ಕನ್ನಡಪ್ರಭ ವಾರ್ತೆ ದಾವಣಗೆರೆ
ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಜಿಲ್ಲಾ ಪೊಲೀಸ್ ಅಧೀಕ್ಷಕ ಉಮಾ ಪ್ರಶಾಂತ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುರೇಶ್ ಇಟ್ನಾಳ್ ಶುಭಾಶಯ ಪತ್ರ ನೀಡಿ ಅಭಿಯಾನಕ್ಕೆ ಚಾಲನೆ ನೀಡಿದರು.
ಸೌಂದರ್ಯ ಹೆಚ್ಚಿಸುವ ಆಭರಣ ಶಿಕ್ಷಣಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಮಾತನಾಡಿ, ಶಿಕ್ಷಣ ಕೇವಲ ಜ್ಞಾನಾರ್ಜನೆ ಮಾತ್ರವಲ್ಲ, ಜೀವನ ರೂಪಿಸಿಕೊಳ್ಳಲು ಮಾರ್ಗದರ್ಶನ ನೀಡುತ್ತದೆ. ಶಿಕ್ಷಣ ವೈಯಕ್ತಿಕ ಬದುಕಿನ ಸೌಂದರ್ಯ ಹೆಚ್ಚಿಸುವ ಆಭರಣವಾಗಿದೆ. ತಂದೆ, ತಾಯಿಗಳು ಶಿಕ್ಷಣ ದೀಕ್ಷೆ ಕೊಡಿಸಿದ್ದಾರೆ. ಶಿಕ್ಷಕರು ಸಹ ಪಾಠ ಮಾಡುವ ಮೂಲಕ ಭವಿಷ್ಯ ಭವ್ಯವಾಗಲಿ ಎಂದು ಪ್ರಾರ್ಥಿಸುತ್ತಾರೆ. ತಮ್ಮ ಬದುಕನ್ನು ಕಟ್ಟಿಕೊಳ್ಳಲು ಎಲ್ಲರೂ ಪ್ರೋತ್ಸಾಹ, ಸಹಕಾರ ನೀಡುತ್ತಿದ್ದಾರೆ. ಇವೆಲ್ಲವನ್ನು ಸದ್ಬಳಕೆ ಮಾಡಿಕೊಂಡು ಹೆಣ್ಣು ಮಗುವನ್ನು ರಕ್ಷಿಸಿ, ಹೆಣ್ಣು ಮಗುವನ್ನು ಓದಿಸಿ ಅಭಿಯಾನದಲ್ಲಿ ಕೈಜೋಡಿಸಬೇಕೆಂದು ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಶಿಕ್ಷಣ ಮುಂದುವರಿಸಿ ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಿರಿ ಎಂದು ತಿಳಿಸಿದರು.