ವಿರೋಧಿಗಳು ನಮ್ಮ ತಪ್ಪನ್ನು ದಿನನಿತ್ಯ ಹುಡುಕುತ್ತಿದ್ದಾರೆ, ಕಾನೂನು ಬಾಹಿರವಾಗಿ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ನಾನು ಹೇಳುವುದಿಲ್ಲ, ಯಾರಿಗೂ ತೊಂದರೆ ಆಗದಂತೆ ನಿಮ್ಮ ಕೆಲಸ ಕಾರ್ಯಗಳನ್ನು ಪ್ರಾಮಾಣಿಕವಾಗಿ ನಿಷ್ಠೆಯಿಂದ ನಿರ್ವಹಿಸುವಂತೆ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಸೂಚಿಸಿದರು.
ಕನಕಪುರ: ಜನ ನಮ್ಮನ್ನು ಗಮನಿಸುತ್ತಿದ್ದು ವಿರೋಧಿಗಳು ನಮ್ಮ ತಪ್ಪನ್ನು ದಿನನಿತ್ಯ ಹುಡುಕುತ್ತಿದ್ದಾರೆ, ಕಾನೂನು ಬಾಹಿರವಾಗಿ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ನಾನು ಹೇಳುವುದಿಲ್ಲ, ಯಾರಿಗೂ ತೊಂದರೆ ಆಗದಂತೆ ನಿಮ್ಮ ಕೆಲಸ ಕಾರ್ಯಗಳನ್ನು ಪ್ರಾಮಾಣಿಕವಾಗಿ ನಿಷ್ಠೆಯಿಂದ ನಿರ್ವಹಿಸುವಂತೆ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಸೂಚಿಸಿದರು.
ನಗರಸಭೆ ಸಭಾಂಗಣದಲ್ಲಿ ತಾಲೂಕು ಮಟ್ಟದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರಿ ಅಧಿಕಾರಿಗಳು ತಮ್ಮ ಕಚೇರಿಗೆ ಸಂಬಂಧಪಟ್ಟ ಪ್ರತಿಯೊಂದೂ ಫೈಲ್ ನ್ನು ಪರೀಶೀಲಿಸಿ ಆದಷ್ಟೂ ಬೇಗನೆ ಅವುಗಳ ವಿಲೇವಾರಿ ಮಾಡುವ ಮೂಲಕ ಜನಸ್ನೇಹಿ ಅಧಿಕಾರಿಗಳಾಗಿ ಕೆಲಸ ನಿರ್ವಹಿಸಯವಂತೆ ಸಲಹೆ ನೀಡಿದರು.
ಕಾಡಾನೆಗಳ ನಿಯಂತ್ರಣಕ್ಕೆ ಕ್ರಮ ವಹಿಸಿ: ತಾಲೂಕಿನಲ್ಲಿ ಕಾಡಾನೆ ದಾಳಿಯಿಂದ ರೈತರು ಕಂಗಲಾಗಿದ್ದಾರೆ. ಅರಣ್ಯ ಅಧಿಕಾರಿಗಳು ಕೊಂಬುಗಳು ಬಂದವರಂತೆ ವರ್ತಿಸುತ್ತಿದ್ದು ಕಾಡಾನೆ ದಾಳಿಯ ನಿಯಂತ್ರಣಕ್ಕೆ ಪರಿಹಾರದ ಬಗ್ಗೆ ಅಧ್ಯಯನ ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು.
ಯಾವುದೇ ಒಬ್ಬ ಬಗರ್ ಹುಕುಂ ಸಾಗುವಳಿ ರೈತನನ್ನು ಒಕ್ಕಲೆಬ್ಬಿಸುವ ಅಧಿಕಾರ ನಿಮಗಿಲ್ಲ ಎಂಬುದನ್ನು ಮರೆಯದಿರಿ, ಹಳ್ಳಿ ಗಳಲ್ಲಿ ಓಡಾಡಲು ರಸ್ತೆಗೆ ಅವಕಾಶ ನೀಡುತ್ತಿಲ್ಲ ಎಂಬ ದೂರುಗಳು ಹೆಚ್ಚಿಗೆ ಕೇಳಿ ಬರುತ್ತಿವೆ. ಇದಕ್ಕೆಲ್ಲ ನಾನಾಗಲೀ ನಮ್ಮ ಸರ್ಕಾರವಾಗಲೀ ಅವಕಾಶ ನೀಡುವುದಿಲ್ಲ ಎಂದು ಅರಣ್ಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲ: ಭ್ರಷ್ಟಾಚಾರಕ್ಕೆ ನಾನು ಎಂದೂ ಆಸ್ಪದ ನೀಡುವುದಿಲ್ಲ, ತಾಲ್ಲೂಕಿನಲ್ಲಿ ಇಂತಹ ಪ್ರಕರಣಗಳು ಕಂಡು ಬಂದರೆ ನೇರವಾಗಿ ತಹಸೀಲ್ದಾರ್ ಹಾಗೂ ಉಪ ವಿಭಾಗಾಧಿಕಾರಿಗಳೇ ಹೊಣೆ ಹೊರಬೇಕು.
