ದೊಡ್ಡಣಗುಡ್ಡೆ ಕ್ಷೇತ್ರ ಶರನ್ನವರಾತ್ರಿ ಮಹೋತ್ಸವಕ್ಕೆ ಸಜ್ಜು

KannadaprabhaNewsNetwork |  
Published : Oct 09, 2026, 02:45 AM IST
07ದೇವಿ | Kannada Prabha

ಸಾರಾಂಶ

ಇಲ್ಲಿನ ದೊಡ್ಡಣಗುಡ್ಡೆಯ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರವು ಧರ್ಮದರ್ಶಿ ಶ್ರೀ ರಮಾನಂದ ಗುರೂಜಿಯವರ ಮಾರ್ಗದರ್ಶನದಲ್ಲಿ ಅ.11ರಿಂದ 21ರವರೆಗೆ ವೈಭವದ ಶರನ್ನವರಾತ್ರಿ ಮಹೋತ್ಸವಕ್ಕೆ ಸಕಲ ರೀತಿಯಲ್ಲಿ ಸಜ್ಜುಗೊಳ್ಳುತ್ತಿದೆ.

ಉಡುಪಿ: ಇಲ್ಲಿನ ದೊಡ್ಡಣಗುಡ್ಡೆಯ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರವು ಧರ್ಮದರ್ಶಿ ಶ್ರೀ ರಮಾನಂದ ಗುರೂಜಿಯವರ ಮಾರ್ಗದರ್ಶನದಲ್ಲಿ ಅ.11ರಿಂದ 21ರವರೆಗೆ ವೈಭವದ ಶರನ್ನವರಾತ್ರಿ ಮಹೋತ್ಸವಕ್ಕೆ ಸಕಲ ರೀತಿಯಲ್ಲಿ ಸಜ್ಜುಗೊಳ್ಳುತ್ತಿದೆ.

ಈ ನವರಾತ್ರಿ ಮಹೋತ್ಸವದಲ್ಲಿ ಪ್ರತಿದಿನ ಊರ ಪರವೂರ ಭಕ್ತರ ಸೇವಾರೂಪವಾಗಿ ಜೋಡಿ ಚಂಡಿಕಾಯಾಗ, ಸಹಸ್ರನಾಮಾರ್ಚನೆ, ಕಲ್ಪೋಕ್ತ ಪೂಜೆ, ಶ್ರೀರಂಗಪೂಜೆ, ಶ್ರೀ ದುರ್ಗಾ ನಮಸ್ಕಾರ ಪೂಜೆ, ದೀಪಾರಾಧನೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಕ್ಷೇತ್ರದ ಆವರಣ ಮಾತ್ರವಲ್ಲದೆ ಕ್ಷೇತ್ರಕ್ಕೆ ಸಾಗುವ ಮುಖ್ಯ ಮಾರ್ಗದುದ್ದಕ್ಕೂ ವಿವಿಧ ರೀತಿಯ ಅಲಂಕಾರಿಕ ವಿದ್ಯುದ್ದೀಪಗಳಿಂದ ಕಂಗೊಳಿಸುವಂತೆ ಕಲ್ಪಿಸಲಾಗಿದ್ದು, ಇಡೀ ಕ್ಷೇತ್ರವನ್ನು ಸುಣ್ಣಬಣ್ಣಗಳಿಂದ ನವವಧುವಿನಂತೆ ಶೃಂಗರಿಸಲಾಗಿದೆ.ವಿಶೇಷ ಯಾಗ ಮಂಟಪ: ನವರಾತ್ರಿ ಪರ್ವಕಾಲದಲ್ಲಿ ಹೋಮ, ಹವನ, ಚಂಡಿಕಾಯಾಗ, ವಿವಿಧ ಧಾರ್ಮಿಕ ವಿಧಿವಿಧಾನಗಳಿಗಾಗಿ ವಿಶೇಷ ಯಾಗ ಮಂಟಪ ನಿರ್ಮಿಸಲಾಗಿದೆ. ಯಾಗಕ್ಕೆ ಆಗಮಿಸುವ ಭಕ್ತರು, ಋತ್ವಿಜರಿಗೆ ಅನುಕೂಲವಾಗುವಂತೆ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ.ಸಾಂಸ್ಕೃತಿಕ ವೈಭವ:

