ಪತ್ನಿ ಕೊಲೆಗೈದ ಡಾಕ್ಟರ್‌ ಕಿಲ್ಲರ್‌ ಮಹೇಂದ್ರ ರೆಡ್ಡಿ ಜೈಲು ಪಾಲು

KannadaprabhaNewsNetwork |  
Published : Oct 24, 2025, 02:00 AM ISTUpdated : Oct 24, 2025, 04:31 AM IST
Kruthika Reddy-Mahendra Reddy Pre Wedding PhotoShoot

ಸಾರಾಂಶ

ಹೆಚ್ಚಿನ ಪ್ರಮಾಣದ ಅನೆಸ್ತೇಶಿಯಾ ನೀಡಿ ಪತ್ನಿ ಡಾ.ಕೃತಿಕಾ ರೆಡ್ಡಿಯನ್ನು ಕೊಲೆ ಮಾಡಿದ ಆರೋಪ ಎದುರಿಸುತ್ತಿರುವ ಡಾ.ಮಹೇಂದ್ರ ರೆಡ್ಡಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನಗರದ 29ನೇ ಎಸಿಎಂಎಂ ನ್ಯಾಯಾಲಯ ಗುರುವಾರ ಆದೇಶಿಸಿದೆ.

  ಬೆಂಗಳೂರು :  ಹೆಚ್ಚಿನ ಪ್ರಮಾಣದ ಅನೆಸ್ತೇಶಿಯಾ ನೀಡಿ ಪತ್ನಿ ಡಾ.ಕೃತಿಕಾ ರೆಡ್ಡಿಯನ್ನು ಕೊಲೆ ಮಾಡಿದ ಆರೋಪ ಎದುರಿಸುತ್ತಿರುವ ಡಾ.ಮಹೇಂದ್ರ ರೆಡ್ಡಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನಗರದ 29ನೇ ಎಸಿಎಂಎಂ ನ್ಯಾಯಾಲಯ ಗುರುವಾರ ಆದೇಶಿಸಿದೆ.

ಪ್ರಕರಣ ಸಂಬಂಧ ಮಾರತ್‌ಹಳ್ಳಿ ಠಾಣಾ ಪೊಲೀಸರು ಆರೋಪಿ ಡಾ.ಮಹೇಂದ್ರ ಅವರನ್ನು ಗುರುವಾರ ನಗರದ 29ನೇ ಎಸಿಎಂಎಂ ಕೋರ್ಟ್‌ಗೆ ಹಾಜರುಪಡಿಸಿದರು. ನ್ಯಾಯಾಲಯವು ಆರೋಪಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿತು. .

2024ರ ಮೇ 24ರಂದು ಮಹೇಂದ್ರ ರೆಡ್ಡಿ ಮತ್ತು ಕೃತಿಕಾ ರೆಡ್ಡಿ ಮದುವೆಯಾಗಿದ್ದು, ಕೃತಿಕಾ ರೆಡ್ಡಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚರ್ಮರೋಗ ತಜ್ಞೆಯಾಗಿದ್ದು, ಮಹೇಂದ್ರ ರೆಡ್ಡಿ ಅದೇ ಆಸ್ಪತ್ರೆಯಲ್ಲಿ ಜನರಲ್ ಸರ್ಜನ್‌ ಆಗಿದ್ದರು. ಮದುವೆಯಾದ ಕೆಲ ತಿಂಗಳ ಬಳಿಕ ಕೃತಿಕಾ ರೆಡ್ಡಿ ಅಜೀರ್ಣ, ಗ್ಯಾಸ್ಟ್ರಿಕ್‌ ಮತ್ತು ಲೋ ಶುಗರ್‌ ಸಮಸ್ಯೆಯಿಂದ ಬಳಲುತ್ತಿದ್ದರು. ದಿನೇ ದಿನ ಆರೋಗ್ಯ ಸಮಸ್ಯೆ ಹೆಚ್ಚಾಗಿತ್ತು. ಇದರಿಂದ ಪತ್ನಿಯನ್ನು ಮಹೇಂದ್ರ ರೆಡ್ಡಿ ತವರು ಮನೆಗೆ ಕಳುಹಿಸಿದ್ದರು. ಅಲ್ಲಿಗೆ ಹೋಗಿ ಆಕೆಗೆ ಈತನೇ ಚಿಕಿತ್ಸೆ ನೀಡುತ್ತಿದ್ದ. 2025ರ ಏ.23ರಂದು ಆರೋಪಿ ಪತ್ನಿ ಕೃತಿಕಾಗೆ ಹೆಚ್ಚಿನ ಪ್ರಮಾಣದ ಅನಸ್ತೇಶಿಯಾ ನೀಡಿದ್ದರಿಂದ ಆಕೆ ಕೋಮಾ ಸ್ಥಿತಿ ತಲುಪಿದ್ದಾಳೆ. ಕೂಡಲೇ ಆಕೆಯನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಳು. ಇದರಿಂದ ಮೃತಳ ಪೋಷಕರು ಯಾವುದೇ ಅನುಮಾನ ಇಲ್ಲ ಎಂದು ದೂರು ನೀಡಿದ್ದರು.

