ರೋಗಿಗಳನ್ನು ಶಸ್ತ್ರ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಕಳುಹಿಸುವ ವೈದ್ಯರು

KannadaprabhaNewsNetwork |  
Published : Jul 18, 2024, 01:40 AM IST
17ಕೆಎಂಎನ್ ಡಿ24 | Kannada Prabha

ಸಾರಾಂಶ

ಆಸ್ಪತ್ರೆಯಲ್ಲಿ ಅಗತ್ಯ ಸೌಲಭ್ಯಗಳಿದ್ದರೂ ಶಸ್ತ್ರಚಿಕಿತ್ಸೆ ಮಾಡದೆ ಎಬಿಆರ್‌ಕೆ ಯೋಜನೆಯಡಿ ಬಹುತೇಕ ರೋಗಿಗಳನ್ನು ಇತರೆ ಆಸ್ಪತ್ರೆಗಳಿಗೆ ಕಳುಹಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಬಗ್ಗೆ ವೈದ್ಯರು ನಡೆಸಿದ ಶಸ್ತ್ರಚಿಕಿತ್ಸೆಗಳ ವಿವರಗಳ ಸಂಪೂರ್ಣ ವರದಿ ಪಡೆದು ಕಡಿಮೆ ಶಸ್ತ್ರಚಿಕಿತ್ಸೆಗಳನ್ನು ಮಾಡಿರುವ ವೈದ್ಯರಿಗೆ ನೊಟೀಸ್ ನೀಡಲಾಗುವುದು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಸಾರ್ವಜನಿಕ ಆಸ್ಪತ್ರೆಯಲ್ಲಿ ಎಲ್ಲಾ ಸೌಲಭ್ಯಗಳ ಜೊತೆಗೆ ತಜ್ಞ ವೈದ್ಯರು ಶಸ್ತ್ರಚಿಕಿತ್ಸೆಗಾಗಿ ರೋಗಿಗಳನ್ನು ಬೇರೆ ಆಸ್ಪತ್ರೆಗಳಿಗೆ ಕಳುಹಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಕುರಿತು ಸಂಪೂರ್ಣ ವರದಿ ಪಡೆದು ಸಂಬಂಧಪಟ್ಟ ವೈದ್ಯರಿಗೆ ನೋಟಿಸ್ ನೀಡಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಆರೋಗ್ಯ ಇಲಾಖೆ ರಾಜ್ಯ ಮುಖ್ಯ ಜಾಗೃತ ಅಧಿಕಾರಿ ಕೆ.ಆರ್.ಶ್ರೀನಿವಾಸ್ ವೈದ್ಯರಿಗೆ ಎಚ್ಚರಿಕೆ ನೀಡಿದರು.

ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿ, ಸ್ತ್ರೀ ರೋಗ ತಜ್ಞರನ್ನು ಹೊರತುಪಡಿಸಿ ಉಳಿದ ವೈದ್ಯರು ಶಸ್ತ್ರಚಿಕಿತ್ಸೆ ಮಾಡುತ್ತಿಲ್ಲ ಎಂಬ ಸಾರ್ವಜನಿಕರಿಂದ ಹಲವು ದೂರುಗಳು ನಮಗೆ ಬಂದಿವೆ ಎಂದರು.

ಆಸ್ಪತ್ರೆಯಲ್ಲಿ ಅಗತ್ಯ ಸೌಲಭ್ಯಗಳಿದ್ದರೂ ಶಸ್ತ್ರಚಿಕಿತ್ಸೆ ಮಾಡದೆ ಎಬಿಆರ್‌ಕೆ ಯೋಜನೆಯಡಿ ಬಹುತೇಕ ರೋಗಿಗಳನ್ನು ಇತರೆ ಆಸ್ಪತ್ರೆಗಳಿಗೆ ಕಳುಹಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಬಗ್ಗೆ ವೈದ್ಯರು ನಡೆಸಿದ ಶಸ್ತ್ರಚಿಕಿತ್ಸೆಗಳ ವಿವರಗಳ ಸಂಪೂರ್ಣ ವರದಿ ಪಡೆದು ಕಡಿಮೆ ಶಸ್ತ್ರಚಿಕಿತ್ಸೆಗಳನ್ನು ಮಾಡಿರುವ ವೈದ್ಯರಿಗೆ ನೊಟೀಸ್ ನೀಡಲಾಗುವುದು ಎಂದು ತಿಳಿಸಿದರು.

