ಗದಗ: ಜಿಲ್ಲೆಯಲ್ಲಿ ಬರ ನಿರ್ವಹಣೆ ಸಮರ್ಪಕವಾಗಿ ನಿಭಾಯಿಸಬೇಕು. ಈ ಕುರಿತು ಅಧಿಕಾರಿಗಳು ನಿರ್ಲಕ್ಷ್ಯ ತೋರದೇ ಖುದ್ದಾಗಿ ನೀರಿನ ಸಮಸ್ಯೆ ಇರುವ ಸ್ಥಳಗಳಿಗೆ ಭೇಟಿ ನೀಡಿ ಸಾರ್ವಜನಿಕರಿಗೆ ಸ್ಪಂದಿಸಿ ಕೆಲಸ ನಿರ್ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ರೈತರಿಗೆ ಬೆಳೆ ಪರಿಹಾರ ವಿತರಣೆಯಲ್ಲಿ ವಿಳಂಬವಾಗಬಾರದು. ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ಈಗಾಗಲೇ ಸಹಾಯವಾಣಿ (ಹೆಲ್ಪ್‌ಲೈನ್) ಸ್ಥಾಪಿಸಲಾಗಿದ್ದು, ಈ ಸಂಬಂಧ ಸಾರ್ವಜನಿಕರಿಂದ ಕರೆಗಳು ಬಂದಲ್ಲಿ ಅವುಗಳಿಗೆ ತಕ್ಷಣವೇ ಸ್ಪಂದಿಸುವ ಕಾರ್ಯವಾಗಬೇಕು ಎಂದರು.
ಅತಿವೃಷ್ಟಿ: ಹವಾಮಾನ ವರದಿಯ ಪ್ರಕಾರ ಮುಂಬರುವ ದಿನಗಳಲ್ಲಿ ಅತಿವೃಷ್ಟಿಯಾಗುವ ಸಂಭವವಿದೆ ಎಂದು ಅಂದಾಜಿಸಲಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಅತಿವೃಷ್ಟಿ ಸಮರ್ಪಕ ನಿರ್ವಹಣೆಗೆ ಸರಿಯಾಗಿ ಕ್ರಿಯಾಯೋಜನೆ ಸಿದ್ಧಪಡಿಸಿಕೊಂಡು ಅತಿವೃಷ್ಟಿ ಆವರಿಸಿದಲ್ಲಿ ತಕ್ಷಣವೇ ಸ್ಪಂದಿಸುವ ಕಾರ್ಯಕೈಗೊಳ್ಳಬೇಕು. ಜೀವ ಹಾನಿ ತಡೆಗೆ ಮುಂಜಾಗ್ರತೆಯಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆಯೂ ಸಹ ಸೂಚಿಸಲಾಯಿತು.ಚರಂಡಿಗಳ ಸ್ವಚ್ಛತೆಗೆ ಸೂಚನೆ: ಗ್ರಾಮೀಣ ಪ್ರದೇಶ ಸೇರಿದಂತೆ ನಗರ ಪ್ರದೇಶಗಳಲ್ಲಿ ಗಟಾರುಗಳಲ್ಲಿ ನೀರು ಸರಾಗವಾಗಿ ಹರಿದುಹೋಗುವಂತೆ ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ನೀರು ಸರಾಗವಾಗಿ ಹರಿದು ಹೋಗದೇ ರಸ್ತೆ ಮೇಲೆ ಕೊಳಚೆ ನೀರು ಹರಿಯುವ ಸಾಧ್ಯತೆಯಿದೆ. ಇದರಿಂದ ಸಾರ್ವಜನಿಕರಿಗೆ ಓಡಾಡಲು ಸಮಸ್ಯೆ ಉಂಟಾಗುತ್ತದೆ. ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ನಗರದ ಗಟಾರುಗಳ ಸ್ವಚ್ಛತೆಗೆ ಕ್ರಮ ವಹಿಸಬೇಕು ಎಂದು ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರಿಗೆ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಮಾತನಾಡಿ, ನೀರಿನ ಸಮಸ್ಯೆಯಿರುವ ಜಿಲ್ಲೆಯ 14 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಗದಗ-ಬೆಟಗೇರಿ ನಗರಸಭೆಯ 35 ವಾರ್ಡುಗಳಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಗದಗ ತಾಲೂಕಿನಲ್ಲಿ 13, ಮುಂಡರಗಿ ತಾಲೂಕಿನಲ್ಲಿ 8, ನರಗುಂದ ತಾಲೂಕಿನಲ್ಲಿ 2, ಶಿರಹಟ್ಟಿ ತಾಲೂಕಿನಲ್ಲಿ 4 ಖಾಸಗಿ ಬೋರ್‌ವೆಲ್‌ಗಳ ಮುಖಾಂತರ ನೀರಿನ ಸಮಸ್ಯೆಯಿರುವ ಪ್ರದೇಶಗಳಿಗೆ ನೀರು ಪೂರೈಸಲಾಗುತ್ತಿದೆ ಎಂದು ಸಭೆಗೆ ವಿವರಿಸಿದರು.
ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ ಮಾತನಾಡಿ, ಬರ ಪರಿಹಾರ ವಿತರಣೆ ಮಾಡುವಾಗ ಪ್ರತಿಯೊಬ್ಬ ರೈತರ ಹೊಲದಲ್ಲಿಯೂ ಕ್ರಾಪ್ ಸರ್ವೇ (ಬೆಳೆ ಸಮೀಕ್ಷೆ) ಲಿಂಕ್ ಮಾಡಲಾಗಿದೆ. 5,591 ಫಲಾನುಭವಿಗಳ ಆಧಾರ್ ಮತ್ತು ಬ್ಯಾಂಕ್ ಖಾತೆ, ಫ್ರೂಟ್ಸ್ ಐಡಿಗಳಲ್ಲಿ ಹೆಸರಿನ ವ್ಯತ್ಯಾಸ ಮತ್ತು ಇತರ ಕಾರಣದಿಂದಾಗಿ ಪರಿಹಾರ ಜಮೆ ಆಗದೇ ಇದ್ದು ಅವುಗಳನ್ನು ಸರಿಪಡಿಸುವ ಕಾರ್ಯ ಪ್ರಗತಿಯಲ್ಲಿದೆ. 2023ರ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ಹಾನಿಗೆ ಒಟ್ಟಾರೆ 1,13,778 ಫಲಾನುಭವಿಗಳಿಗೆ 1ರಿಂದ 9 ಹಂತದ ವರೆಗೆ ₹22 ಕೋಟಿ ಬೆಳೆ ಹಾನಿ ಪರಿಹಾರ ಧನ ವಿತರಿಸಲಾಗಿದೆ. ಜಿಲ್ಲೆಯಲ್ಲಿ ಬೆಳೆ ಹಾನಿ ಪರಿಹಾರ ವಿತರಣೆ ಕಾರ್ಯ ಇನ್ನೂ ಪ್ರಗತಿಯಲ್ಲಿದೆ ಎಂದು ವಿವರಿಸಿದರು.