗಳ ಜನರ ಆರೋಗ್ಯವನ್ನು ಆರು ತಿಂಗಳಿಗೊಮ್ಮೆ ಕಡ್ಡಾಯವಾಗಿ ತಪಾಸಣೆ ಮಾಡಬೇಕು ಎಂದು ಕಾರ್ಖಾನೆ ಹಾಗೂ ಮಾಲಿನ್ಯ ವಿರೋಧಿ ಹೋರಾಟ ವೇದಿಕೆ ಆಗ್ರಹಿಸಿದೆ.

ಕೊಪ್ಪಳ: ತಾಲೂಕಿನ ಹಿರೇಬಗನಾಳ, ಕನಕಾಪುರ, ಬೇವಿನಹಳ್ಳಿ, ಹುಲಿಗಿ, ಅಲ್ಲಾನಗರ, ಕುಣಿಕೇರಿ ತಾಂಡಾ, ಚಿಕ್ಕಬಗನಾಳ, ಕಾಸನಕಂಡಿ, ಹಾಲವರ್ತಿ, ಗಿಣಿಗೇರಿ ಸೇರಿದಂತೆ 22 ಕಾರ್ಖಾನೆ ಬಾಧಿತ ಗ್ರಾಮಗಳ ಜನರ ಆರೋಗ್ಯವನ್ನು ಆರು ತಿಂಗಳಿಗೊಮ್ಮೆ ಕಡ್ಡಾಯವಾಗಿ ತಪಾಸಣೆ ಮಾಡಬೇಕು ಎಂದು ಕಾರ್ಖಾನೆ ಹಾಗೂ ಮಾಲಿನ್ಯ ವಿರೋಧಿ ಹೋರಾಟ ವೇದಿಕೆ ಆಗ್ರಹಿಸಿದೆ.

ಕಾರ್ಖಾನೆಗಳ ಮಾಲಿನ್ಯದಿಂದ ಜನರ ಆರೋಗ್ಯದ ಮೇಲೆ ಉಂಟಾಗುತ್ತಿರುವ ಪರಿಣಾಮದ ಕುರಿತು ಏಮ್ಸ್ ಹಾಗೂ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮೂಲಕ ಸಮಗ್ರ ಆರೋಗ್ಯ ಅಧ್ಯಯನ ನಡೆಸಬೇಕು ಎಂದು ವೇದಿಕೆಯ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಒತ್ತಾಯಿಸಿದರು.

ತಾಲೂಕಿನ ಕನಕಾಪುರ ಗ್ರಾಮದಲ್ಲಿ ಮುಕುಂದ್ ಸುಮಿ ಕಾರ್ಖಾನೆ ವಿಸ್ತರಣೆಗೆ ಮುಂದಾಗಿದ್ದು, ಸೆ. 29ರಂದು ಸಾರ್ವಜನಿಕ ಆಲಿಕೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕನಕಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರ ಆರೋಗ್ಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ವಿಸ್ತರಣೆಗೆ ಆರೋಗ್ಯ ಇಲಾಖೆಯಿಂದ ಎನ್‌ಒಸಿ ನೀಡಬಾರದು ಎಂದು ಅವರು ಆಗ್ರಹಿಸಿದರು.

ಕಾರ್ಖಾನೆಗಳಿಂದ ಉಂಟಾಗುತ್ತಿರುವ ಮಾಲಿನ್ಯದಿಂದ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದರೆ, ಅದರ ಕುರಿತು ವೈಜ್ಞಾನಿಕವಾಗಿ ಆರೋಗ್ಯ ತಪಾಸಣೆ ನಡೆಸಿ ವರದಿ ದಾಖಲಿಸಬೇಕು. ಇದರಿಂದ ಜನರ ಜೀವ ಮತ್ತು ಆರೋಗ್ಯ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲು ಸಾಧ್ಯವಾಗಲಿದೆ ಎಂದರು.

