ಕನ್ನಡಪ್ರಭ ವಾರ್ತೆ ನಾಗಮಂಗಲ
ಪಟ್ಟಣದ ಮಂಡ್ಯ ವೃತ್ತದಲ್ಲಿ ಕಾರ್ಯಕರ್ತರಿಂದ ಅದ್ಧೂರಿ ಸ್ವಾಗತ ಸ್ವೀಕರಿಸಿ ಮಾತನಾಡಿ, ನನ್ನನ್ನು ಟೀಕೆ ಮಾಡುವುದು ಜೆಡಿಎಸ್‌ನವರಿಗೆ ಚಾಳಿಯಾಗಿದೆ. ಅವರಂತೆ ನಾನು ಟೀಕೆ ಮಾಡುವುದಕ್ಕೆ ಹೋಗುವುದಿಲ್ಲ. ಅಭಿವೃದ್ಧಿ ಮೂಲಕವೇ ಉತ್ತರ ನೀಡುತ್ತೇನೆ. ನಾನು ೧೯೯೯ರಿಂದ ಚುನಾವಣೆಯಿಂದ ಸೋಲು-ಗೆಲುವು ಎರಡನ್ನೂ ಕಂಡಿದ್ದೇನೆ. ಸಮಾನವಾಗಿ ಸ್ವೀಕರಿಸಿದ್ದೇನೆ. ಜನರು ಕೊಟ್ಟ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳದೆ ಕ್ಷೇತ್ರವನ್ನು ಅಭಿವೃದ್ಧಿ ಮಾಡಿದ್ದೇನೆ. ಜನಸೇವೆ ಮಾಡುತ್ತಾ ಬಂದಿದ್ದೇನೆ. ಅದರ ಫಲದಿಂದಾಗಿಯೇ ನಾಲ್ಕು ಬಾರಿ ಸಚಿವನಾಗುವ ಅವಕಾಶ ಸಿಕ್ಕಿದೆ ಎಂದರು.
೧೯೯೯ರ ಚುನಾವಣೆಯಲ್ಲಿ ದೇವೇಗೌಡರು, ಕುಮಾರಸ್ವಾಮಿ, ಸಿದ್ದರಾಮಯ್ಯ, ಎಚ್.ಡಿ.ರೇವಣ್ಣ ಸೇರಿದಂತೆ ಎಲ್ಲರೂ ಸೋತಿದ್ದರು. ಮಂಡ್ಯದಲ್ಲಿ ಸ್ಪರ್ಧಿಸಿದ್ದ ನಾಲ್ಕು ಮಂದಿ ಠೇವಣಿ ಕಳೆದುಕೊಂಡಿದ್ದರು. ಆಗ ನನ್ನನ್ನು ಗೆಲ್ಲಿಸಿದ್ದ ನಾಗಮಂಗಲ ಕ್ಷೇತ್ರದ ಜನರು. ಇದು ಜನರು ಕೊಟ್ಟ ಭಿಕ್ಷೆಯೇ ಹೊರತು ಜನತಾದಳ ನೀಡಿದ ಭಿಕ್ಷೆಯಲ್ಲ ಎಂದು ನೇರವಾಗಿ ಹೇಳಿದರು.ನಾನು ಅಧಿಕಾರಕ್ಕಾಗಿ ಜನರು ಹಾಗೂ ನನ್ನ ಕಾರ್ಯಕರ್ತರ ಮನೆ ಬಾಗಿಲಿಗೆ ಹೋಗುತ್ತೇನೆಯೇ ಹೊರತು ಬೇರೆಯವರ ಮನೆ ಬಾಗಿಲಿಗೆ ಹೋಗುವುದಿಲ್ಲ. ಚುನಾವಣೆಯಲ್ಲಿ ಗೆದ್ದ ಮಾತ್ರಕ್ಕೆ ನಾಯಕನಾಗಲು ಸಾಧ್ಯವಿಲ್ಲ. ಜನಸೇವೆ ಮಾಡಿದಾಗಲಷ್ಟೇ ನಿಜವಾದ ನಾಯಕನಾಗಲು ಸಾಧ್ಯ. ನಾನು ಮಾಡಿರುವ ಕೆಲಸಗಳಿಗೆ ಕ್ಷೇತ್ರದಲ್ಲಿ ಸಾಕಷ್ಟು ಸಾಕ್ಷಿಗುಡ್ಡೆಗಳಿವೆ. ವಿರೋಧಿಗಳು ಮಾಡಿರುವ ಅಭಿವೃದ್ಧಿಯ ಒಂದು ಸಾಕ್ಷಿಗುಡ್ಡೆ ತೋರಿಸಲಿ ನೋಡೋಣ ಎಂದು ಸವಾಲು ಹಾಕಿದರು.
ವೈಮನಸ್ಸು, ಭಿನ್ನಾಭಿಪ್ರಾಯ, ಅಸೂಯೆ, ದ್ವೇಷ ಎಲ್ಲವನ್ನೂ ಬದಿಗಿಟ್ಟು ಒಗ್ಗಟ್ಟಿನಿಂದ ಪಕ್ಷದ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ನಮ್ಮಲ್ಲಿರುವ ದೋಷಗಳು ವಿರೋಧಿಗಳಿಗೆ ಲಾಭವಾಗಬಾರದು. ೨೦೨೮ರ ಚುನಾವಣೆಯಲ್ಲೂ ಇದೇ ರೀತಿಯ ಒಗ್ಗಟ್ಟನ್ನು ಪ್ರದರ್ಶಿಸಿ ನನ್ನ ಗೆಲುವಿಗೆ ಸಹಕಾರಿಯಾಗಿ ನಿಲ್ಲುವಂತೆ ಮನವಿ ಮಾಡಿದರು.
ಇನ್ನು ಮುಂದೆ ಪ್ರತಿ ಶನಿವಾರ ಬೆಳಗ್ಗೆ ೧೦ ಗಂಟೆಯಿಂದ ಸಂಜೆ ೫ ಗಂಟೆಯವರೆಗೆ ನಾಗಮಂಗಲ ಕ್ಷೇತ್ರದಲ್ಲೇ ಇರಲು ಸಂಕಲ್ಪ ಮಾಡಿದ್ದೇನೆ. ಇಡೀ ದಿನ ಕಾರ್ಯಕರ್ತರು ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸಲು ನಿರ್ಧರಿಸಿದ್ದೇನೆ. ಅಧಿವೇಶನ, ಸಂಪುಟ ಸಭೆ ಸೇರಿದಂತೆ ಇನ್ನಿತರ ಕೆಲಸದ ಒತ್ತಡಗಳಿದ್ದರೆ ಕೆಲವೊಮ್ಮೆ ಬರಲಾಗುವುದಿಲ್ಲ. ಉಳಿದಂತೆ ಕ್ಷೇತ್ರದಲ್ಲೇ ಇದ್ದು ಎಲ್ಲರ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು.