ಖಾಸಗಿ ಕೃಷಿ ಕಾಲೇಜುಗಳಿಗೆ ಮಾನ್ಯತೆ ಬೇಡ

KannadaprabhaNewsNetwork | Published : Jul 30, 2024 1:31 AM

ಸಾರಾಂಶ

ಖಾಸಗಿ ಕೃಷಿ ಕಾಲೇಜುಗಳಿಗೆ ಮಾನ್ಯತೆ ನೀಡಲು ಬೆಂಗಳೂರು ಕೃಷಿ ವಿವಿ ಮಾಡಿರುವ ನಿರ್ಧಾರ ಕೈ ಬಿಡುವಂತೆ ಆಗ್ರಹಿಸಿ ಇಲ್ಲಿಯ ಕೃಷಿ ಕಾಲೇಜು ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಧಾರವಾಡ

ಖಾಸಗಿ ಕೃಷಿ ಕಾಲೇಜುಗಳಿಗೆ ಮಾನ್ಯತೆ ನೀಡಲು ಬೆಂಗಳೂರು ಕೃಷಿ ವಿವಿ ಮಾಡಿರುವ ನಿರ್ಧಾರ ಕೈ ಬಿಡುವಂತೆ ಆಗ್ರಹಿಸಿ ಇಲ್ಲಿಯ ಕೃಷಿ ಕಾಲೇಜು ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನೆ ನಡೆಸಿದರು.

ಬೆಂಗಳೂರು ಕೃಷಿ ವಿವಿಯು ಜುಲೈ 8ರಂದು ಅಧಿಸೂಚನೆ ಹೊರಡಿಸಿ, ವಿವಿ ಆಡಳಿತ ಮಂಡಳಿಯ 402ನೇ ಸಭೆಯ ತೀರ್ಮಾನದಂತೆ ಖಾಸಗಿ ಕಾಲೇಜುಗಳಿಗೆ ಅಫಿಲಿಯೇಷನ್ ಆಡಳಿತ ಮಂಡಳಿಯ ಸದಸ್ಯರ ಸಭೆ ಕರೆದಿದೆ. ಈಗಾಗಲೆ ಎಐಸಿಟಿಇ ಅನುಮತಿಯೊಂದಿಗೆ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಿಂದ ಪದವಿಗಳನ್ನು ಪಡೆದ ವಿದ್ಯಾರ್ಥಿಗಳು ಕೃಷಿ ಇಲಾಖೆಯ ಸರ್ಕಾರಿ ಕೆಲಸಕ್ಕೆ ಅರ್ಹತೆ ಗಳಿಸಿರುವುದು ಅತಿ ದೊಡ್ಡ ವಂಚನೆ. ಪ್ರಸ್ತುತ ಬೆಂಗಳೂರು ಕೃವಿವಿ ಸಹ ಖಾಸಗಿ ಕೃಷಿ ಕಾಲೇಜುಗಳಿಗೆ ಅನುಮತಿ ನೀಡಲು ಹೊರಟಿರುವುದು ಅನೇಕ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಿದ್ದಂತೆ ಎಂದರು. ನೂರಾರು ಖಾಸಗಿ ಕೃಷಿ ಕಾಲೇಜುಗಳಿಗೆ ಅನುಮತಿ ನೀಡಿರುವ ಮಹಾರಾಷ್ಟ್ರ, ಆಂಧ್ರಪ್ರದೇಶ. ತಮಿಳುನಾಡು ಮತ್ತು ಮಧ್ಯಪ್ರದೇಶದಲ್ಲಿ ಕೃಷಿ ಶಿಕ್ಷಣದ ಗುಣಮಟ್ಟ ಚಿಂತಾಜನಕವಾಗಿದೆ. ಇದನ್ನು ಐಸಿಎಆರ್ ಸಹ ಪ್ರಶ್ನಿಸಿದೆ. ಒಂದು ವೇಳೆ ಯಾವುದೇ ಖಾಸಗಿ ಕಾಲೇಜು ಕೃಷಿ ಶಿಕ್ಷಣವನ್ನು ನೀಡಬೇಕೆಂದಲ್ಲಿ. 5ನೇ ಡೀನ್ ಕಮಿಟಿಯ ಮಾನದಂಡಗಳನ್ನು ಪಾಲಿಸಿದರೆ ಸಾಕು ಸ್ವತಃ ಐಸಿಎಆರ್ ಅಫಿಲಿಯೇಶನ್ ನೀಡುತ್ತದೆ. (ಉದಾಹರಣೆಗೆ ಒರಿಸ್ಸಾ) ಮತ್ತು ಯಾವುದೇ ಸಮಯದಲ್ಲಿ ಬೇಕಾದರು ಅನುಮತಿಯನ್ನು ರದ್ದುಪಡಿಸಬಹುದು. ಆದರೆ, ಖಾಸಗಿಯವರು ಸೌಕರ್ಯಗಳ ಕೊರತೆಯಿಂದ ರಾಜಕೀಯ ಮತ್ತು ಹಣದ ಬಲದೊಂದಿಗೆ ವಿವಿಗಳ ಮೇಲೆ ಒತ್ತಡ ತಂದು ಅನುಮತಿಯನ್ನು ಪಡೆಯುವ ಹುನ್ನಾರವನ್ನು ಕಳೆದ 14 ವರ್ಷಗಳಿಂದ ನಡೆಸುತ್ತಿವೆ.

