ಬಿಜೆಪಿಯವರಿಗೆ ನೈತಿಕತೆ ಇದೆಯೇ?: ಶಿವರಾಮ ಹೆಬ್ಬಾರ

KannadaprabhaNewsNetwork |  
Published : Aug 21, 2024, 12:38 AM IST
ಶಿವರಾಮ ಹೆಬ್ಬಾರ | Kannada Prabha

ಸಾರಾಂಶ

ನೈತಿಕ- ಅನೈತಿಕತೆ ಬಗ್ಗೆ ಮಾತನಾಡುವ ಬಿಜೆಪಿಯವರು ಮೊದಲು ತಮ್ಮ ನೈತಿಕತೆ ತಿಳಿದುಕೊಳ್ಳಲಿ ಎಂದು ಶಾಸಕ ಶಿವರಾಮ ಹೆಬ್ಬಾರ ಆಕ್ರೋಶ ವ್ಯಕ್ತಪಡಿಸಿದರು.

ಮುಂಡಗೋಡ: ನೈತಿಕತೆ ಬಗ್ಗೆ ಮಾತನಾಡುವ ಬಿಜೆಪಿಯವರಿಗೆ ನೈತಿಕತೆ ಇದೆಯೇ ಎಂಬುದನ್ನು ಮೊದಲು ಹೇಳಲಿ ಎಂದು ಸ್ವಪಕ್ಷೀಯರ ವಿರುದ್ಧ ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ ವಾಗ್ದಾಳಿ ನಡೆಸಿದರು.

ಮಂಗಳವಾರ ಇಲ್ಲಿನ ಪಟ್ಟಣ ಪಂಚಾಯಿತಿ ನೂತನ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಬಳಿಕ ಸುದ್ದಿಗಾರರ ಜತೆ ಮಾತನಾಡಿ, ಕಳೆದ ಎರಡೂವರೆ ವರ್ಷದ ಹಿಂದೆ ಪಪಂ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಸದಸ್ಯರ ಮತಗಳಿಂದ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿದಿತ್ತು. ಅದೇ ರೀತಿ ಈಗ ಕಾಂಗ್ರೆಸ್ ತನ್ನ ಮತಗಳಿಂದ ಚುಕ್ಕಾಣಿ ಹಿಡಿದಿದೆ ಎಂದರು.

ಇಂದು ಮುಂಡಗೋಡದಲ್ಲಿ ನಾಳೆ ಯಲ್ಲಾಪುರ ಪಟ್ಟಣ ಪಂಚಾಯಿತಿಯಲ್ಲಿಯೂ ಬಿಜೆಪಿ ಸೋಲುತ್ತದೆ. ಅಲ್ಲಿ ಕೂಡ ಕಾಂಗ್ರೆಸ್ ಚುಕ್ಕಾಣಿ ಹಿಡಿಯಲಿದೆ ಎಂದ ಅವರು, ನೈತಿಕ- ಅನೈತಿಕತೆ ಬಗ್ಗೆ ಮಾತನಾಡುವ ಬಿಜೆಪಿಯವರು ಮೊದಲು ತಮ್ಮ ನೈತಿಕತೆ ತಿಳಿದುಕೊಳ್ಳಲಿ ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದರು.

''

ಶಾಸಕ ಹೆಬ್ಬಾರ ವಿರುದ್ಧ ಸಂಸದ ಕಾಗೇರಿ ವಾಗ್ದಾಳಿಮುಂಡಗೋಡ: ಬಿಜೆಪಿಯಿಂದ ಆಯ್ಕೆಯಾದ ಸದಸ್ಯರನ್ನು ಕಾಂಗ್ರೆಸ್ ಬೆಂಬಲಿತವಾಗಿ ಪಟ್ಟಣ ಪಂಚಾಯಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ನೋಡಿದರೆ ಕಾಂಗ್ರೆಸ್ಸಿಗೆ ಬಂದಿರುವ ದುಸ್ಥಿತಿ ಬಗ್ಗೆ ಏನು ಹೇಳಬೇಕೊ ಗೊತ್ತಾಗುತ್ತಿಲ್ಲ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಮಂಗಳವಾರ ಪಟ್ಟಣ ಪಂಚಾಯಿತಿ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಬಳಿಕ ಅಸಮಾಧಾನಗೊಂಡ ಅವರು, ಶಾಸಕ ಶಿವರಾಮ ಹೆಬ್ಬಾರ ಹಾಗೂ ಬಿಜೆಪಿಯಿಂದ ಆಯ್ಕೆಯಾದ ಪಪಂ ಸದಸ್ಯರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು.ಪಪಂ ಅಧ್ಯಕ್ಷರಾಗಿ ಆಯ್ಕೆಯಾದವರು, ಇಂದಿಗೂ ತಾಂತ್ರಿಕವಾಗಿ ಬಿಜೆಪಿಯಲ್ಲಿಯೇ ಇದ್ದಾರೆ. ಜತೆಗೆ ಬಿಜೆಪಿಯಿಂದ ಗೆದ್ದ ಶಾಸಕರು ಕೂಡ ಅವರೊಂದಿಗೆ ನಿಂತು ಕಾಂಗ್ರೆಸ್‌ಗೆ ಬೆಂಬಲಿಸಿರುವುದು ಹಿಂದೆ ಲೋಕಸಭಾ ಚುನಾವಣೆಯಲ್ಲಿ ಮಾಡಿದ್ದನ್ನೇ ಇಂದೂ ಮಾಡಿದ್ದಾರೆ. ಅವರ ವರ್ತನೆಗೆ ಮುಂದಿನ ದಿನಗಳಲ್ಲಿ ಕ್ಷೇತ್ರದ ಜನರೇ ತೀರ್ಮಾನಿಸಲಿದ್ದಾರೆ ಎಂದರು.ಈ ಸಂದರ್ಭದಲ್ಲಿ ಜಿಪಂ ಮಾಜಿ ಉಪಾಧ್ಯಕ್ಷ ಎಲ್.ಟಿ. ಪಾಟೀಲ, ತಾಲೂಕು ಬಿಜೆಪಿ ಅಧ್ಯಕ್ಷ ಮಂಜುನಾಥ ಪಾಟೀಲ, ನಾಗರಾಜ ಅಂಡಗಿ ಮುಂತಾದವರಿದ್ದರು. ಶಾಸಕರ ಬಗ್ಗೆ ಅವಹೇಳನಕಾರಿ ಸಂದೇಶ: ಪಪಂ ಸದಸ್ಯನ ವಿರುದ್ಧ ಎಫ್‌ಐಆರ್‌

