ಕಡಲತೀರಗಳಲ್ಲಿ ಜೀವರಕ್ಷಕರೇ ಅಸಹಾಯಕರು, ಲೈಫ್ ಗಾರ್ಡಗಳಿಗೆ ಸುರಕ್ಷತಾ ಉಪಕರಣಗಳೆ ಇಲ್ಲ

KannadaprabhaNewsNetwork |  
Published : Dec 12, 2024, 12:33 AM ISTUpdated : Dec 12, 2024, 12:52 PM IST
ಉಪಕರಣಗಳು ಇಲ್ಲದಿದ್ದರೂ ಸೇವೆ ಸಲ್ಲಿಸುತ್ತಿರುವ ಲೈಫ್ ಗಾರ್ಡಗಳು  | Kannada Prabha

ಸಾರಾಂಶ

ಕಡಲತೀರದಲ್ಲಿ ಸುರಕ್ಷತೆ ಇಲ್ಲದಿದ್ದರೆ ಕರಾವಳಿಯ ಪ್ರಮುಖ ಆಕರ್ಷಣೆಯಾದ ಕಡಲತೀರ ಪ್ರವಾಸಿಗರಿಂದ ದೂರವಾಗುವ ಅಪಾಯ ಇದೆ.

ವಸಂತಕುಮಾರ್ ಕತಗಾಲ

ಕಾರವಾರ: ಮುರ್ಡೇಶ್ವರ ಕಡಲತೀರದಲ್ಲಿ ಜೀವರಕ್ಷಕ ಸಿಬ್ಬಂದಿಗೆ ಅಗತ್ಯ ಉಪಕರಣಗಳಿಲ್ಲದೆ ಅಪಾಯದಲ್ಲಿ ಸಿಲುಕಿದವರನ್ನು ರಕ್ಷಿಸಲು ಅಸಹಾಯಕ ಪರಿಸ್ಥಿತಿಯಲ್ಲಿ ಇರುವಂತಾಗಿದೆ.

ಮುರ್ಡೇಶ್ವರ ಕಡಲತೀರದಲ್ಲಿ ಮಂಗಳವಾರ ಕೋಲಾರ ಮುಳಬಾಗಿಲಿನ ನಾಲ್ವರು ವಿದ್ಯಾರ್ಥಿಗಳು ಅಸುನೀಗಿದರು. ಅಲ್ಲಿನ ಲೈಫ್ ಗಾರ್ಡ್‌ ಮೂವರನ್ನು ರಕ್ಷಿಸಿದರು. ಆಧುನಿಕ ಉಪಕರಣಗಳನ್ನು ಪ್ರವಾಸೋದ್ಯಮ ಇಲಾಖೆ ಪೂರೈಸಿದ್ದರೆ ಸಮುದ್ರದಲ್ಲಿ ಅಪಾಯದಲ್ಲಿ ಸಿಲುಕಿದವರೂ ಬದುಕುಳಿಯುವ ಸಾಧ್ಯತೆ ಇತ್ತು ಎಂಬ ಅಭಿಪ್ರಾಯ ಸ್ಥಳೀಯರಿಂದ ಕೇಳಿಬಂದಿದೆ.ಮುರ್ಡೇಶ್ವರದಲ್ಲಿ ಆರು ಲೈಫ್ ಗಾರ್ಡಗಳಿದ್ದಾರೆ. 

ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆ ತನಕ ಎರಡು ಶಿಫ್ಟ್‌ಗಳಲ್ಲಿ ಇವರು ಕೆಲಸ ಮಾಡುತ್ತಾರೆ. ಆದರೆ ಕಡಲಿನಲ್ಲಿ ಅಪಾಯದಲ್ಲಿ ಸಿಲುಕಿದವರನ್ನು ರಕ್ಷಣೆ ಮಾಡಬೇಕೆಂದರೆ ಇವರಿಗೆ ಜೆಟ್ ಸ್ಕೀ ಇಲ್ಲ.