ಆದರೆ, ಘಟನಾ ಸ್ಥಳದಲ್ಲಿ ದೊರೆತ ವೈದ್ಯೆಗೆ ಬಳಸುತ್ತಿದ್ದ ಕೆನಾಲ್‌, ಇಂಜೆಕ್ಷನ್‌ಗಳು ಹಾಗೂ ಇತರೆ ವೈದ್ಯಕೀಯ ಪರಿಕರಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅಲ್ಲದೆ, ಮೃತದೇಹದ ಕೆಲ ಸ್ಯಾಂಪಲ್‌ಗಳನ್ನು ಎಫ್ಎಸ್ಎಲ್‌ಗೆ ಕಳಿಸಲಾಗಿತ್ತು. ಆರು ತಿಂಗಳ ಬಳಿಕ ಮರಣೋತ್ತರ ಪರೀಕ್ಷಾ ವರದಿ ಬಂದಿತ್ತು. ಅದರಲ್ಲಿ ಹೆಚ್ಚುವರಿ ಅನಸ್ತೇಷಿಯಾದಿಂದಲೇ ಆಕೆ ಮೃತಪಟ್ಟಿದ್ದಾಳೆ ಎಂದು ವರದಿಯಲ್ಲಿ ಉಲ್ಲೇಖಿಸಿತ್ತು.

ಈ ಹಿನ್ನೆಲೆಯಲ್ಲಿ ಕೃತಿಕಾಳ ತಂದೆಯಿಂದ ದೂರು ಪಡೆದು, ಪ್ರಕರಣ ದಾಖಲಿಸಿಕೊಂಡಿದ್ದ ನಗರದ ಮಾರತ್‌ಹಳ್ಳಿ ಠಾಣಾ ಪೊಲೀಸರು, ಆರೋಪಿಯನ್ನು ಅ.15ರಂದು ಉಡುಪಿಯ ಮಣಿಪಾಲದಲ್ಲಿ ಬಂಧಿಸಿದ್ದರು. ಪರಸ್ತ್ರಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎನ್ನಲಾದ ಮಹೇಂದ್ರ ರೆಡ್ಡಿ, ಅನಾರೋಗ್ಯ ಮುಚ್ಚಿಟ್ಟದ್ದಕ್ಕೆ ಕೋಪಗೊಂಡು ಪತ್ನಿ ವೈದ್ಯೆ ಕೃತಿಕಾ ರೆಡ್ಡಿ ಕೊಲೆಗೈದ ಆರೋಪವಿದೆ. ವಿಚಾರಣೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಗುರುವಾರ ನಗರದ 29ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

PREV
Read more Articles on

Recommended Stories

ವಾಲ್ಮೀಕಿ ಸಮುದಾಯಕ್ಕೆ ಅನ್ಯಾಯ ಆಗಲ್ಲ ಎಂಬ ಸಂದೇಶ ರವಾನೆ!
ಸಿಎಂ ಪುತ್ರನ ಹೇಳಿಕೆಯಿಂದ ರಾಜ್ಯ ರಾಜಕೀಯದಲ್ಲಿ ಸಂಚಲನ