ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಬೈಪಾಸ್‌ನಿಂದ ಹೊಸಕೋಟೆ ಬೈಪಾಸ್‌ವರೆಗಿನ ರಸ್ತೆಯಲ್ಲಿ ಟೋಲ್ ಸಂಗ್ರಹ ಪ್ರಕ್ರಿಯೆ ನ.17ರಿಂದ ಆರಂಭವಾಗಲಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.
ದಾಬಸ್ ಪೇಟೆ – ಹೊಸೂರು ರಾಷ್ಟ್ರೀಯ ಹೆದ್ದಾರಿಯ ಭಾಗವಾಗಿರುವ ಈ ರಸ್ತೆಯಲ್ಲಿ ದೊಡ್ಡಬಳ್ಳಾಪುರ ಬೈಪಾಸ್ ನಿಂದ ನಲ್ಲೂರು ಟೋಲ್ ವರೆಗಿನ 34.15 ಕಿ.ಮೀ ಗೆ ಟೋಲ್ ಸುಂಕ ವಸೂಲಿ ಪ್ರಾರಂಭವಾಗಲಿದೆ, ನ.17 ರಿಂದ ಟೋಲ್ ಸುಂಕ ಸಂಗ್ರಹ ಪ್ರಾರಂಭವಾಗಲಿದ್ದು, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ದರ ಪಟ್ಟಿಯನ್ನ ಬಿಡುಗಡೆ ಮಾಡಿದೆ.ರಾಷ್ಟ್ರೀಯ ಹೆದ್ದಾರಿ 648ರ ನಾಲ್ಕುಪಥದ ರಸ್ತೆಯ ಕಾಮಗಾರಿಯು ಬಹುತೇಕ ಪೂರ್ಣವಾಗಿದೆ, ಈ ಹೆದ್ದಾರಿಯ ನಿರ್ಮಾಣದಿಂದ ಬೆಂಗಳೂರು ನಗರ ಒಳ ಬರುವ ವಾಹನಗಳಿಗೆ ಬ್ರೇಕ್ ಹಾಕಲಿದೆ ಇದರಿಂದ ನಗರದ ಟ್ರಾಫಿಕ್ ಸಮಸ್ಯೆ ಬಗೆ ಹರಿಯುವುದು, ಬೆಂಗಳೂರು ನಗರದ ಹೊರವರ್ತುಲ ರಸ್ತೆಯಾಗಿ ಇದು ಬಳಕೆಯಾಗಲಿದೆ, ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ ಮಾರ್ಗವಾಗಿ ಹೊಸೂರನ್ನು ತಲುಪಲಿದೆ. 43.15 ಕಿ.ಮೀ ಪ್ರಯಾಣಕ್ಕೆ ವಾಹನ ಸವಾರರು ಟೋಲ್ ಸುಂಕ ಪಾವತಿ ಮಾಡಬೇಕಿದೆ.
ನೂತನ ದರಪಟ್ಟಿಯನ್ನ ಬಿಡುಗಡೆ ಮಾಡಲಾಗಿದ್ದು ಮುಂದಿನ ಮಾರ್ಚ್ 31, 2024ರ ವರೆಗೆ ಟೋಲ್ ಪ್ರಸ್ತುತ ದರಪಟ್ಟಿ ಜಾರಿಯಲ್ಲಿರಲಿದೆ. ಲಘುವಾಹನಗಳ ಏಕಮುಖ ಸಂಚಾರಕ್ಕೆ 70 ರುಪಾಯಿ ನಿಗದಿಪಡಿಸಲಾಗಿದೆ. ಅದೇ ದಿನ ಹಿಂತಿರುಗಿದರೆ 105 ರುಪಾಯಿ ವೆಚ್ಚ ಇರಲಿದೆ. ಲಘು ವಾಣಿಜ್ಯ ವಾಹನಗಳು, ಮಿನಿ ಬಸ್‌ಗಳಿಗೆ ಏಕಮುಖ ರು.115 , ಅದೇ ದಿನ ಹಿಂತಿರುಗಿದರೆ ರು.175, 2 ಆಕ್ಸೆಲ್‌ನ ಬಸ್, ಟ್ರಕ್‌ಗಳಿಗೆ ಏಕಮುಖ ರು.240, ಅದೇ ದಿನ ಮರಳಿ ಬಂದರೆ ರು.360, 3 ಆಕ್ಸೆಲ್‌ನ ವಾಣಿಜ್ಯ ವಾಹನಕ್ಕೆ ಏಕಮುಖ ರು.265, ಅದೇ ದಿನ ಹಿಂತಿರುಗಿದರೆ ರು.395, ಭಾರೀ ವಾಹನಗಳಿಗೆ ಏಕಮುಖ ರು.380, ಅದೇ ದಿನ ಹಿಂತಿರುಗಿದರೆ ರು.565, ಮಿತಿ ಮೀರಿದ ಅಳತೆಯ ವಾಹನಗಳಿಗೆ ಏಕಮುಖ ರು.460, ಅದೇ ದಿನ ಹಿಂತಿರುಗಿದರೆ ರು.690 ನಿಗಧಿಪಡಿಸಲಾಗಿದೆ. ಅಲ್ಲದೆ ಎಲ್ಲ ವಾಹನಗಳಿಗೆ ಮಾಸಿಕ 50 ಪ್ರಯಾಣಗಳಿಗೆ ನಿರ್ದಿಷ್ಟ ಶುಲ್ಕ ಪ್ರಕಟಿಸಲಾಗಿದ್ದು, ಜಿಲ್ಲೆಯ ವ್ಯಾಪ್ತಿಯಲ್ಲಿ ನೊಂದಾಯಿತ ವಾಣಿಜ್ಯವಾಹನಗಳಿಗೆ ಪ್ರತ್ಯೇಕ ಶುಲ್ಕ ಜಾರಿಯಲ್ಲಿರಲಿದೆ ಎಂದು ಪ್ರಕಟಣೆ ತಿಳಿಸಿದೆ.