ಯಲ್ಲಾಪುರ: ಶಾಸಕ ಶಿವರಾಮ ಹೆಬ್ಬಾರ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಸಂದೇಶ ಹಾಕಿದ ಹಿನ್ನೆಲೆ ಪಪಂ ಸದಸ್ಯ, ಬಿಜೆಪಿ ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸೋಮು ನಾಯ್ಕ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಇಲ್ಲಿನ ಪಟ್ಟಣ ಪಂಚಾಯಿತಿಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯ ಚುನಾವಣೆ ಬುಧವಾರ ನಡೆಯಲಿದೆ. ಈ ಹಿನ್ನೆಲೆ ಪಪಂ ಸದಸ್ಯ, ಬಿಜೆಪಿ ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸೋಮು ನಾಯ್ಕ ಅವರು, ತಮ್ಮ ಮೊಬೈಲ್ ಸ್ಟೇಟಸ್‌ನಲ್ಲಿ, ನಿಮ್ಮನ್ನು ಯಾರು ಮರ್ಡರ್ ಮಾಡುತ್ತಾರೆಂದು ಹೇಳಲ್ಲ. ಎಸ್.ಎಂ. ಹೆಬ್ಬಾರವರೇ, ನಿಮಗೆ ನೈತಿಕತೆ ಇದ್ದರೆ ಬಿಜೆಪಿ ಬೆಂಬಲಿತ ಪಪಂ ಆಯ್ಕೆಯಾದ ಸದಸ್ಯರಿಗೆ ವೋಟ್ ಮಾಡಿ. ಇಲ್ಲದಿದ್ದರೆ ರಾಜೀನಾಮೆ ಕೊಟ್ಟು ಚುನಾವಣೆಗೆ ಸಿದ್ಧರಾಗಿ ಎಂಬ ಸಂದೇಶವನ್ನು ಶಾಸಕ ಶಿವರಾಮ ಹೆಬ್ಬಾರರ ಭಾವಚಿತ್ರದೊಂದಿಗೆ ಹರಿಬಿಟ್ಟಿದ್ದಾರೆ. ಸೋಮು ನಾಯ್ಕ ವಿರುದ್ಧ ಪೊಲೀಸರು ಸೋಮವಾರ ರಾತ್ರಿ ಎಫ್ಐಆರ್ ದಾಖಲು ಮಾಡಿದ್ದಾರೆ. ಪಿಎಸ್‌ಐ ಸಿದ್ದಪ್ಪ ಗುಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಆದರೆ, ಪೊಲೀಸರು ಸೋಮು ನಾಯ್ಕ ಅವರ ಶೋಧ ಕಾರ್ಯದಲ್ಲಿದ್ದೇವೆ ಎಂದು ತಿಳಿಸಿದ್ದಾರೆ. ಅವರ ಮೊಬೈಲ್ ಸ್ವಿಚ್‌ಆಫ್ ಆಗಿದೆ. ಬುಧವಾರ ನಡೆಯುವ ಚುನಾವಣೆಯಲ್ಲಿ ಸೋಮು ನಾಯ್ಕ ಭಾಗವಹಿಸುತ್ತಾರಾ ಎಂದು ಕಾದು ನೋಡಬೇಕಾಗಿದೆ.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