ಬಡವರ ಪಾಲಿಗೆ ವೈದ್ಯರು ದೇವರಾಗಿ, ರಾಕ್ಷಸರಾಗಬೇಡಿ: ಡಿಸಿ ಸಂಗಪ್ಪ

KannadaprabhaNewsNetwork |  
Published : Feb 13, 2026, 03:00 AM IST
ಜಮಖಂಡಿ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಜಿಲ್ಲಾಧಿಕಾರಿ ಸಂಗಪ್ಪ ಭೆಟ್ಟಿ ನೀಡಿ ಪರಿಶಿಲಿಸಿದರು. ಎಸಿ ಶ್ವೇತಾ ಬೀಡಿಕರ, ತಹಸೀಲ್ದಾರ ಅನೀಲ ಬಡಿಗೇರ, ಡಾ. ವಾಸಣ್ಣ ಮುದಿಗೌಡರ, ಡಾ. ರಾಕೇಶ ಬಗಲಿ ಇತರರು ಇದ್ದಾರೆ. | Kannada Prabha

ಸಾರಾಂಶ

ಜಮಖಂಡಿ ನಗರದ ಸರ್ಕಾರಿ ಆಸ್ಪತ್ರೆ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಬುಧವಾರ ಜಿಲ್ಲಾಧಿಕಾರಿ ಸಂಗಪ್ಪ ಎಂ.ಅವರು ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ಆಸ್ಪತ್ರೆಯ ಅವ್ಯವಸ್ಥೆ ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ವೈದ್ಯಾಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಕನ್ನಡಪ್ರಭ ವಾರ್ತೆ ಜಮಖಂಡಿ

ನಗರದ ಸರ್ಕಾರಿ ಆಸ್ಪತ್ರೆ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಬುಧವಾರ ಜಿಲ್ಲಾಧಿಕಾರಿ ಸಂಗಪ್ಪ ಎಂ.ಅವರು ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ಆಸ್ಪತ್ರೆಯ ಅವ್ಯವಸ್ಥೆ ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ವೈದ್ಯಾಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಆಸ್ಪತ್ರೆಯ ದುಸ್ಥಿತಿಗೆ ಆಕ್ರೋಶ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಸರ್ಕಾರಿ ಆಸ್ಪತ್ರೆಗೆ ಬಡವರೇ ಹೆಚ್ಚಾಗಿ ಬರುತ್ತಾರೆ. ಅವರು ನಿಮ್ಮನ್ನು ದೇವರು ಎಂದು ನಂಬಿರುತ್ತಾರೆ. ನೀವು ರಾಕ್ಷಸರಾಗಬೇಡಿ. ರೋಗಿಗಳಿಗೆ ಉತ್ತಮ ಸೇವೆ ನೀಡಿ. ಸರ್ಕಾರ ನಿಮಗೆ ಉತ್ತಮ ವೇತನ ನೀಡುತ್ತಿದೆ, ಅದಕ್ಕೆ ತಕ್ಕಂತೆ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿ ಎಂದು ಖಡಕ್ಕಾಗಿ ಎಚ್ಚರಿಕೆ ನೀಡಿದರು.

ಆಸ್ಪತ್ರೆಯ ಆವರಣದಲ್ಲಿನ ಅಶುಚಿತ್ವ ಹಾಗೂ ಸಾರ್ವಜನಿಕ ಶೌಚಗೃಹಗಳು ಭರ್ತಿಯಾಗಿರುವುದನ್ನು ಕಂಡು ಕೆರಳಿದ ಜಿಲ್ಲಾಧಿಕಾರಿಗಳು, ಸಂಬಂಧಪಟ್ಟವರಿಗೆ ಕೂಡಲೇ ನೋಟಿಸ್ ನೀಡಿ. ಇಲ್ಲದಿದ್ದರೆ ನಾನು ನಿಮಗೆ (ಮುಖ್ಯ ವೈದ್ಯಾಧಿಕಾರಿಗಳಿಗೆ) ನೋಟಿಸ್ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಹೆರಿಗೆ ಆಸ್ಪತ್ರೆಯ ಕೊಠಡಿಯಲ್ಲಿ ಸೂಕ್ತ ನಿಯಮಗಳ ಪಾಲನಾ ಫಲಕಗಳನ್ನು ಅಳವಡಿಸಲು ಸೂಚಿಸಿದರು.

