ಪ್ರಧಾನಿ ನರೇಂದ್ರ ಮೋದಿ ಅವರು ವಿಮಾನದಲ್ಲಿ ಬಂದಿಳಿದು, ವಿಮಾನ ನಿಲ್ದಾಣ ಉದ್ಘಾಟಿಸಿದ ಶಿವಮೊಗ್ಗ ಏರ್‌ಪೋರ್ಟ್ ಅಸ್ಥಿತ್ವಕ್ಕೆ ಬಂದು ಮಂಗಳವಾರಕ್ಕೆ ವರ್ಷ ಪೂರೈಸಿದೆ. ಅಂದಿನಿಂದ ನಿತ್ಯ ನೂರಾರು ಪ್ರಯಾಣಿಕರು ವಿವಿಧೆಡೆ ಹಾರಾಟ ನಡೆಸುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಪ್ರಧಾನಿ ನರೇಂದ್ರ ಮೋದಿ ಅವರು ವಿಮಾನದಲ್ಲಿ ಬಂದಿಳಿದು, ವಿಮಾನ ನಿಲ್ದಾಣ ಉದ್ಘಾಟಿಸಿದ ಶಿವಮೊಗ್ಗ ಏರ್‌ಪೋರ್ಟ್ ಅಸ್ಥಿತ್ವಕ್ಕೆ ಬಂದು ಮಂಗಳವಾರಕ್ಕೆ ವರ್ಷ ಪೂರೈಸಿದೆ. ಅಂದಿನಿಂದ ನಿತ್ಯ ನೂರಾರು ಪ್ರಯಾಣಿಕರು ವಿವಿಧೆಡೆ ಹಾರಾಟ ನಡೆಸುತ್ತಿದ್ದಾರೆ.
2023ರ ಆಗಷ್ಟ್ 31ರಿಂದ 2024ರ ಫೆ.26ರವರೆಗೆ ಶಿವಮೊಗ್ಗದ ಸೋಗಾನೆ ಬಳಿಯ ವಿಮಾನ ನಿಲ್ದಾಣದಿಂದ 288 ಬಾರಿ ವಿಮಾನಗಳು ಹಾರಾಟ ನಡೆಸಿದೆ. 11,681 ಪ್ರಯಾಣಿಕರು ಮಂದಿ ವಿವಿಧೆಡೆಯಿಂದ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ.
ಅದೇ ರೀತಿ 13,401 ಪ್ರಯಾಣಿಕರು ಶಿವಮೊಗ್ಗದಿಂದ ವಿವಿಧೆಡೆಗೆ ತೆರಳಿದ್ದಾರೆ. ಸದ್ಯ ಶಿವಮೊಗ್ಗದಿಂದ ಹಾರಾಟ ನಡೆಸುತ್ತಿರುವ ಎಲ್ಲ ವಿಮಾನಗಳು ಶೇ.60 ರಿಂದ ಶೇ.70ರಷ್ಟು ಭರ್ತಿಯಾಗುತ್ತಿವೆ. ವೀಕೆಂಡ್ ಮತ್ತು ಹಬ್ಬಗಳ ಸಂದರ್ಭ ವಿಮಾನದ ಟಿಕೆಟ್‌ಗಳು ಸಂಪೂರ್ಣ ಬುಕ್ ಆಗುತ್ತಿವೆ.
2023ರ ಫೆ.27ರಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಮಾನ ನಿಲ್ದಾಣ ಉದ್ಘಾಟಿಸಿದ್ದರು. ಇದಕ್ಕೂ ಮುನ್ನ ಪ್ರಧಾನಿಯ ವಿಮಾನ ಫೆ.21ರಂದು ಟ್ರಯಲ್ ಲ್ಯಾಂಡಿಂಗ್ ಮಾಡಿತ್ತು. ವಾಯುಸೇನೆಯ ಪೈಲೆಟ್‌ಗಳು ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮೊದಲ ಬಾರಿ ವಿಮಾನವನ್ನು ಇಳಿಸಿ ಇತಿಹಾಸ ನಿರ್ಮಿಸಿದ್ದರು.
ಬಳಿಕ ಕಳೆದ ಆಗಸ್ಟ್ 31ರಂದು ಶಿವಮೊಗ್ಗ ವಿಮಾನ ನಿಲ್ದಾಣದಿಂದ ನಾಗರಿಕ ವಿಮಾನಯಾನ ಸೇವೆ ಆರಂಭವಾಯಿತು. ಇಂಡಿಗೋ ಸಂಸ್ಥೆಯ ಎಟಿಆರ್ 72 ಮಾದರಿಯ ವಿಮಾನ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬಂದು ಲ್ಯಾಂಡ್ ಆಯಿತು.
ವಾಟರ್ ಸಲ್ಯೂಟ್ ನೀಡಿ ವಿಮಾನವನ್ನು ಸ್ವಾಗತಿಸಲಾಗಿತ್ತು. ಶಿವಮೊಗ್ಗ – ಬೆಂಗಳೂರು, ಬೆಂಗಳೂರು – ಶಿವಮೊಗ್ಗ ಮಧ್ಯೆ ನಿತ್ಯ ಇಂಡಿಗೋ ವಿಮಾನ ಸಂಚರಿಸುತ್ತಿದೆ.
ರಾಜ್ಯದ 9ನೇ ಡೊಮೆಸ್ಟಿಕ್ ನಿಲ್ದಾಣ: ಶಿವಮೊಗ್ಗ ವಿಮಾನ ನಿಲ್ದಾಣವು ರಾಜ್ಯದ 9ನೇ ಡೊಮೆಸ್ಟಿಕ್ ನಿಲ್ದಾಣ ಎನಿಸಿದೆ. ರಾಜ್ಯದಲ್ಲಿ ಸರ್ಕಾರ ನಿರ್ವಹಣೆ ಮಾಡುತ್ತಿರುವ ಏಕೈಕ ವಿಮಾನ ನಿಲ್ದಾಣ ಇದಾಗಿದೆ.
