- ತಾಲೂಕು ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೊಳಗಾದ ಮೂವರು ಮಹಿಳೆಯರ ಸಾವು ಪ್ರಕರಣ
ಕನ್ನಡಪ್ರಭ ವಾರ್ತೆ ತುಮಕೂರುಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ಮೂವರು ಮಹಿಳೆಯರ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ವೈದ್ಯರು ಸೇರಿ ಆರು ಮಂದಿ ತಲೆದಂಡವಾಗಿದೆ.ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ.ಎಚ್.ಎಂ.ಪೂಜಾ, ಶುಶ್ರೂಷಾಧಿಕಾರಿ ಪದ್ಮಾವತಿ ಹಾಗೂ ಓಟಿ ತಂತ್ರಜ್ಞ ಕಿರಣ್ ಎಂಬುವರನ್ನು ಕರ್ತವ್ಯದಿಂದ ವಜಾಗೊಳಿಸಲಾಗಿದೆ. ಕಾಯಂ ಸಿಬ್ಬಂದಿಯಾದ ಶುಶ್ರೂಷಕಿಯರಾದ ನಾಗರತ್ನಮ್ಮ, ಮಾರಕ್ಕ ಎಂಬುವವರನ್ನು ಕರ್ತವ್ಯ ಲೋಪದ ಆಧಾರದ ಮೇಲೆ ಇಲಾಖಾವಾರು ವಿಚಾರಣೆ ಬಾಕಿ ಇರಿಸಿ ಅಮಾನತು ಮಾಡಲಾಗಿದೆ.ಉಳಿದಂತೆ ಪ್ರಭಾರ ಆಡಳಿತ ವೈದ್ಯಾಧಿಕಾರಿ ಡಾ.ಕಿರಣ್ ಅವರನ್ನು ವರ್ಗಾವಣೆ ಮಾಡಿದ್ದು, ಅವರ ಜಾಗಕ್ಕೆ ಎ.ಎಸ್.ಎಲ್.ಬಾಬು ಅವರನ್ನು ನೇಮಿಸಲಾಗಿದೆ ಎಂದು ಡಿಎಚ್‌ಓ ಡಾ.ಮಂಜುನಾಥ್ ತಿಳಿಸಿದ್ದಾರೆ.7 ಮಂದಿಗೆ ನೋಟಿಸ್: ಪ್ರಕರಣ ಸಂಬಂಧ ಕಾರಣ ಕೇಳಿ ಏಳು ಮಂದಿಗೆ ನೋಟಿಸ್ ನೀಡಲಾಗಿದೆ. ಇದರಲ್ಲಿ ಅಮಾನತು ಮತ್ತು ವಜಾಗೊಂಡ ಆರು ಮಂದಿ ಜತೆಗೆ ಆಸ್ಪತ್ರೆಯ ಅನಸ್ತೇಶಿಯಾ ತಜ್ಞೆ ಡಾ.ನಮ್ರತಾ ಅವರೂ ಸೇರಿದ್ದಾರೆ. ಶಸ್ತ್ರಚಿಕಿತ್ಸೆ ವೇಳೆ ಡಾ.ನಮ್ರತಾ ಅವರ ಕರ್ತವ್ಯಲೋಪವೂ ಕಂಡು ಬಂದಿದ್ದು, ಇವರ ವಿರುದ್ಧ ಕ್ರಮಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ ಆಯುಕ್ತರಿಗೆ ವರದಿ ನೀಡಲಾಗಿದೆ.ಒಂದೇ ದಿನ ಶಸ್ತ್ರಚಿಕಿತ್ಸೆ: ಫೆ.22 ರಂದು ಪಾವಗಡದಲ್ಲಿರುವ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆದಿದ್ದು, ಒಟ್ಟು ಏಳು ಮಂದಿಗೆ ಸಂತಾನಹರಣ, ಸಿಸೇರಿಯನ್ ಮತ್ತು ಗರ್ಭಕೋಶದ ಆಪರೇಶನ್ ಮಾಡಲಾಗಿದೆ. ಆಪರೇಷನ್ ನಡೆದ ದಿನವೇ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆ ಮೃತಪಟ್ಟಿದ್ದು, ಇನ್ನಿಬ್ಬರ ಸ್ಥಿತಿ ಗಂಭೀರವಾಗಿದ್ದ ಕಾರಣ ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಪೈಕಿ ಒಬ್ಬರು ಶುಕ್ರವಾರ ಮತ್ತೊಬ್ಬರು ಸೋಮವಾರ ಅಸುನೀಗಿದ್ದರು. ಈ ಸಂಬಂಧ ತನಿಖೆಗೆ ತಂಡವೊಂದನ್ನೂ ರಚಿಸಲಾಗಿತ್ತು.ಆಸ್ಪತ್ರೆಗೆ ತನಿಖಾ ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಿ ವರದಿ ಕೊಟ್ಟಿದೆ. ಜತೆಗೆ ಆರೋಗ್ಯ ಇಲಾಖೆಯ ರಾಜ್ಯಮಟ್ಟದ ಉಪ ನಿರ್ದೇಶಕರು ಕೂಡಾ ತನಿಖೆ ನಡೆಸಿದ್ದು, ಅವರ ವರದಿ ಆಧಾರದ ಮೇಲೆ ಶಸ್ತ್ರಚಿಕಿತ್ಸೆ ವೇಳೆ ಕರ್ತವ್ಯ ಲೋಪ ಆಗಿರುವುದು, ಸೋಂಕು ನಿವಾರಣೆ, ಸೋಂಕು ತಡೆಗೆ ಕೆಲ ಅಗತ್ಯ ಕ್ರಮಗಳನ್ನು ಕೈಗೊಳ್ಳದಿರುವುದು ಬೆಳಕಿಗೆ ಬಂದಿದೆ ಎಂದು ಡಿಎಚ್‌ಒ ಮಾಹಿತಿ ನೀಡಿದ್ದಾರೆ. ಘಟನೆ ಕುರಿತು ಸಂಪೂರ್ಣ ವರದಿ ಬರಲು 20 ದಿನ ಬೇಕಿದ್ದು, ಮೃತ ಮಹಿಳೆಯರ ಕುಟುಂಬಕ್ಕೆ ತಲಾ 4 ಲಕ್ಷ ರು. ಪರಿಹಾರ ಕೊಡಲು ಇಲಾಖೆಯಿಂದ ತೀರ್ಮಾನ ಮಾಡಲಾಗಿದೆ ಎಂದು ತಿಳಿದುಬಂದಿದೆ.