ಗರ್ಭಿಣಿಯರಿಗೆ ಆಸ್ಪತ್ರೆಯಲ್ಲೇ ಸ್ಕ್ಯಾನಿಂಗ್ ಸೌಲಭ್ಯ ಒದಗಿಸಬೇಕು. ಹೊರಗಡೆ ಸ್ಕ್ಯಾನಿಂಗ್‌ಗೆ ಏಕೆ ಬರೆದು ಕಳುಹಿಸುತ್ತೀರಿ? ಎಂದು ಪ್ರಶ್ನಿಸಿದ ಅವರು, ಆಸ್ಪತ್ರೆಗೆ ಅಗತ್ಯವಿರುವ ಸ್ಕ್ಯಾನಿಂಗ್ ಯಂತ್ರಗಳ ಬಗ್ಗೆ ಮಾಹಿತಿ ನೀಡಿದರೆ ಸರ್ಕಾರದಿಂದ ತರಿಸಿಕೊಡುವುದಾಗಿ ಭರವಸೆ ನೀಡಿದರು. ಜನರಿಕ್ ಔಷಧಿಗಳ ವಿತರಣೆಯಲ್ಲಿನ ಲೋಪಗಳ ಬಗ್ಗೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

ಆಸ್ಪತ್ರೆಯ ಮುಖ್ಯದ್ವಾರದಲ್ಲಿ ಎಬಿಆರ್‌ಕೆ ಸಿಬ್ಬಂದಿ ನೇಮಿಸಿ, ರೋಗಿಗಳಿಗೆ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಬೇಕು. ವಯೋವೃದ್ಧರು ನೆಲದ ಮೇಲೆ ಕುಳಿತಿರುವುದನ್ನು ಕಂಡು ಅಸಮಾಧಾನಗೊಂಡ ಡಿಸಿ, ರೋಗಿಗಳಿಗೆ ಆಸನ ಹಾಗೂ ಬಿಸಿಲು, ಮಳೆಯಿಂದ ರಕ್ಷಣೆ ಪಡೆಯಲು ಸೂರಿನ ವ್ಯವಸ್ಥೆ ಮಾಡುವಂತೆ ಸೂಚಿಸಿದರು.

ಆಸ್ಪತ್ರೆಯ ಅವ್ಯವಸ್ಥೆಯ ನಡುವೆಯೂ 24 ಗಂಟೆಗಳ ಕಾಲ ರೋಗಿಗಳಿಗೆ ಅತ್ಯುತ್ತಮ ಸೇವೆ ನೀಡುತ್ತಿರುವ ಲ್ಯಾಬ್ ಟೆಕ್ನಿಷಿಯನ್ ವೀರುಪಾಕ್ಷಯ್ಯ ವಿ. ಅವರ ಕರ್ತವ್ಯ ನಿಷ್ಠೆಯನ್ನು ಜಿಲ್ಲಾಧಿಕಾರಿಗಳು ಮುಕ್ತಕಂಠದಿಂದ ಶ್ಲಾಘಿಸಿದರು.

ಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ತಹಸೀಲ್ದಾರ್‌ ಅನೀಲ ಬಡಿಗೇರ, ಮುಖ್ಯ ವೈದ್ಯಾಧಿಕಾರಿ ಡಾ.ವಾಸಣ್ಣ ಮುದಿಗೌಡರ, ಡಾ.ರಾಕೇಶ ಬಗಲಿ, ಡಾ.ಕೃಷ್ಣಾ ಬಣ್ಣದ, ಡಾ.ಗಂಗಾಧರ ಹಾಗೂ ಮುಖಂಡ ಅಬುಬಕರ ಕುಡಚಿ ಉಪಸ್ಥಿತರಿದ್ದರು.

ರೋಗಿಗಳ ಕೊಠಡಿಗೆ ಭೇಟಿ ನೀಡದ ಜಿಲ್ಲಾಧಿಕಾರಿ:

ಜಿಲ್ಲಾಧಿಕಾರಿಗಳು ಆಸ್ಪತ್ರೆಯ ಆವರಣ ಹಾಗೂ ಆಡಳಿತಾತ್ಮಕ ವಿಭಾಗಗಳನ್ನು ಪರಿಶೀಲಿಸಿದರೂ ಒಳರೋಗಿಗಳ ಕೊಠಡಿಗಳಿಗೆ ಭೇಟಿ ನೀಡಿ ಅವರ ಕುಂದುಕೊರತೆ ವಿಚಾರಿಸಲಿಲ್ಲ ಎಂಬ ಮಾತುಗಳು ಕೇಳಿಬಂದವು. ಇದು ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಲ್ಲಿ ಕೊಂಚ ಬೇಸರ ಮೂಡಿಸಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಡಿದ್ದು ಸಂತ ಸೇವಾಲಾಲರ 287ನೇ ಜಯಂತ್ಯುತ್ಸವ
ಪ್ರತಿಭಟನೆ ಬಳಿಕ ಅರ್ಧ ತಾಸಿನೊಳಗೆ ಕಾಮಗಾರಿ