ಕನ್ನಡಪ್ರಭ ವಾರ್ತೆ ಟಿ. ನರಸೀಪುರಮಕ್ಕಳು ಮತ್ತು ಮಹಿಳೆಯರಿಗೆ ಗ್ರಾಪಂ ಆಡಳಿತದ ಬಗ್ಗೆ ಮಾಹಿತಿ ನೀಡಲು ವಾರ್ಷಿಕವಾಗಿ ಮಕ್ಕಳ ಹಾಗೂ ಮಹಿಳಾ ಗ್ರಾಮ ಸಭೆ ನಡೆಸಬೇಕೆಂದು ತಾಪಂ ಇಒ ಪಿ.ಎಸ್. ಅನಂತರಾಜು ಸಲಹೆ ನೀಡಿದರು.ತಾಲೂಕಿನ ದೊಡ್ಡೆಬಾಗಿಲು ಗ್ರಾಮದಲ್ಲಿರುವ ಗ್ರಾಪಂ ಆವರಣದಲ್ಲಿ ಗ್ರಾಪಂಯಿಂದ ಆಯೋಜಿಸಿದ್ದ 2024-2 5ನೇ ಸಾಲಿನ ಮಹಾತ್ಮ ಗಾಂಧಿ ನರೇಗಾ ಯೋಜನೆ ಕ್ರಿಯಾ ಯೋಜನೆಯ, ಮಕ್ಕಳ ಮತ್ತು ಮಹಿಳಾ ಗ್ರಾಮ ಸಭೆಯಲ್ಲಿ ಅವರು ಮಾತನಾಡಿದರು.ಕರಾವಳಿ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿರುವ ಗ್ರಾಪಂಗಳು ನರೇಗಾ ಯೋಜನೆಯನ್ನು ಗ್ರಾಮೀಣ ಅಭಿವೃದ್ಧಿಗೆ ಸದ್ಬಳಕೆ ಮಾಡಿಕೊಂಡು, ಕೇಂದ್ರ ಸರ್ಕಾರದ ಅನುದಾನವನ್ನು ಹಳ್ಳಿಗಳ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದರು.ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯಡಿ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಯಾಗಿದ್ದರಿಂದ ಅಸ್ತಿತ್ವಕ್ಕೆ ಬಂದ ಗ್ರಾಪಂಗಳಲ್ಲಿ ಸ್ಥಳೀಯರು ಚುನಾಯಿತರಾಗಿ ಅಧಿಕಾರ ನಡೆಸಲು ಅನುಕೂಲವಾಯಿತು. ಶೇ.50 ರ ಮಹಿಳಾ ಮೀಸಲು ಸಿಕ್ಕಿದ್ದರಿಂದ ಮಹಿಳೆಯರು ಕೂಡ ಅಧ್ಯಕ್ಷರಾಗಿ ಆಡಳಿತ ನಡೆಸುತ್ತಿದ್ದಾರೆ. ಮಕ್ಕಳು ಮತ್ತು ಮಹಿಳೆಯರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಲು ವಾರ್ಷಿಕವಾಗಿ ಗ್ರಾಮ ಸಭೆಗಳನ್ನು ಆಯೋಜಿಸಬೇಕೆಂದು ಅವರು ತಿಳಿಸಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಎಸ್. ಲಿಂಗರಾಜು ಮಾತನಾಡಿ, ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ 2024-25ನೇ ಸಾಲಿನಲ್ಲಿ ಯೋಜನೆಯನ್ನು ರೂಪಿಸಲಾಗುತ್ತಿದೆ. ವೈಯಕ್ತಿಕ ಹಾಗೂ ಸಮುದಾಯದ ಕಾಮಗಾರಿಗಳಿಗೆ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಅರ್ಜಿ ಸಲ್ಲಿಸಬಹುದು. ಬಳಕೆಯಾದ ಅನುದಾನದ ಬಗ್ಗೆ ಸಾಮಾಜಿಕ ಲೆಕ್ಕಪರಿಶೋಧನಾ ಗ್ರಾಮ ಸಭೆಯಲ್ಲಿ ಸಾರ್ವಜನಿಕವಾಗಿ ಮಾಹಿತಿಯನ್ನು ನೀಡಲಾಗುತ್ತದೆ ಎಂದು ತಿಳಿಸಿದರು.ಬಿಸಿಯೂಟ ಸೇವಿಸಿದ ಅಧಿಕಾರಿಗಳು
ಸಭೆಯ ಬಳಿಕ ಇಒ ಪಿ.ಎಸ್. ಅನಂತರಾಜು ಸೇರಿದಂತೆ ತಾಪಂ ಹಾಗೂ ಗ್ರಾಪಂ ಅಧಿಕಾರಿಗಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟವನ್ನು ಮಕ್ಕಳೊಂದಿಗೆ ಕುಳಿತು ಸೇವಿಸಿದರು. ನಂತರ ಕೂಸಿನ ಮನೆಯೆಂದೇ ಕರೆಯುವ ಶಿಶು ಪಾಲನಾ ಕೇಂದ್ರಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಅಕ್ಷರ ದಾಸೋಹ ಯೋಜನೆಯ ಬಿಸಿಯೂಟ ಹಾಗೂ ಶಿಶುಪಾಲನೆಯ ಕೇಂದ್ರದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.ಅಧ್ಯಕ್ಷತೆಯನ್ನು ಅಧ್ಯಕ್ಷೆ ಐಷಾಸಿದ್ಧಿಕಾ ವಹಿಸಿದ್ದರು. ತಾಪಂ ಯೋಜನಾಧಿಕಾರಿ ಡಾ.ಕೆ. ರಂಗಸ್ವಾಮಿ, ಕಾರ್ಯದರ್ಶಿ ಎಂ. ಶಿವಣ್ಣ, ಸದಸ್ಯರಾದ ಕಾಂತಮ್ಮ, ರಫೀಕ್, ಯಶೋಧ ಮಂಜು, ಶಿಲ್ಪ ಬಸವರಾಜು, ಜ್ಯೋತಿ ಜಗದೀಶ್, ದ್ರಾಕ್ಷಾಯಿಣಿ ರಾಚಪ್ಪ, ಪಿ.ರವಿ, ವಿವಿಧ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು, ಮಹಿಳಾ ಸ್ವಸಹಾಯ ಸಂಘಗಳ ಪ್ರತಿನಿಧಿಗಳು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.