ತಂದೆ ರೈತ ಎಂದು ಹೇಳಿಕೊಳ್ಳಲು ಮುಜುಗರ ಬೇಡ: ಜಿಲ್ಲಾಧಿಕಾರಿ ಸಂಗಪ್ಪ ಎಂ.

KannadaprabhaNewsNetwork |  
Published : Dec 09, 2025, 03:15 AM IST
ಬಾಡಗಂಡಿಯಲ್ಲಿ ನಡೆದ ಅಭ್ಯುದಯ ೨೦೨೫-೨೬ ಕಾರ್ಯಕ್ರಮದ ನಿಮಿತ್ತ ಅಬ್ಬೆ ಮತ್ತು ಕೃಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಪಾದಪೂಜೆ, ಸಾಂಸ್ಕೃತಿಕ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಸಂಗಪ್ಪ ಉದ್ಘಾಟಿಸಿದರು. ಎಸ್ಪಿ ಸಿದ್ಧಾರ್ಥ ಗೋಯಲ್‌, ಮಾಜಿ ಸಚಿವ ಎಸ್‌.ಆರ್. ಪಾಟೀಲ. ಚೇರಮನ್  ಉಮಾ ಎಸ್.ಪಾಟೀಲ,  ಸಂಸ್ಥೆಯ ಕಾರ್ಯದರ್ಶಿ ಎಂ.ಎನ್. ಪಾಟೀಲ ಇತರರು ಇದ್ದರು. | Kannada Prabha

ಸಾರಾಂಶ

ಬೀಳಗಿ : ತಂದೆ-ತಾಯಿಗಳು ಮೊದಲ ದೇವರಾದ್ದರಿಂದ ಎಲ್ಲರೂ ತಂದೆ-ತಾಯಿಯನ್ನ ಪ್ರೀತಿಸಬೇಕು. ಬದುಕು ವ್ಯವಹಾರಿಕ ಆಗಬಾರದು. ತಂದೆ-ತಾಯಿ ಇರುವಾಗಲೇ ಅವರ ಸೇವೆ ಮಾಡಬೇಕು. ತಂದೆ ರೈತ ಎಂದು ಹೇಳಿಕೊಳ್ಳಲು ಮುಜುಗರ ಪಟ್ಟುಕೊಳ್ಳಬಾರದು. ರೈತರೇ ದೇವರು, ಅನ್ನದಾತರು, ಅವರ ಶ್ರಮ ಇಲ್ಲದೇ ನಮ್ಮ ಬದುಕು ಇಲ್ಲ ಎಂದು ಜಿಲ್ಲಾಧಿಕಾರಿ ಸಂಗಪ್ಪ ಎಂ. ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಬೀಳಗಿ

ತಂದೆ-ತಾಯಿಗಳು ಮೊದಲ ದೇವರಾದ್ದರಿಂದ ಎಲ್ಲರೂ ತಂದೆ-ತಾಯಿಯನ್ನ ಪ್ರೀತಿಸಬೇಕು. ಬದುಕು ವ್ಯವಹಾರಿಕ ಆಗಬಾರದು. ತಂದೆ-ತಾಯಿ ಇರುವಾಗಲೇ ಅವರ ಸೇವೆ ಮಾಡಬೇಕು. ತಂದೆ ರೈತ ಎಂದು ಹೇಳಿಕೊಳ್ಳಲು ಮುಜುಗರ ಪಟ್ಟುಕೊಳ್ಳಬಾರದು. ರೈತರೇ ದೇವರು, ಅನ್ನದಾತರು, ಅವರ ಶ್ರಮ ಇಲ್ಲದೇ ನಮ್ಮ ಬದುಕು ಇಲ್ಲ ಎಂದು ಜಿಲ್ಲಾಧಿಕಾರಿ ಸಂಗಪ್ಪ ಎಂ. ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ತಾಲೂಕಿನ ಬಾಡಗಂಡಿಯ ಎಸ್.ಆರ್.ಪಾಟೀಲ ಶಿಕ್ಷಣ ಪ್ರತಿಷ್ಠಾನದ ಬಾಪೂಜಿ ಅಂತಾರಾಷ್ಟ್ರೀಯ ಸಿಬಿಎಸ್ಇ ಶಾಲೆ, ವಿಜ್ಞಾನ ಮತ್ತು ವಾಣಿಜ್ಯ ಸ್ವತಂತ್ರ ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿ ಅಭ್ಯುದಯ ೨೦೨೫-೨೬ ಕಾರ್ಯಕ್ರಮದ ನಿಮಿತ್ತ ಅಬ್ಬೆ ಮತ್ತು ಕೃಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಪಾದಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಣಕ್ಕೆ ಬದುಕು ಬದಲಿಸುವ ಶಕ್ತಿ ಇದೆ. ವಿದ್ಯಾರ್ಥಿಗಳಿಗೆ ಪುಸ್ತಕಗಳು ಸಂಗಾತಿಗಳಾಬೇಕು. ಪುಸ್ತಕಗಳನ್ನು ಪ್ರೀತಿಸಬೇಕು, ಗೌರವಿಸಬೇಕು. ಆತ್ಮವಿಶ್ವಾಸದಿಂದ ಓದಬೇಕು. ಉನ್ನತ ಶಿಕ್ಷಣ ಪಡೆದರೂ ಆದರ್ಶವಾಗಿರಬೇಕು. ಸಮಯ ಪ್ರಜ್ಞೆ, ಶಿಸ್ತನ್ನು ಕಲಿಯಬೇಕು. ಪ್ರತಿಯೊಬ್ಬರಿಗೂ ಗುರಿ ಮುಟ್ಟುವ ಇಚ್ಛಾಶಕ್ತಿ ಇರಬೇಕು. ಎಂತಹ ಸವಾಲುಗಳು ಎದುರಾದರೂ ಅಂಜದೇ ಧೈರ್ಯವಾಗಿ ಎದುರಿಸಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ಮಾತನಾಡಿ, ಮಕ್ಕಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಪಾಲಕರ ಕಾಣಿಕೆ ಬಹಳಷ್ಟಿರುತ್ತದೆ. ತಂದೆ-ತಾಯಿಯ ಶ್ರಮದ ಮೇಲೆ ಮಕ್ಕಳ ಅಡಿಪಾಯ ನಿಂತಿರುತ್ತದೆ. ತಂದೆ-ತಾಯಿಗೆ ಮಕ್ಕಳು ಏನನ್ನೂ ಮರಳಿ ಕೊಡಲು ಸಾಧ್ಯವಿಲ್ಲ. ಅವರ ಸೇವೆ ಮಾಡಬೇಕು. ಅವರಲ್ಲಿನ ಒಳ್ಳೆಯ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಮಾಜಿ ಸಚಿವರು ಹಾಗೂ ಬಾಡಗಂಡಿ ಎಸ್.ಆರ್.ಪಿ.ಇ.ಎಫ್ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಾತ್ಮ ಗಾಂಧೀಜಿ ಅವರ ಪುರಕಲ್ಪನೆ ಸಾಕಾರಗೊಳಿಸುವುದಕ್ಕಾಗಿ ಶಿಕ್ಷಣ ಸಂಸ್ಥೆ, ವೈದ್ಯಕೀಯ ಕಾಲೇಜನ್ನು ಪುಟ್ಟಹಳ್ಳಿಯಲ್ಲಿ ಪ್ರಾರಂಭಿಸಿದ್ದರಿಂದ ದೇಶದ ವಿವಿಧ ನಗರ, ಪಟ್ಟಣಗಳಿಂದ ವಿದ್ಯಾರ್ಥಿಗಳು ಹಳ್ಳಿಗೆ ಬಂದು ಶಿಕ್ಷಣ ಪಡೆಯುತ್ತಿದ್ದಾರೆ. ಶೀಘ್ರದಲ್ಲೇ ಬಿಸಿಎ, ಎಂಬಿಎ, ಎಂಜಿನಿಯರಿಂಗ್ ಸೇರಿದಂತೆ ಮತ್ತಿತರ ಪದವಿ ಪ್ರಾರಂಭಿಸಲಾಗುತ್ತದೆ ಎಂದು ತಿಳಿಸಿದರು.