ಈ ಗ್ರೀನ್‌ಫೀಲ್ಡ್ ಏರ್‌ಪೋರ್ಟ್ ಅನ್ನು ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿರ್ವಹಿಸುತ್ತಿದೆ. ಎಲ್ಲ ಬಗೆಯ ಹೈಟೆಕ್ ವ್ಯವಸ್ಥೆಯು ಇಲ್ಲಿದೆ.
ರಾಜ್ಯದ ಡೊಮಾಸ್ಟಿಕ್ ವಿಮಾನ ನಿಲ್ದಾಣಗಳ ಪೈಕಿ ಹೈ ಸೆಕ್ಯೂರಿಟಿ ವಿಮಾನ ನಿಲ್ದಾಣ ಇದಾಗಿದೆ. ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ (ಕೆಎಸ್‌ಐಎಸ್‌ಎಫ್) ಪೊಲೀಸರು ಭದ್ರತೆಯ ಉಸ್ತುವಾರಿ ಹೊತ್ತಿದ್ದಾರೆ. ವಿಮಾನ ನಿಲ್ದಾಣದ ಸುತ್ತಲು ಕೆಎಸ್‌ಐಎಸ್‌ಎಫ್ ಸಿಬ್ಬಂದಿ ನಿಯೋಜಿಸಲಾಗಿದೆ.
ನವೆಂಬರ್ 21ರಂದು ಸ್ಟಾರ್ ಏರ್‌ಲೈನ್ಸ್ ಸೇವೆ ಆರಂಭವಾಯಿತು. ಹೈದರಾಬಾದ್ – ಶಿವಮೊಗ್ಗ, ಶಿವಮೊಗ್ಗ – ತಿರುಪತಿ, ತಿರುಪತಿ – ಶಿವಮೊಗ್ಗ, ಶಿವಮೊಗ್ಗ – ಗೋವಾ, ಗೋವಾ – ಶಿವಮೊಗ್ಗ, ಶಿವಮೊಗ್ಗ – ಹೈದರಾಬಾದ್ ಮಾರ್ಗಗಳಲ್ಲಿ ಸ್ಟಾರ್ ಏರ್ ಸೇವೆ ಒದಗಿಸುತ್ತಿದೆ.
ಖಾಸಗಿ ವಿಮಾನ, ಏರ್ ಆಂಬ್ಯುಲೆನ್ಸ್: ಕಳೆದ ಒಂದು ವರ್ಷದಲ್ಲಿ ಖಾಸಗಿ ವಿಮಾನಗಳು, ಏರ್ ಆಂಬ್ಯುಲೆನ್ಸ್ ಕೂಡ ಇಲ್ಲಿಂದ ಹಾರಾಟ ನಡೆಸಿವೆ. ಮಧ್ಯೆ ಕರ್ನಾಟಕದ ಪ್ರಮುಖ ವಿಮಾನ ನಿಲ್ದಾಣ ಆಗಿರುವುದರಿಂದ ಅಕ್ಕಪಕ್ಕದ ಜಿಲ್ಲೆಗಳಿಗೆ ತೆರಳುವ ಗಣ್ಯರು, ಉದ್ಯಮಿಗಳು ಈ ವಿಮಾನ ನಿಲ್ದಾಣ ಬಳಸಿಕೊಂಡಿದ್ದಾರೆ.
ವಿವಿಧ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರು, ಹಲವು ನಟ, ನಟಿಯರು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಒಮ್ಮೆ ತುರ್ತು ಚಿಕಿತ್ಸೆ ಅಗ್ಯವಿದ್ದರಿಂದ ಒಬ್ಬರಿಗಾಗಿ ಏರ್ ಆಂಬುಲೆನ್ಸ್ ಕೂಡ ವಿಮಾನ ನಿಲ್ದಾಣದಿಂದ ಕಾರ್ಯಾಚರಿಸಿದೆ.
ಸರಕು ಸಾಗಣೆಗೆ ಅನುಮತಿ ಕೇಳಿರುವ ಸಂಸ್ಥೆಗಳು ಪೋಸ್ಟ್, ಕೊರಿಯರ್ ಸೇರಿದಂತೆ ಸಣ್ಣಪುಟ್ಟ ಸರಕು ಸಾಗಣೆಗೆ ವಿಮಾನಯಾನ ಸಂಸ್ಥೆಗಳು ಅನುಮತಿ ಕೇಳಿವೆ. ಈಗ ಹಾರಾಟ ನಡೆಸುತ್ತಿರುವ ವಿಮಾನದಲ್ಲೆ ಕಾರ್ಗೊ ಕೊಂಡೊಯ್ಯಲಾಗುತ್ತದೆ.
ಇದರಿಂದ ವಿಮಾನಯಾನ ಸಂಸ್ಥೆಗಳಿಗೆ ಲಾಭವಾಗಲಿದೆ. ಆದರೆ ಕಾರ್ಗೊದ ಭದ್ರತಾ ಪರಿಶೀಲನೆ ಅತ್ಯಂತ ಕಠಿಣವಾಗಿರಲಿದೆ. ಹಾಗಾಗಿ, ಕಾರ್ಗೊಗೆ ಪ್ರತ್ಯೇಕ ಟರ್ಮಿನಲ್ ಕಟ್ಟಡದ ಅಗತ್ಯವಿದೆ. ಆದ್ದರಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.