ಸ್ತ್ರೀರೋಗ ತಜ್ಞರನ್ನು ಹೊರತುಪಡಿಸಿ ಉಳಿದ ಶಸ್ತ್ರಚಿಕಿತ್ಸೆಗಳನ್ನು ಮಾಡುವಲ್ಲಿ ವಿಫಲರಾಗಿದ್ದಾರೆ. ರೋಗಿಗಳಿಗೆ ಸರ್ಕಾರದ ಸೌಲಭ್ಯಗಳನ್ನು ಸೂಕ್ತವಾಗಿ ನೀಡದಿದ್ದರೆ ಕ್ರಮಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಹಣಕಾಸು ದುರ್ಬಳಕೆ ಹಾಗೂ ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ಬಾರದಿರುವ ಬಗ್ಗೆ ಪರಿಶೀಲನೆ ನಡೆಸಿದ್ದೇನೆ. ವೈದ್ಯರು ರೋಗಿಗಳೊಂದಿಗೆ ಸೌಜನ್ಯದಿಂದ ವರ್ತಿಸದಿರುವುದು, ರೋಗಿಗಳಿಂದ ಹಣ ಪಡೆಯುವುದು ಅಥವಾ ಔಷಧಿಗಳು, ಹಲವಾರು ಬಗೆಯ ರಕ್ತ ಪರೀಕ್ಷೆಗಳನ್ನು ಖಾಸಗಿಗೆ ಬರೆಯುವ ಬಗ್ಗೆ ರೋಗಿಗಳಿಂದ ಗೌಪ್ಯವಾಗಿ ಮಾಹಿತಿ ಪಡೆಯಲಾಗಿದೆ. ರೋಗಿಗಳಿಂದ ಲಂಚ ಪಡೆದರೆ ಅಮಾನತುಗೊಳಿಸಲಾಗುವುದು. ಆಸ್ಪತ್ರೆಯ ಅನುದಾನ ದುರುಪಯೋಗ ಪಡಿಸಿಕೊಂಡರೆ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು ಎಚ್ಚರಿಕೆ ನೀಡಿದರು.

ಆಸ್ಪತ್ರೆಯಲ್ಲಿ ಉತ್ತಮ ಸೌಲಭ್ಯಗಳಿದ್ದು ಅಗತ್ಯ ಔಷಧಿಗಳನ್ನು ಖರೀದಿ ಮಾಡಲು ಸೂಚಿಸಿದ್ದೇನೆ. ಹೊರಗಿನ ಖಾಸಗಿ ಮೆಡಿಕಲ್ ಸ್ಟೋರ್‌ಗಳಿಗೆ ವೈದ್ಯರು ಚೀಟಿ ಬರೆದುಕೊಟ್ಟರೆ ಅಂತಹ ವೈದ್ಯರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಒಳರೋಗಿಗಳಾಗಿ ದಾಖಲಾದರೆ, ಶಸ್ತ್ರಚಿಕಿತ್ಸೆ ಮಾಡಿದರೆ ಸರ್ಕಾರ ಎಬಿಆರ್‌ಕೆ ಯೋಜನೆಯಡಿ ಆಸ್ಪತ್ರೆಗಳು ಹಣ ಪಡೆಯಬಹುದು. ಈ ಆಸ್ಪತ್ರೆಯಲ್ಲಿ ವರ್ಷಕ್ಕೆ4300 ರೋಗಿಗಳು ಈ ಯೋಜನೆಯನ್ನು ಬಳಕೆ ಮಾಡಿಕೊಂಡಿದ್ದು ಸುಮಾರು 75 ಲಕ್ಷ ರು. ಹಣ ಪಡೆದಿದ್ದಾರೆ. ಇದು ಸರಿಯಲ್ಲ. ಇನ್ನಷ್ಟು ಶಸ್ತ್ರಚಿಕಿತ್ಸೆಗಳನ್ನು ಹೆಚ್ಚಿಸಿಕೊಳ್ಳುವಂತೆ ಸೂಚನೆ ನೀಡಿದರು.

ವೈದ್ಯರ ಸಭೆ ನಂತರ ಕೆಲವು ಕಡತಗಳು ಹಾಗೂ ಸಿಬ್ಬಂದಿಯ ಹಾಜರಾತಿಯನ್ನು ಪರಿಶೀಲನೆ ನಡೆಸಿದರು. ವಾರ್ಡ್‌ಗಳಿಗೆ ತೆರಳಿ ರೋಗಿಗಳ ಆರೋಗ್ಯ ವಿಚಾರಿಸಿದರು. ರೋಗಿಯ ಸಂಬಂಧಿಕರಿಂದ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದರು.

ಈ ವೇಳೆ ತಾಲೂಕು ಆರೋಗ್ಯಾಧಿಕಾರಿ ಡಾ.ರಮೇಶ್, ಹಿರಿಯ ವೈದ್ಯ ಡಾ.ವೆಂಕಟೇಶ್, ಡಾ.ವಸಂತಲಕ್ಷ್ಮೀ ಇದ್ದರು.

PREV

Recommended Stories

ನಾಳೆ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌
ಮೈಸೂರು ದಸರಾ ಆನೆಗಳಿಗೆ 630 ಟನ್‌ ಆಹಾರ!