ಮಣಿಪಾಲ: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಸಮುದಾಯ ಔಷಧಿ ವಿಭಾಗದಲ್ಲಿ ವೈದ್ಯರ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ವಿಶೇಷ ಸಂದರ್ಭ ಕೆ.ಎಂ.ಸಿ.ಯ ಹಿರಿಯ ಕಲಾವಿದರಾದ ಶ್ರೀನಾಥ್ ಮಣಿಪಾಲ್ ಅವರು ವೈದ್ಯರ ದಿನಾಚರಣೆಯ ಮಹತ್ವ ಸಾರುವ ಆಕ್ರಿಲಿಕ್ ವರ್ಣಚಿತ್ರವನ್ನು ಬಿಡಿಸಿ ಪ್ರದರ್ಶಿಸಿದರು. ಈ ಪೇಂಟಿಂಗನ್ನು ಸಮುದಾಯ ಔಷಧಿ ವಿಭಾಗದ ಮುಖ್ಯಸ್ಥ ಡಾ. ಅಶ್ವಿನಿ ಕುಮಾರ್ ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ವಿಭಾಗದ ವೈದ್ಯರು, ಸಿಬ್ಬಂದಿ ಮತ್ತು ಅಧ್ಯಾಪಕರು ಉಪಸ್ಥಿತರಿದ್ದರು. ಈ ವರ್ಣಚಿತ್ರವು ವೈದ್ಯರೊಬ್ಬರು ಜಗತ್ತನ್ನು (ಗ್ಲೋಬ್) ಕೈಯಲ್ಲಿ ಹಿಡಿದಿರುವುದನ್ನು ತೋರಿಸುತ್ತದೆ. ಇದು ವೈದ್ಯರು ಇಡೀ ಪ್ರಪಂಚಕ್ಕೆ ಚಿಕಿತ್ಸೆ ನೀಡುತ್ತಿರುವುದನ್ನು ಬಿಂಬಿಸುತ್ತದೆ. ಚಿತ್ರದ ಮೇಲ್ಭಾಗದಲ್ಲಿ ವೈದ್ಯರ ಮೇಲಿನ ದೌರ್ಜನ್ಯವನ್ನು ನಿಲ್ಲಿಸಿ ಎಂಬ ಘೋಷವಾಕ್ಯವನ್ನು ಬರೆಯಲಾಗಿತ್ತು. ಈ ವರ್ಷದ ವಿಷಯವಾದ ಮಾಸ್ಕ್‌ನ ಹಿಂದೆ: ಆರೈಕೆ ಮಾಡುವವರ ಆರೈಕೆ ಎಂಬುದನ್ನು ಉಲ್ಲೇಖಿಸಲಾಗಿತ್ತು. ವೈದ್ಯರು, ಸಿಬ್ಬಂದಿ ಮತ್ತು ಆಸ್ಪತ್ರೆಗೆ ಭೇಟಿ ನೀಡಿದ ರೋಗಿಗಳ ಮತ್ತವರು ಸಂಬಂಧಿಕರು ಈ ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.