ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆ ಅಡಿಯ ನಳ ಸಂಪರ್ಕಕ್ಕೆ ಮೋಟಾರ್ ಅಳವಡಿಕೆ ಮಾಡದಂತೆ ವಿಜಯಪುರ ಜಿಲ್ಲಾ ಪಂಚಾಯಿತಿ ಸಿಇಒ ರಿಷಿ ಆನಂದ ಸೂಚಿಸಿದರು.ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಬುಧವಾರ ಭೇಟಿ ನೀಡಿ ನೀಡಿ ಜೆಜೆಎಂ ಕಾಮಗಾರಿ ಪರಿಶೀಲನೆ ನಡೆಸಿದರು. ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಪ್ರತಿಮನೆಗೂ ಶುದ್ಧ ಹಾಗೂ ಕುಡಿಯಲು ಯೋಗ್ಯವಾದ ನೀರನ್ನು ಒದಗಿಸಬೇಕು ಮತ್ತು ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಕುಡಿಯುವ ನೀರು ನೈರ್ಮಲ್ಯ ಇಲಾಖೆ ಸಿಂದಗಿ ಎಇಇ ತಾರಾನಾಥ ರಾಠೋಡಗೆ ಸೂಚಿಸಿದರು.
ಮನೆ ಮನೆಗೂ ನೀರಿನ ಸಂಪರ್ಕ ಸಮರ್ಪಕವಾಗಿ ಅನುಷ್ಠಾನದ ಬಗ್ಗೆ ಮುಳಸಾವಳಗಿ ಗ್ರಾಪಂ ವ್ಯಾಪ್ತಿಯ ಪಡಗಾನೂರ ಗ್ರಾಮಕ್ಕೆ ಭೇಟಿ ನೀಡಿದರು. ಅಂಗನವಾಡಿ ಕೇಂದ್ರದ ಬಗ್ಗೆ ಗ್ರಾಮಸ್ಥರಿಗೆ ತಿಳಿ ಹೇಳಿ ಪೌಷ್ಟಿಕ ಆಹಾರ ನೀಡುವಂತೆ ತಿಳಿಸಲಾಯಿತು. ಕೊಂಡಗೂಳಿ ಗ್ರಾಪಂಗೆ ಭೇಟಿ ನೀಡಿ ಜೆಜೆಎಂ ನಳ ಸಂಪರ್ಕದ ಬಗ್ಗೆ ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಿದರು. 1ನೇ ವಾರ್ಡ್‌ನಲ್ಲಿ ಹಲವು ತಿಂಗಳುಗಳು ಕಳೆದಿದ್ದರೂ ಸಹ ನೀರಿನ ಸಂಪರ್ಕ ಒದಗಿಸಿಲ್ಲ. ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರೊಬ್ಬರ ಮಾತಿಗೆ 10ದಿನಗಳ ಒಳಗಾಗಿ ಸಮಸ್ಯೆ ಬಗೆಹರಿಸಲು ತಿಳಿಸಿದರು. ನಂತರ ಹಂಚಲಿ ಗ್ರಾಮಕ್ಕೆ ಭೇಟಿ ನೀಡಿ ಜೆಜೆಎಂ ಪೈಪ್‌ಲೈನ್ ಸಂಪರ್ಕದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಶೀಘ್ರ ಪೂರ್ಣಗೊಳಿಸಲು ಸೂಚಿಸಿದರು. ನಂತರ ಕೊರವಾರ ಗ್ರಾಪಂಗೆ ಭೇಟಿ ನೀಡಿ ಜೆಜೆಎಂ ಕಾಮಗಾರಿ ಪೂರ್ಣಗೊಂಡಿದ್ದು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.ಇದೇ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಭಾರತಿ ಚಲುವಯ್ಯ, ಎಡಿ ಶಿವಾನಂದ ಮೂಲಿಮನಿ, ಎಇಇ ತಾರಾನಾಥ ರಾಠೋಡ, ಸೆಕ್ಷನ್ ಆಫೀಸರ್ ಎಚ್.ಎಂ.ಸಾರವಾಡ, ತಾಂತ್ರಿಕ ಸಂಯೋಜಕ ಶರಣಗೌಡ ಪಾಟೀಲ, ಐಇಸಿ ಸಂಯೋಜಕರ ಸಿದ್ದು ಕಾಂಬಳೆ, ಪಿಡಿಒಗಳಾದ ಕಾಶಿನಾಥ ಕಡಕಬಾವಿ, ಎಲ್.ಟಿ.ಅಂಗಡಿ ಸೇರಿದಂತೆ ಗುತ್ತಿಗೆದಾರರು ಹಾಗೂ ಗ್ರಾಮಸ್ಥರು ಹಾಜರಿದ್ದರು.