ಈ ಮಾನ್ಯತೆ ಕೊಡುವ ವಿಚಾರವಾಗಿ ಕೃಷಿ ವಿವಿಗಳಲ್ಲಿ ಕುಲಪತಿಗಳು ಮತ್ತು ಉನ್ನತ ಅಧಿಕಾರಿಗಳ ವರ್ಗವು ಶಾಮೀಲಾಗಿದೆ. ತರಾತುರಿಯಲ್ಲಿ ಖಾಸಗಿ ಕೃಷಿ ಕಾಲೇಜುಗಳನ್ನು ಸ್ಥಾಪಿಸಲು ಹೊರಟಿರುವುದು ವಿದ್ಯಾರ್ಥಿವರ್ಗ ಮತ್ತು ಕೃಷಿ ಪದವೀಧರರಿಗೆ ಮಾಡುತ್ತಿರುವ ಅತಿದೊಡ್ಡ ವಂಚನೆ. ಇದಕ್ಕೆ ಸರ್ಕಾರದ ಮಟ್ಟದಲ್ಲೂ ಉನ್ನತ ಪ್ರಜಾಪ್ರತಿನಿಧಿಗಳು ಶಾಮೀಲಾಗಿದ್ದಾರೆ. ಈ ನಿಟ್ಟಿನಲ್ಲಿ ತಾವುಗಳು ವಿದ್ಯಾರ್ಥಿಗಳ ಪರ ನಿಂತು ಯಾವುದೇ ಕಾರಣಕ್ಕೂ ಖಾಸಗಿ ಕೃಷಿ ಕಾಲೇಜುಗಳಿಗೆ ಅಪ್ಲಿಲೀಯೇಷನ್ ಕೊಡದಂತೆ ತಡೆಯಬೇಕೆಂದು ಕುಲಪತಿ ಪ್ರೊ.ಪಿ.ಎಲ್‌. ಪಾಟೀಲ ಮೂಲಕ ವಿದ್ಯಾರ್ಥಿಗಳು ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿದರು. ವಿದ್ಯಾರ್ಥಿ ಮುಖಂಡರಾದ ದರ್ಶನ ಎಚ್‌.ಪಿ, ಇಂದುಮತಿ ಎಂ, ಪ್ರಜ್ವರ ಸಿಂಧೂರ, ಚಿರಂತನ ದ್ರಾವಿಡ್‌, ಬಿಂದು ಚೌಧರಿ, ತೇಜಸ್ವಿ ಪವಾರ ಸೇರಿದಂತೆ ಕಾಲೇಜು ವಿದ್ಯಾರ್ಥಿ ಸಂಘದ ಸದಸ್ಯರು, ಡಾ. ಬಿ.ಆರ್‌. ಅಂಬೇಡ್ಕರ್‌ ವಿದ್ಯಾರ್ಥಿಗಳ ಕಲ್ಯಾಣ ಸಂಘದ ಸದಸ್ಯರು ಇದ್ದರು.

Share this article