ಕನ್ನಡಪ್ರಭ ವಾರ್ತೆ ಗದಗ
ಬಸವದಳದ ವತಿಯಿಂದ ನಗರದ ಶಿವಾನಂದ ನಗರದಲ್ಲಿ ನಿರ್ಮಿಸಲಾದ ನೂತನ ಬಸವ ಸಮುದಾಯ ಭವನದ ಲೋಕಾರ್ಪಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಬಸವದಳವು ಶಿಸ್ತು, ಸಾಮಾಜಿಕ, ಆಧ್ಯಾತ್ಮಿಕ ಹಾಗೂ ನೀತಿ, ನಿಯಮಗಳಿಗೆ ಹೊಂದಿಕೊಂಡು ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ನಿರಂತರ ಚಿಂತನಾ ಸಭೆ ನಡೆಸುತ್ತಾ, ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸಿದ ಬಸವಣ್ಣನವರ ಆಶಯಗಳನ್ನು ಪ್ರಾಯೋಗಿಕವಾಗಿ ಜಾರಿಗೆ ತರುತ್ತಿದೆ. ಸಂವಿಧಾನವನ್ನು ಒಪ್ಪುವ ಪ್ರತಿಯೊಬ್ಬರೂ ಬಸವಣ್ಣನವರ ಅನುಭವಗಳನ್ನು ಗೌರವಿಸುತ್ತಾರೆ ಎಂದ ಅವರು, ಅಲ್ಲಮ ಪ್ರಭುಗಳ ನೇತೃತ್ವದಲ್ಲಿ ಎಂಟು ಶತಮಾನಗಳ ಹಿಂದೆಯೇ ಸಾಮಾಜಿಕ ಚಿಂತನೆ ಮತ್ತು ಸಮಾನತೆಯ ಮಾರ್ಗದರ್ಶನ ದೊರೆತಿದೆ ಎಂದರು.ಭವನ ಲೋಕಾರ್ಪಣೆಗೊಳಿಸಿದ ತೋಂಟದಾರ್ಯ ಮಠದ ಪೀಠಾಧಿಪತಿ ಡಾ. ತೋಂಟದ ಸಿದ್ಧರಾಮ ಶ್ರೀ ಮಾತನಾಡಿ, 1993ರಲ್ಲಿ ಸ್ಥಾಪನೆಯಾದ ಬಸವದಳವು ಅಂದಿನಿಂದ ಇಂದಿನವರೆಗೂ ಬಸವೇಶ್ವರರ ತತ್ವ ಮತ್ತು ಆದರ್ಶಗಳನ್ನು ಸಮಾಜಕ್ಕೆ ಮುಟ್ಟಿಸುತ್ತಿದ್ದು, ಮುಂದಿನ ದಿನಗಳಲ್ಲಿ ಜಗತ್ತಿಗೇ ಮಾದರಿಯಾಗಿ ಮುನ್ನಡೆಯಲಿ ಎಂದು ಆಶೀರ್ವದಿಸಿದರು. ಆಶೀರ್ವಚನ ನೀಡಿದ ಡಾ. ನೀಲಮ್ಮತಾಯಿ ಅಸುಂಡಿ, ಶರಣರು ವಚನ ಚಳವಳಿಯ ಮೂಲಕ ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಿ ಮಹಿಳೆಯರಿಗೆ ಸಮಾನ ಹಕ್ಕು ದೊರಕಿಸಿಕೊಟ್ಟರು ಎಂದರು. ವಿಪ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಬಸವತತ್ವದ ಅಡಿಯಲ್ಲಿ ಬದುಕಿದರೆ ಮಾತ್ರ ಸುಂದರ ಹಾಗೂ ಜಾತ್ಯತೀತ ಸಮಾಜ ನಿರ್ಮಾಣ ಸಾಧ್ಯ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಬಸವದಳದ ಕಾರ್ಯದರ್ಶಿ ಎಸ್.ಎ. ಮುಗದ, ಶರಣರ ಕಾಯಕ, ದಾಸೋಹ ಸಂಸ್ಕೃತಿಯನ್ನು ಸ್ಮರಿಸಿದರು. ನಗರಸಭೆ ಸದಸ್ಯ ಚಂದ್ರಶೇಖರ ತಡಸದ ಹಾಗೂ ಉಪನ್ಯಾಸಕ ಎಸ್.ಎಸ್. ಹರ್ಲಾಪೂರ ಭವನ ನಿರ್ಮಾಣದ ಹಿನ್ನೆಲೆ ಮತ್ತು ಶರಣರ ಆದರ್ಶಗಳ ಕುರಿತು ಮಾತನಾಡಿದರು.