ಜನರ ಕಳಕಳಿಯಿಂದ ವರದಿ ನೀಡಿ: ಸಂಚಾಲಕ ಮಲ್ಲಿಕಾರ್ಜುನ ಗೋನಾಳ ಮಾತನಾಡಿ, ಜಿಲ್ಲಾಧಿಕಾರಿ ನೇತೃತ್ವದ ಸಾರ್ವಜನಿಕ ಆಲಿಕೆ ಸಮಿತಿಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಯೂ ಸದಸ್ಯರಾಗಿದ್ದಾರೆ. ಜನರ ಆರೋಗ್ಯದ ದೃಷ್ಟಿಯಿಂದ ವಾಸ್ತವಾಂಶ ಒಳಗೊಂಡ ವರದಿ ಸಲ್ಲಿಸಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿಎಚ್‌ಒ ಡಾ. ಈಶ್ವರ ಸವಡಿ, ಕನಕಾಪುರ ಹಾಗೂ ಸುತ್ತಮುತ್ತಲಿನ ಜನರ ಆರೋಗ್ಯದ ಮೇಲೆ ಉಂಟಾಗಿರುವ ಪರಿಣಾಮದ ಕುರಿತು ವರದಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸುವುದಾಗಿ ತಿಳಿಸಿದರು.

326ನೇ ದಿನದ ಧರಣಿಯಿಂದ ಮೆರವಣಿಗೆ: ಬಲ್ಡೋಟ ಹಾಗೂ ಕೈಗಾರಿಕಾ ಮಾಲಿನ್ಯ ವಿರೋಧಿಸಿ ನಡೆಯುತ್ತಿರುವ 326ನೇ ದಿನದ ಧರಣಿಯಿಂದ ಪ್ರತಿಭಟನಾಕಾರರು ಅಶೋಕ ವೃತ್ತದ ಮೂಲಕ ಘೋಷಣೆ ಫಲಕಗಳನ್ನು ಹಿಡಿದು ಮೆರವಣಿಗೆ ನಡೆಸಿದರು. ‘ಆರೋಗ್ಯ ತಪಾಸಣೆ ಮಾಡಿ, ಜೀವ ಉಳಿಸಿ’ ಎಂದು ಘೋಷಣೆ ಕೂಗುತ್ತಾ ಹಳೆ ಜಿಲ್ಲಾ ಆಸ್ಪತ್ರೆ ಆವರಣದಲ್ಲಿರುವ ಡಿಎಚ್‌ಒ ಕಚೇರಿಗೆ ತೆರಳಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಂದಕುಮಾರ ಅವರಿಗೆ ಆಗ್ರಹ ಪತ್ರ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಭೀಮಸೇನ ಕಲಕೇರಿ, ಮಹಿಳಾ ನಾಯಕಿ ಜ್ಯೋತಿ ಗೊಂಡಬಾಳ, ಸರೋಜಾ ಬಾಕಳೆ, ಮಂಜುನಾಥ ಜಿ. ಗೊಂಡಬಾಳ, ಚಿತ್ರಕಲಾವಿದ ರಾಜು ತೇರದಾಳ, ರವಿ ಕಾಂತನವರ, ರಾಜಶೇಖರ ಏಳುಭಾವಿ, ನಾಗರಾಜ ಎಲಿಗಾರ, ಸಿರಾಜ್ ಸಿದ್ದಾಪುರ, ಸುಭಾನ್ ಸಾಬ್ ನೀರಲಗಿ, ಮಂಜುನಾಥ ಕವಲೂರು, ಮಂಜುನಾಥ ಪಿನ್ನಿ, ವೆಂಕಣ್ಣಾಚಾರ ಕಟ್ಟಿ, ಶಿವಪ್ಪ ಬನಪ್ಪನವರ, ಮಂಗಳೇಶ ರಾಠೋಡ್, ಶಿವಪ್ಪ ಜಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೋದಿ ಜನ್ಮದಿನ: ನಾಳೆ ಬೃಹತ್ ರಕ್ತದಾನ ಶಿಬಿರ
ಸಮಾಜಮುಖಿ ಚಿಂತನೆ, ಅಭಿವೃದ್ಧಿಗೆ ಸದಾಕಾಲ ಮನ್ನಣೆ: ಸಂಸದ ಬೊಮ್ಮಾಯಿ