ಸುರಪುರ: ಹಲವಾರು ವರ್ಷಗಳಿಂದ ನಿರಂತರವಾಗಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದು, ಎರಡು ಸಕರ್ರರಗಳು ಬದಲಾದವು, ಮೂವರು ಮುಖ್ಯಮಂತ್ರಿ ಬದಲಾದರೂ ನಮ್ಮ ಸಮುದಾಯಕ್ಕೆ ಇನ್ನೂ ನ್ಯಾಯ ಸಿಕ್ಕಿಲ್ಲ. ಮೀಸಲಾತಿ ದೊರೆಯುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಪಂಚಮಸಾಲಿ ಮಹಾಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ರೈತ ಸಮುದಾಯವಾದ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಿಗುವವರೆಗೂ ಹೋರಾಟ ನಡೆಯುತ್ತಿರುತ್ತದೆ. ಯಾವುದೇ ಪಕ್ಷದ ಸರಕಾರ ಬಂದರೂ ನಾವು ಎದೆಗುಂದದೆ ಹೋರಾಟ ಮುಂದುವರಿಯುತ್ತದೆ ಎಂದರು.
ಎಲ್ಲ ಮುಖ್ಯಮಂತ್ರಿಗಳು ಕೇವಲ ಮಾಡುತ್ತೇವೆ, ನೋಡುತ್ತೇವೆ ಎನ್ನುವುದಕ್ಕೆ ಸೀಮಿತವಾಗಿದ್ದಾರೆ. ನಮ್ಮ ಸಮಾಜದ ಮಕ್ಕಳಿಗೆ ಶೈಕ್ಷಣಿಕ, ಔದ್ಯೋಗಿಕವಾಗಿ ಮೀಸಲಾತಿಯಿಂದ ಸಾಕಷ್ಟು ಲಾಭ ದೊರೆಯುತ್ತದೆ. ನಮ್ಮ ಮೀಸಲಾತಿ ಹೋರಾಟದಿಂದಲೇ ಅಧಿಕಾರಕ್ಕೆ ಬಂದ ಸರ್ಕಾರ, ಶಾಸಕರು, ಸಚಿವರು ಮುಖ್ಯಮಂತ್ರಿಗಳ ಮುಂದೆ ಮಾತನಾಡುವುದಕ್ಕೆ ಹಿಂದೆ ಮುಂದೆ ನೋಡುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.ಮಾ.2ರ ಶನಿವಾರದಂದು ಹುಣಸಗಿ ಪಟ್ಟಣದಲ್ಲಿ ಯಾದಗಿರಿ ಜಿಲ್ಲೆಯ ವತಿಯಿಂದ ಹೆದ್ದಾರಿಯಲ್ಲಿ ಲಿಂಗಪೂಜೆ ಮೂಲಕ ಪಂಚಮಸಾಲಿ ಬೃಹತ್ ಹೋರಾಟ ಮಾಡಲಾಗುವುದು. ಮಾ.10ರಂದು ಕಲಬುರಗಿಯಲ್ಲಿ ಪ್ರಥಮ ಬಾರಿಗೆ ಕಲ್ಯಾಣ ಕರ್ನಾಟಕ ಪಂಚಮಸಾಲಿಯ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು. ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.
ಸಮಾಜದ ಜಿಲ್ಲಾಧ್ಯಕ್ಷ ಮಲ್ಲನಗೌಡ, ಮುಖಂಡರಾದ ಸಂಗಣ್ಣ ತುಂಬಗಿ, ಬಸವರಾಜ ಮಲಗಲದಿನ್ನಿ, ಮುರೆಗೆಣ್ಣ ದೇಸಾಯಿ, ಭೀಮು ಮಲ್ಕಾಪುರ, ಶಿವಣ್ಣ ಬಳಬಟ್ಟಿ, ಈರಣ್ಣ ಸೊನ್ನದ, ರಮೇಶ ಸೊನ್ನದ, ಮಲ್ಲನಗೌಡ, ರಮೇಶ ತುಂಬಗಿ, ಭೋಗಪ್ಪ ಅಸ್ಕಿ, ಬಸವರಾಜ ಬೈಚಬಾಳ, ವೀರಣ್ಣ ಕಲಕೇರಿ, ಚೆನ್ನು ವಾಲಿ, ಚಂದ್ರು ಡೊಣ್ಣುರು, ಚಂದ್ರು ಮನಗೂಳಿ, ನಿಂಗಣ್ಣ ಅವಟಿ, ವೀರೇಶ ಮಲ್ಲಾ, ಸೋಮು, ಸಂತೋಷ, ಶಂಕರ ಬಿರಾದಾರ ಸೇರಿದಂತೆ ಇತರರಿದ್ದರು. ನಾಗಭೂಷಣ ನಿರೂಪಿಸಿದರು. ಡಿ.ಸಿ. ಪಾಟೀಲ್ ಸ್ವಾಗತಿಸಿದರು. ಗೀರೀಶ ಬ್ಯಾಕೋಡ ವಂದಿಸಿದರು.