ಈ ಉತ್ಸವದ ಅವಧಿಯಲ್ಲಿ ಕ್ಷೇತ್ರದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸೂಕ್ತ ವ್ಯವಸ್ಥೆ ಮಾಡಲಾಗುತ್ತಿದೆ. ಕಾರ್ಯಕ್ರಮಗಳನ್ನು ಭಕ್ತರು ಯಾವುದೇ ತೊಂದರೆಯಿಲ್ಲದೆ ವೀಕ್ಷಿಸಲು ಹಾಗೂ ಪಾಲ್ಗೊಳ್ಳಲು ಅನುಕೂಲವಾಗುವ ರೀತಿಯಲ್ಲಿ ಕ್ಷೇತ್ರದ ಆವರಣವನ್ನು ಸಜ್ಜುಗೊಳಿಸಲಾಗುತ್ತಿದೆ. ಇದೇ ವೇಳೆ ಸಾವಿರಾರು ಭಕ್ತರಿಗೆ ಪ್ರತಿದಿನ ನಿತ್ಯ ಮೃಷ್ಟಾನ್ನ ಅನ್ನಸಂತರ್ಪಣೆ ನಡೆಸಲು ಅಗತ್ಯ ಸಿದ್ಧತೆಗಳು ನಡೆಯುತ್ತಿವೆ.

ವ್ಯವಸ್ಥಿತ ಸೌಲಭ್ಯ: ನವರಾತ್ರಿ ಸಂದರ್ಭ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಆಗಮಿಸುವ ನಿರೀಕ್ಷೆಯ ಹಿನ್ನೆಲೆಯಲ್ಲಿ ವಾಹನಗಳ ಪಾರ್ಕಿಂಗ್‌ಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಕುಡಿಯುವ ನೀರು, ಶೌಚಾಲಯ, ಪ್ರಸಾದ ವಿತರಣೆ ಸೇರಿದಂತೆ ಮೂಲಸೌಕರ್ಯಗಳ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗುತ್ತಿದೆ. ಸಾವಿರಾರು ಭಕ್ತರು ಆಗಮಿಸುವುದರಿಂದ ಯಾವುದೇ ಗೊಂದಲ ಉಂಟಾಗದಂತೆ ಸರತಿ ಸಾಲಿನಲ್ಲಿ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಆಧ್ಯಾತ್ಮಿಕ ವಾತಾವರಣ: ನವರಾತ್ರಿಯ 9 ದಿನಗಳ ಕಾಲ ದೇವಿಯ ಆರಾಧನೆ, ಯಾಗ-ಯಜ್ಞ, ಪೂಜೆ, ಭಜನೆ, ಅನ್ನಸಂತರ್ಪಣೆಯ ಮೂಲಕ ಕ್ಷೇತ್ರದ ಆಧ್ಯಾತ್ಮಿಕ ವಾತಾವರಣ ಮತ್ತಷ್ಟು ಕಳೆಗಟ್ಟಲಿದೆ. ಕ್ಷೇತ್ರದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳು ಸುಸೂತ್ರವಾಗಿ ನಡೆಯುವಂತೆ ಹಾಗೂ ಆಗಮಿಸುವ ಪ್ರತಿಯೊಬ್ಬ ಭಕ್ತರಿಗೂ ಯಾವುದೇ ತೊಂದರೆಯಾಗದಂತೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ ಆಚಾರ್ಯ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶ್ರೀಶಾ ಸೌಹಾರ್ದ ಸೊಸೈಟಿ ನಿವ್ವಳ ಲಾಭದಲ್ಲಿ ಶೇ.35ರಷ್ಟು ಏರಿಕೆ
10ರಂದು ಮಾ ‘ರನ್ ಆ್ಯಂಡ್ ರೈಡ್ ಫಾರ್ ಡಿಗ್ನಿಟಿ’