ಸರ್ಕಾರಿ ಕಚೇರಿಯಲ್ಲಿ ಅಧಿಕಾರಿಗಳು ಲಂಚ ಕೇಳಿದರೆ ಸಾರ್ವಜನಿಕರು ದೂರು ನೀಡಲು ಎಲ್ಲಾ ಸರ್ಕಾರಿ ಕಚೇರಿಗಳ ಫಲಕದಲ್ಲಿ ದೂರವಾಣಿ ಸಂಖ್ಯೆ ನಮೂದಿಸುವಂತೆ ಸೂಚನೆ ನೀಡಿದರು.
ನಗರಸಭಾ ವ್ಯಾಪ್ತಿಯಲ್ಲಿ ಇ -ಖಾತಾ ಮಾಡಿಸಿಕೊಡುವುದಾಗಿ ನಂಬಿಸಿ ಸಾರ್ವಜನಿಕರಿಂದ ಹಣ ಪಡೆದು ವಂಚನೆ ಮಾಡಿರುವ ಬಗ್ಗೆ ವರದಿ ಬಂದಿದೆ.
ಬಗ್ಗೆ ತನಿಖೆ ಮಾಡಿ ಯಾರೇ ತಪ್ಪು ಮಾಡಿದ್ದರೂ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿ ನಾವು ಯಾರ ರಕ್ಷಣೆಯನ್ನು ಮಾಡುವುದಿಲ್ಲ. ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿಭಾಯಿಸುವಂತೆ ಸೂಚನೆ ನೀಡಿದ ಅವರು, ಪಂಚಾಯತಿ ಮಟ್ಟದಲ್ಲಿ ಸೌಹಾರ್ದತೆ ಕಾಯ್ದುಕೊಳ್ಳಬೇಕು.
ಪಂಚಾಯತಿಗೆ ಅದರದೇ ಆದ ಅಧಿಕಾರ ಇದ್ದು ಬರಗಾಲ ಪರಿಸ್ಥಿತಿಯಲ್ಲಿ ನರೇಗಾ ಯೋಜನೆಯಲ್ಲಿ 150 ದಿನಗಳ ಕೂಲಿ ಕೊಡಿಸಲು ಹೋರಾಟ ಮಾಡುತ್ತಿದ್ದು ಕೇಂದ್ರ ಸರ್ಕಾರ ನಮ್ಮ ಮನವಿಗೆ ಸ್ಪಂದಿಸುವ ವಿಶ್ವಾಸ ವ್ಯಕ್ತಪಡಿಸಿದರು.
