ಸೇವೆ ಮೂಲಕ ಸಮಾನತೆ, ಸಾಮರಸ್ಯ ಸಾಧ್ಯ

KannadaprabhaNewsNetwork |  
Published : Jul 18, 2024, 01:40 AM IST
ಸೇವಾ ಭಾರತೀ | Kannada Prabha

ಸಾರಾಂಶ

ಭಾರತ ಸಾಕಷ್ಟು ಬದಲಾವಣೆ ಕಂಡಿದ್ದರೂ ಸಮಾಜದಲ್ಲಿ ಮೇಲ್ಜಾತಿ, ಕೆಳ ಜಾತಿ ಎಂಬ ತಾರತಮ್ಯ ಭಾವನೆ ಎಲ್ಲೆಡೆ ಕಂಡು ಬರುತ್ತಿದೆ. ಅಸ್ಪೃಶ್ಯತೆಯು ಇನ್ನೂ ಜೀವಂತವಾಗಿದೆ.

ಹುಬ್ಬಳ್ಳಿ:

ಸಮಾಜದಲ್ಲಿ ಗಾಢವಾಗಿ ಬೇರೂರಿರುವ ಅಸಮಾನತೆ ಮತ್ತು ಅಸ್ಪೃಶ್ಯತೆಯನ್ನು ಸೇವೆಯ ಮೂಲಕವೇ ತೊಲಗಿಸಬೇಕು. ಜಾಗೃತಿ ಮೂಡಿಸಬೇಕು ಎಂದು ಆರ್‌ಎಸ್‌ಎಸ್‌ ಕಾರ್ಯವಾಹ ನ. ತಿಪ್ಪೇಸ್ವಾಮಿ ಅಭಿಪ್ರಾಯಪಟ್ಟರು.

ನಗರದಲ್ಲಿ ಬುಧವಾರ ಆಯೋಜಿಸಿದ್ದ ಸೇವಾ ಭಾರತಿ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಅವರು ಮಾತನಾಡಿದರು.ಎಲ್ಲ ವರ್ಗದ ಜನರನ್ನು ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಮಾನತೆ, ಸಾಮರಸ್ಯ ತರಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಸೇವಾ ಭಾರತಿ ಸಂಸ್ಥೆಯು ಮಹತ್ವದ ಹೆಜ್ಜೆ ಇಡಲಿ ಎಂದು ಸಲಹೆ ಮಾಡಿದರು.

ಭಾರತ ಸಾಕಷ್ಟು ಬದಲಾವಣೆ ಕಂಡಿದ್ದರೂ ಸಮಾಜದಲ್ಲಿ ಮೇಲ್ಜಾತಿ, ಕೆಳ ಜಾತಿ ಎಂಬ ತಾರತಮ್ಯ ಭಾವನೆ ಎಲ್ಲೆಡೆ ಕಂಡು ಬರುತ್ತಿದೆ. ಅಸ್ಪೃಶ್ಯತೆಯು ಇನ್ನೂ ಜೀವಂತವಾಗಿದೆ ಎಂದ ಅವರು, ರಾಜ್ಯದ ತಾಲೂಕುವೊಂದರ ಗ್ರಾಪಂ ಅಧ್ಯಕ್ಷ ಸ್ಥಾನ ಪರಿಶಿಷ್ಟ ಮಹಿಳೆಗೆ ಮೀಸಲಾಗಿದ್ದ ಕಾರಣಕ್ಕೆ, ಪಂಚಾಯಿತಿಯ 19 ಸದಸ್ಯರು ಆ ಮಹಿಳೆಯ ಹೆಸರನ್ನು ಸೂಚಿಸಲಿಲ್ಲ. ಸದಸ್ಯರು ಹೆಸರು ಸೂಚಿಸದ ಕಾರಣಕ್ಕೆ ಪ್ರಕರಣ ಕೋರ್ಟ್‌ ಮೆಟ್ಟಿಲೇರಿತು. ಪರಿಶಿಷ್ಟ ಮಹಿಳೆಗೆ ಎರಡೂವರೆ ವರ್ಷ ಅಧಿಕಾರ ಅವಧಿಯನ್ನು ಕೋರ್ಟ್‌ ಐದು ವರ್ಷದವರೆಗೆ ನೀಡಿತ್ತು ಎಂದು ಸಮಾಜದಲ್ಲಿ ಇನ್ನು ಅಸ್ಪೃಶ್ಯತೆ ಇದೆ ಎಂಬುದನ್ನು ಉದಾಹರಣೆ ಸಮೇತ ವಿವರಿಸಿದರು.

ಅವಕಾಶ ವಂಚಿತರಿಗೆ ನೆರವಾಗಬೇಕು. ದುರ್ಬಲರನ್ನು ಸಬಲರನ್ನಾಗಿಸಬೇಕು. ನೊಂದು ಬೆಂದಂತಹ ಜನರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸ ಆಗಬೇಕಿದೆ. ಇದಕ್ಕೆ ಆರ್‌ಎಸ್‌ಎಸ್‌ ಸದಾ ಬೆನ್ನೆಲುಬಾಗಿ ನಿಲ್ಲಲ್ಲಿದೆ ಎಂದು ತಿಳಿಸಿದರು.