ಸಮಾಜ ಸೇವಕಿ, ಹೋರಾಗಾರ್ತಿ ಡಾ.ಮೀನಾಕ್ಷಿ ಬಾಳಿ ಅಬ್ಬೆ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಓದು ಮಾನವೀಯತೆ ಬೆಳೆಸಬೇಕು. ಜಗತ್ತಿನ ಹಿತ ಚಿಂತನೆ ಮಾಡಬೇಕು. ನಮ್ಮ ಬದುಕಿನ ಮಾರ್ಗದರ್ಶಿ ಸೂತ್ರವಾಗಬೇಕು. ಎಸ್.ಆರ್. ಪಾಟೀಲರು ತಂದೆ-ತಾಯಿಗಳು ಹೆಸರಿನಲ್ಲಿ ಅಬ್ಬೆ ಮತ್ತು ಕೃಷಿಕ ಪ್ರಶಸ್ತಿ ಕೊಡುವ ಮೂಲಕ ಉತ್ತಮ ಪರಂಪರೆ ಬಿತ್ತಿದ್ದಾರೆಂದು ಹೇಳಿದರು.

ಬಾಪೂಜಿ ಅಂತರಾಷ್ಟ್ರೀಯ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯ ವಿಜ್ಞಾನ ಮತ್ತು ವಾಣಿಜ್ಯ ವಿಭಾಗ ಕಾಲೇಜಿನ ವಿದ್ಯಾರ್ಥಿಗಳಿಂದ ಹೆತ್ತವರ ಪಾದಪೂಜೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಸಲಹೆಗಾರ ಎಚ್.ಬಿ.ಧರ್ಮಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜು ಪ್ರಾಂಶುಪಾಲ ಶಿವಬೋಧ ಶೆಟ್ಟಿ ವರದಿ ವಾಚಿಸಿದರು.

ಎಸ್.ಆರ್.ಪಿ.ಇ.ಎಫ್ ಚೇರಮನ್ ಉಮಾ ಎಸ್.ಪಾಟೀಲ, ಸಂಸ್ಥೆಯ ಕಾರ್ಯದರ್ಶಿ ಎಂ.ಎನ್. ಪಾಟೀಲ, ವೈಸ್ ಚೇರಮನ್ ಅನುಷಾ ಆರ್. ನಾಡಗೌಡ, ಮುಖ್ಯ ಹಣಕಾಸು ಅಧಿಕಾರಿ ಅಶೋಕ ದಾದಮಿ ಇದ್ದರು. ವೀಣಾ ದಾಸಪ್ಪನವರ ನಿರೂಪಿಸಿದರು.

ಪ್ರಶಸ್ತಿ ಪ್ರದಾನ:ಸಾಹಿತಿ ಡಾ. ಮೀನಾಕ್ಷಿ ಬಾಳಿಯವರಿಗೆ ಅಬ್ಬೆ ಪ್ರಶಸ್ತಿ ಹಾಗೂ ₹೧ ಲಕ್ಷ ನಗದು ಹಾಗೂ ಕೃಷಿಯಲ್ಲಿ ಉತ್ತಮ ಸಾಧನೆ ಮಾಡಿರುವ ರೈತ ನಾಗಣ್ಣ ವೆಂಕಪ್ಪ ಬಡಿಗೇರ ಅವರಿಗೆ ಕೃಷಿಕ ಪ್ರಶಸ್ತಿ ಹಾಗೂ ₹೧ ಲಕ್ಷ ನಗದು ನೀಡಿ ಗೌರವಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲಮರದ ತಿಮ್ಮಕ್ಕ ಹೆಸರಲ್ಲಿ ಪ್ರತಿ ವರ್ಷ ಪ್ರಶಸ್ತಿ ಪ್ರದಾನ : ಸಿಎಂ ಸಿದ್ದರಾಮಯ್ಯ
ಸಿಎಂ ರೇಸಲ್ಲಿ ಡಿಕೆ ಒಬ್ಬರೇ ಇಲ್ಲ : ರಾಜಣ್ಣ