ಸಭೆಯಲ್ಲಿ ಸಂಸದ ಡಿ.ಕೆ.ಸುರೇಶ್, ವಿಧಾನ ಪರಿಷತ್ ಸದಸ್ಯ ಎಸ್. ರವಿ, ಜಿಲ್ಲಾಧಿಕಾರಿ ಅವಿನಾಶ್ ರಾಜೇಂದ್ರ ಮೆನನ್, ಜಿಪಂ ಸಿಇಒ ದಿಗ್ವಿಜಯ್ ಬೋಡ್ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ತಹಸೀಲ್ದಾರ್ ಸ್ಮಿತಾರಾಮು, ನಗರಸಭಾ ಆಯುಕ್ತ ಮಹದೇವ್, ವೃತ್ತ ನಿರೀಕ್ಷಕ ಕೆ.ಎಲ್.ಕೃಷ್ಣ, ಮಿಥುನ್ ಶಿಲ್ಲಿ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಎಲ್ಲಾ ಸರ್ಕಾರಿ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಕೆಪಿಎಸ್ ಶಾಲೆಗಳಿಗೆ ಸ್ಥಳ ಗುರುತಿಸಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಗಳಲ್ಲಿ ಒಂದಾದ ಕರ್ನಾಟಕ ಪಬ್ಲಿಕ್ ಶಾಲೆಗಳ ಆರಂಭಕ್ಕೆ ಜಾಗ ಗುರುತಿಸಬೇಕು. ನಮ್ಮ ಜಿಲ್ಲೆಯಲ್ಲಿ ಮೊದಲು ಶಾಲೆಗಳು ಆರಂಭವಾಗುವ ಕಡೆಗೆ ಅಧಿಕಾರಿಗಳು ಗಮನಹರಿಸಬೇಕು. ಈ ಜಿಲ್ಲೆಗೆ ತರುವ ಯೋಜನೆಗಳನ್ನು ಜಾರಿ ಮಾಡುವ ಜವಾಬ್ದಾರಿ ಅಧಿಕಾರಿಗಳದ್ದಾಗಿದ್ದು, ಜಿಲ್ಲೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸರ್ಕಾರಿ ಅಧಿಕಾರಿಗಳು ಕೇಂದ್ರ ಕಚೇರಿಯ ಸ್ಥಾನದಲ್ಲೇ ವಾಸ ಮಾಡಬೇಕು.
ಬೆಂಗಳೂರಿನಿಂದ ಪ್ರತಿನಿತ್ಯ ಬಂದು ಹೋಗುವವರು ನಿಮ್ಮ ಗಂಟು ಮೂಟೆ ಕಟ್ಟಿಕೊಂಡು ಇಲ್ಲಿಯೇ ವಾಸ ಮಾಡಬೇಕು, ಇಲ್ಲೇ ಇದ್ದು ಕೆಲಸ ಮಾಡಲು ಆಗದಿದ್ದರೆ ನೀವುಗಳು ಬೇರೆ ಕಡೆಗೆ ವರ್ಗಾವಣೆ ಮಾಡಿಸಿಕೊಂಡು ಹೋಗುವಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಕುಡಿವ ನೀರು ಸಮಸ್ಯೆಗೆ ನಿಗಾವಹಿಸಿ: ರಾಜ್ಯದಲ್ಲಿ ಈ ಬಾರಿ ಮಳೆಯ ಕೊರತೆಯಿಂದ ನೀರಿನ ಅಭಾವ ಹೆಚ್ಚಾಗಲಿದ್ದು ಕುಡಿಯುವ ನೀರಿಗೆ ಎಲ್ಲೂ ಸಮಸ್ಯೆ ಆಗದಂತೆ ಪ್ರತಿ ಹಳ್ಳಿಗೂ ಹೋಗಿ ಕುಡಿಯುವ ನೀರಿನ ಕೊರತೆ ಬಾರದಂತೆ ಎಚ್ಚರ ವಹಿಸಿ ಸಮಸ್ಯೆ ಇದ್ದ ಕಡೆ ನೀರಿನ ವ್ಯವಸ್ಥೆ ಮಾಡಬೇಕು, ಆಹಾರ ಸರಬರಾಜು ಇಲಾಖೆ ಮೂಲಕ ನೀಡುವ ಉಚಿತ ಪಡಿತರ ಪದಾರ್ಥ ಜನರಿಗೆ ಸರಿಯಾಗಿ ತಲುಪುತ್ತಿದೆ ಎಂದು ಪರಿಶೀಲನೆ ಹಾಗೂ ಗ್ಯಾರಂಟಿ ಯೋಜನೆ ಜಾರಿಯ ಬಗ್ಗೆ ಗಮನ ಹರಿಸಬೇಕು,ಯಾರಿಗೆ ಯೋಜನೆ ತಲುಪಿಲ್ಲ ಅವರ ಸಮಸ್ಯೆ ಬಗೆಹರಿಸಿ ಗ್ಯಾರಂಟಿ ಯೋಜನೆಗಳು ನೈಜ ಫಲಾನುಭವಿಗಳಿಗೆ ತಲುಪಿಸುವ ಕಡೆ ಗಮನಹರಿಸು ವಂತೆ ಸೂಚಿಸಿದರು.