ಕನ್ನಡಪ್ರಭ ವಾರ್ತೆ ಬೆಂಗಳೂರು
ಅನ್ಯ ಧರ್ಮೀಯ ಯುವತಿಗೆ ವಿವಾಹವಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡು ವಂಚಿಸಿದ ಆರೋಪದ ಮೇರೆಗೆ ಮುಸ್ಲಿಂ ಯುವಕನ ವಿರುದ್ಧ ಎಚ್‌ಎಸ್‌ಆರ್ ಪೊಲೀಸ್ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಶಿವರಾಮಕಾರಂತ ನಗರದ ಮೊಹಮ್ಮದ್ ಇಶಾಕ್ ಮೇಲೆ ಆರೋಪ ಬಂದಿದ್ದು, ಆಂಧ್ರಪ್ರದೇಶ ಮೂಲದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಆರೋಪಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾದ ಸಂತ್ರಸ್ತೆಯನ್ನು ಮದುವೆ ಆಗುವುದಾಗಿ ನಂಬಿಸಿ ಲೈಂಗಿಕವಾಗಿ ಶೋಷಣೆ ಮಾಡಿದ ಬಳಿಕ ತನ್ನ ಧರ್ಮದ ಯುವತಿ ಜತೆ ಮೊಹಮ್ಮದ್ ವಿವಾಹವಾಗುತ್ತಿದ್ದಾನೆ ಎಂದು ಆರೋಪಿಸಲಾಗಿದೆ.
ಇನ್‌ಸ್ಟಾಗ್ರಾಂ ಗೆಳೆಯಎಚ್ಎಸ್ಆರ್ ಲೇಔಟ್‌ನ ಮುನೇಶ್ವರ ಬ್ಲಾಕ್‌ನ ಪಿಜಿಯಲ್ಲಿ ಆಂಧ್ರಪ್ರದೇಶ ಮೂಲದ ಸಂತ್ರಸ್ತೆ ನೆಲೆಸಿದ್ದು, ಖಾಸಗಿ ಕಂಪನಿಯಲ್ಲಿ ಆಕೆ ಉದ್ಯೋಗದಲ್ಲಿದ್ದಾಳೆ. 2020ರಲ್ಲಿ ಇನ್‌ಸ್ಟಾಗ್ರಾಂ ಮೂಲಕ ಆಕೆಗೆ ಮೊಹಮ್ಮದ್ ಪರಿಚಯವಾಗಿದೆ. ಬಳಿಕ ಚಾಟಿಂಗ್ ನಡೆದು ಪರಸ್ಪರ ಆತ್ಮೀಯರಾಗಿದ್ದಾರೆ. ಮೊಬೈಲ್ ಸಂಖ್ಯೆಗಳ ವಿನಿಮಯವಾಗಿ ಒಡನಾಟ ಹೆಚ್ಚಾಗಿದೆ. ಈ ಸ್ನೇಹವು ಪ್ರೇಮವಾಗಿ ಬದಲಾಗಿದೆ. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಥಣಿಸಂದ್ರ ಸಮೀಪದ ಮಾಲ್‌ಗೆ ಪ್ರಿಯತಮೆಯನ್ನು ಆತ ಕರೆದೊಯ್ದಿದ್ದ. ಅಲ್ಲಿ ನನ್ನ ಕುಟುಂಬದ ಹಿರಿಯರನ್ನು ಒಪ್ಪಿಸಿ ಮದುವೆ ಆಗುವುದಾಗಿ ಮೊಹಮ್ಮದ್ ಪ್ರಸ್ತಾಪಿಸಿದ್ದಾನೆ. ತರುವಾಯ ಹೋಟೆಲ್‌ಗೆ ಹೋಗಿ ಇಬ್ಬರು ಸಮ್ಮತಿಯಾಗಿ ಖಾಸಗಿ ಕ್ಷಣಗಳನ್ನು ಕಳೆದಿದ್ದಾರೆ. ನಂತರ ಮದುವೆ ಆಗುವುದಾಗಿ ನಂಬಿಸಿ ಮತ್ತೆ ಗೆಳತಿಯನ್ನು ಲೈಂಗಿಕವಾಗಿ ಮೊಹಮ್ಮದ್ ಬಳಸಿಕೊಂಡಿದ್ದಾನೆ. ಕೆಲ ದಿನಗಳ ಬಳಿಕ ಪ್ರಿಯತಮೆ ಮದುವೆ ವಿಷಯ ತೆಗೆದಾಗ ಆತ ತಳ್ಳಿ ಹಾಕುತ್ತಿದ್ದ. ಕೊನೆಗೆ ಆಕೆಯಿಂದ ದೂರ ಸರಿಯಲು ಯತ್ನಿಸಿ ಮೊಹಮ್ಮದ್ ಸಂಪರ್ಕ ಕಡಿತಗೊಳಿಸಿದ್ದ. ಬಳಿಕ ಬೇರೆ ಯುವತಿ ಜತೆ ಆತ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದ ಎಂದು ದೂರಲಾಗಿದೆ. ನನ್ನ ತಂಟೆಗೆ ಬರಬೇಡಿ: ಮತ್ತೆ ಥಣಿಸಂದ್ರದ ಮಾಲ್ ಬಳಿ ಭೇಟಿಯಾಗಿ ತನಗೆ ಕುಟುಂಬ ಬಿಟ್ಟು ಬರಲು ಸಾಧ್ಯವಿಲ್ಲ. ಕುಟುಂಬದವರು ಗೊತ್ತು ಮಾಡಿದ ಯುವತಿ ಜತೆ ವಿವಾಹವಾಗುತ್ತಿದ್ದೇನೆ. ನೀನು ಬೇರೆ ದಾರಿ ನೋಡಿಕೋ ನನ್ನ ತಂಟೆಗೆ ಬರಬೇಡಿ. ನನಗೆ ಕಾಲ್ ಮಾಡಿ ತೊಂದರೆ ಮಾಡಿದರೆ ಪರಿಸ್ಥಿತಿ ಸರಿಯಿರುವುದಿಲ್ಲ ಎಂದು ಬೆದರಿಕೆ ಹಾಕಿರುವುದಾಗಿ ಸಂತ್ರಸ್ತೆ ದೂರಿನಲ್ಲಿ ಹೇಳಿದ್ದಾರೆ.
ಮತಾಂತರ ಆರೋಪಈ ಪ್ರಕರಣ ಕುರಿತು ದಾಖಲಾದ ಎಫ್‌ಐಆರ್ ಅಥವಾ ದೂರಿನಲ್ಲಿ ಮತಾಂತರ ಬಗ್ಗೆ ಪ್ರಸ್ತಾಪವಾಗಿಲ್ಲ. ಆದರೆ ಘಟನೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸುವಾಗ ಮತಾಂತರ ವಿಷಯ ಪ್ರಸ್ತಾಪಿಸಿದ್ದಾಳೆ.
ಆರಂಭದಲ್ಲಿ ತನಗೆ ಮದುವೆ ಆಗಲು ಯಾವುದೇ ಷರತ್ತುಗಳನ್ನು ಮೊಹಮ್ಮದ್ ವಿಧಿಸಿರಲಿಲ್ಲ. ಆದರೆ ಆತನ ಕುಟುಂಬದವರು ಮಾತ್ರ ಹುಡುಗಿ ಇಸ್ಲಾಂಗೆ ಮತಾಂತರ ಮಾಡಿಸಬೇಕು ಎಂದಿದ್ದರಂತೆ. ಮುಸ್ಲಿಂ ರೀತಿ ರಿವಾಜು ತಿಳಿಯಲು 45 ದಿನಗಳು ಸಮಯ ಕೊಡುವುದಾಗಿ ಹೇಳಿದ್ದರು. ಆದರೆ ಇದಕ್ಕೊಪ್ಪದೆ ಹೋದಾಗ ನನ್ನನ್ನು ತೊರೆದು ತನ್ನದೇ ಧರ್ಮದ ಯುವತಿ ಜತೆ ಆರೋಪಿ ವಿವಾಹವಾಗಲು ಮೊಹಮ್ಮದ್ ಮುಂದಾಗಿದ್ದಾನೆ ಎಂದು ಆರೋಪಿಸಿದ್ದಾಳೆ.