 ರೆಸ್ಕ್ಯೂಬೋರ್ಡ್ ಇಲ್ಲ. ರೋಪ್ ಕೂಡ ಇಲ್ಲ. ಲೈಫ್‌ ಗಾರ್ಡ್‌ ಟವರ್ ಸಹ ಇಲ್ಲ. ಹೋಗಲಿ ಪ್ರವಾಸಿಗರನ್ನು ಎಚ್ಚರಿಸಲು ಊದುವ ವಿಶಿಲ್ ಕೂಡ ಲೈಫ್ ಗಾರ್ಡ್‌ ಸಿಬ್ಬಂದಿ ಸ್ವಂತ ಹಣದಿಂದ ಖರೀದಿಸಬೇಕು. ಪ್ರವಾಸೋದ್ಯಮ ಇಲಾಖೆ, ಸಚಿವರು, ಶಾಸಕರು ಬೀಚುಗಳಲ್ಲಿ ಲೈಫ್ ಗಾರ್ಡ್‌ ನೇಮಿಸಲಾಗಿದೆ ಎಂದು ಭಾಷಣ ಮಾಡುತ್ತಿದ್ದಾರೆಯೇ ಹೊರತೂ ಅವರಿಗೆ ಸೌಲಭ್ಯ ಕೊಡಿಸಬೇಕೆಂಬ ಬಗ್ಗೆ ಯೋಚನೆ ಮಾಡಲೂ ಪುರುಸೊತ್ತಿಲ್ಲ.ಕಡಲತೀರದಲ್ಲಿ ಸುರಕ್ಷತೆ ಇಲ್ಲದಿದ್ದರೆ ಕರಾವಳಿಯ ಪ್ರಮುಖ ಆಕರ್ಷಣೆಯಾದ ಕಡಲತೀರ ಪ್ರವಾಸಿಗರಿಂದ ದೂರವಾಗುವ ಅಪಾಯ ಇದೆ. 

ಉತ್ತರ ಕನ್ನಡದ ಕರಾವಳಿ ಪ್ರವಾಸೋದ್ಯಮಕ್ಕೆ ಮುರ್ಡೇಶ್ವರ, ಗೋಕರ್ಣವೇ ಪ್ರಮುಖ ಆಸರೆ. ಹಂಗಾಮಿನಲ್ಲಿ ಪ್ರತಿದಿನ ಸಾವಿರಾರು ಜನರು ಭೇಟಿ ನೀಡುವ ತಾಣಗಳಿವು.ಗೋವಾದ ಕಲ್ಲಂಗೂಟ, ಪೋಲೋಲೆಂ ಮತ್ತಿತರ ಬೀಚುಗಳು ಪ್ರತಿದಿನ ಪ್ರವಾಸಿಗರಿಂದ ತುಂಬಿ ತುಳುಕುತ್ತವೆ. ಆದರೆ ಅಲ್ಲಿ ಪ್ರವಾಸಿಗರು ಅಪಾಯದಲ್ಲಿ ಸಿಲುಕುವುದು ಹಾಗೂ ಸಾವಿನ ಸಂಖ್ಯೆ ತುಂಬ ಕಡಿಮೆ. ಏಕೆಂದರೆ ಅಗತ್ಯ ಪ್ರಮಾಣದಲ್ಲಿ ಜೀವರಕ್ಷಕ ಸಿಬ್ಬಂದಿ ಇದ್ದಾರೆ. ಉಪಕರಣಗಳೂ ಇವೆ. ಗೋವಾ ಮಾದರಿಯಲ್ಲಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುತ್ತೇವೆ ಎಂದು ನಮ್ಮ ಜನಪ್ರತಿನಿಧಿಗಳು ಹೇಳುವಾಗ ಅಲ್ಲಿ ಪ್ರವಾಸಿಗರ ಸುರಕ್ಷತೆ ಬಗ್ಗೆ ಕಲ್ಪಿಸಿದ ವ್ಯವಸ್ಥೆಗಳು ಗೊತ್ತಾಗುವುದೇ ಇಲ್ಲ.

ಅಗತ್ಯ ಕ್ರಮ: ಒಂದು ತಿಂಗಳೊಳಗೆ ಲೈಫ್ ಗಾರ್ಡ್‌ಗಳ ಸಂಖ್ಯೆಯನ್ನೂ ಹೆಚ್ಚಿಸುತ್ತೇವೆ. ಸುರಕ್ಷತಾ ಉಪಕರಣಗಳ ಬಗ್ಗೆ ಏಜೆನ್ಸಿಯನ್ನು ಗುರುತಿಸಿ ನೀಡುತ್ತೇವೆ. ಪ್ರವಾಸಿಗರ ಸುರಕ್ಷತೆಯ ಬಗ್ಗೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಜಯಂತ ತಿಳಿಸಿದರು.

PREV

Recommended Stories

ಶ್ರೀ ಶ್ರೀ ರವಿಶಂಕರ್‌ಗೆ ವರ್ಲ್ಡ್ ಲೀಡರ್ ಫಾರ್ ಪೀಸ್ ಆ್ಯಂಡ್‌ ಸೆಕ್ಯೂರಿಟಿ ಪ್ರಶಸ್ತಿ
ಹಾಡಹಗಲೇ ಮನೆಗೆ ನುಗ್ಗಿ ಚಹಾ ವ್ಯಾಪಾರಿಯ ಕತ್ತು ಕೊಯ್ದು ಹತ್ಯೆ