ಸಂಸದ ಜಗದೀಶ ಶೆಟ್ಟರ್‌ ಮಾತನಾಡಿ, ಸೇವೆಗೆ ಇನ್ನೊಂದು ಹೆಸರೇ ಸೇವಾ ಭಾರತಿ. ಸೇವೆಯಲ್ಲಿ ಹಿರಿಮೆ, ಗರಿಮೆ ಎನ್ನುವುದಿದ್ದರೆ ಅದು ಸೇವಾ ಭಾರತಿಯದ್ದು. ಸೇವೆಯ ಪ್ರತೀಕವಾಗಿರುವ ಸೇವಾ ಭಾರತಿ ಸಾಮಾಜಿಕ ಪರಿವರ್ತನೆಯಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಸೇವೆ ನೀಡುವ ಕೆಲಸ ಮಾಡಬೇಕಿದೆ ಎಂದರು.

ಕೋರೊನಾ ಅವಧಿಯಲ್ಲಿ ಅತ್ಯುತ್ತಮ ಕೆಲಸ ಮಾಡಿರುವ ಸೇವಾ ಭಾರತಿ, ದೀನ ದಲಿತರು, ವಿಶೇಷಚೇತನರು, ಕೊಳಚೆ ಪ್ರದೇಶದ ಬಡವರ ಬಳಿಗೆ ತೆರಳಿ ಅವರ ಸಮಸ್ಯೆಗಳಿಗೆ ಕಿವಿಯಾಗಿ ಸ್ವಾವಲಂಬಿಗಳನ್ನಾಗಿಸಲು ಇನ್ನು ಹೆಚ್ಚಿನ ರಚನಾತ್ಮಕ ಯೋಜನೆಗಳನ್ನು ಹಮ್ಮಿಕೊಳ್ಳಬೇಕು. ಇದಕ್ಕೆ ಎಲ್ಲ ರೀತಿಯ ಸಹಕಾರ, ಬೆಂಬಲ ನೀಡುವುದಾಗಿ ವಾಗ್ದಾನ ಮಾಡಿದರು.

ಮೂರುಸಾವಿರ ಮಠದ ಜ.ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಸೇವಾ ಭಾರತಿ ರಾಷ್ಟ್ರೀಯ ಅಧ್ಯಕ್ಷ ಪನ್ನಾಲಾ ಬನ್ಸಾಲಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಾಧ್ಯಕ್ಷ ಪೂರ್ಣಚಂದ್ರ ಘಂಟಸಾಲ, ಮಜೇಥಿಯಾ ಫೌಂಡೇಶನ್‌ ಟ್ರಸ್ಟಿ ನಂದಿನಿ ಕಶ್ಯಪ್‌, ಡಾ. ಎಚ್‌.ಡಿ. ಪಾಟೀಲ ಇದ್ದರು.

ಉದ್ಯಮಿಗಳಾದ ಡಾ. ಸಿ.ಎಚ್‌. ವಿ.ಎಸ್‌.ವಿ. ಪ್ರಸಾದ, ಎಚ್‌.ಎನ್‌. ನಂದಕುಮಾರ, ಗೋವಿಂದ ಜೋಶಿ, ಮಹಾದೇವ ಕರಮರಿ, ಜಿತೇಂದ್ರ ಮಜೇಥಿಯಾ, ಕೆಎಸ್‌ಎಸ್‌ ಶಿಕ್ಷಣ ಸಂಸ್ಥೆ ಚೇರಮನ್‌ ರವಿ ದಂಡಿನ ಸೇರಿದಂತೆ ಹಲವಾರು ಗಣ್ಯರು ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡಿದ್ದರು.

ಸೇವಾ ಭಾರತಿ ಕಾರ್ಯದರ್ಶಿ ರಘು ಅಕಮಂಚಿ 25 ವರ್ಷಗಳ ಕಾರ್ಯಚಟುವಟಿಕೆ ವಿವರಿಸಿದರು. ಡಾಕ್ಟರ್‌ ಸೇವಾ, ಮಕ್ಕಳ ಸೇವಾ ಸಂಗಮ ವಿಶೇಷ ವಿಭಾಗಗಳನ್ನು ಆರಂಭಿಸುವುದಾಗಿ ಘೋಷಿಸಿದರು. ಸೇವಾ ಭಾರತಿಯಲ್ಲಿ ಬೆಳೆದ ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನಸೆಳೆದವು.ಹೊಸ ಲಾಂಛನ ಬಿಡುಗಡೆ:

ರಜಮಹೋತ್ಸವ ಅಂಗವಾಗಿ ಸೇವಾ ಭಾರತಿಯು ತನ್ನ ಲಾಂಛನವನ್ನು ಹೊಸದಾಗಿ ರೂಪಿಸಿದ್ದು, ಬೊಗಸೆಯಲ್ಲಿ ಶಿಕ್ಷಣ, ಸ್ವಾವಲಂಬನೆ, ಸ್ವಾಸ್ಥ್ಯ, ಸಾಮಾಜಿಕ ಎಂಬ ಧ್ಯೇಯವಾಕ್ಯ ಒಳಗೊಂಡು ಬೆಳಕು ಚೆಲ್ಲುವ ಹೊಸ ಲಾಂಛನವನ್ನು ಬಿಡುಗಡೆಗೊಳಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