ದೇವರ ಹೆಸರಲ್ಲಿ ಮೂಢನಂಬಿಕೆಗೆ ಮರುಳಾಗದಿರಿ

KannadaprabhaNewsNetwork |  
Published : May 29, 2025, 12:38 AM IST
ಮುದ್ದೇಬಿಹಾಳ: | Kannada Prabha

ಸಾರಾಂಶ

ಜಾತಿ, ಧರ್ಮಗಳ ಹೆಸರಿನಲ್ಲಿ ದೇವರು ಸೇರಿದಂತೆ ಮಹಾನ್‌ ಶರಣರ, ಸಂತರ ದಾರ್ಶನಿಕರನ್ನು ಒಂದೊಂದು ಜಾತಿ, ಧರ್ಮಕ್ಕೆ ಸೀಮಿತಗೊಳಿಸುತ್ತಿರುವುದು ವಿಷಾದನೀಯ.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ದೇವರ ಮೇಲೆ ಶ್ರದ್ಧೆ, ಭಕ್ತಿ ಇರಬೇಕೆ ವಿನಃ ದೇವರ ಹೆಸರಿನಲ್ಲಿ ಪ್ರಾಣಿ ಹತ್ಯೆ ಮಾಡುವಂತಹ ಮೂಢನಂಬಿಕೆ ಪದ್ಧತಿ ಕೈಬಿಡಬೇಕು. ಸರ್ವರಿಗೂ ಸಮಪಾಲು, ಸಮಬಾಳು ಎಂಬಂತೆ ಮಾನವೀಯ ಮೌಲ್ಯ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ದೇವರ ಕೃಪೆಗೆ ಪಾತ್ರರಾಗುತ್ತೇವೆ ಎಂದು ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ, ಶಾಸಕ ಸಿ.ಎಸ್.ನಾಡಗೌಡ (ಅಪ್ಪಾಜಿ) ಹೇಳಿದರು.

ಪಟ್ಟಣದ ಹಳೆಯ ತಹಸೀಲ್ದಾರ್‌ ಕಾರ್ಯಾಲಯ ಸಮೀಪದ ಮೂರು ವರ್ಷಕ್ಕೊಮ್ಮೆ ನಡೆಯುವ ಜಗನ್ಮಾತೆ ಏಳುಮಕ್ಕಳ ತಾಯಿಯ ಜಾತ್ರಾ ಮಹೋತ್ಸವದ ಧರ್ಮಸಭೆಯನ್ನು ಮಂಗಳವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಜಾತಿ, ಧರ್ಮಗಳ ಹೆಸರಿನಲ್ಲಿ ದೇವರು ಸೇರಿದಂತೆ ಮಹಾನ್‌ ಶರಣರ, ಸಂತರ ದಾರ್ಶನಿಕರನ್ನು ಒಂದೊಂದು ಜಾತಿ, ಧರ್ಮಕ್ಕೆ ಸೀಮಿತಗೊಳಿಸುತ್ತಿರುವುದು ವಿಷಾದನೀಯ. ಈ ಪದ್ಧತಿಯನ್ನು ನಾವೆಲ್ಲರೂ ಕೈಬಿಟ್ಟು ಎಲ್ಲ ಮಹಾನ್‌ ನಾಯಕರ ಆದರ್ಶ, ಗುಣಗಳು ಬಗ್ಗೆ ಚಿಂತನೆಯನ್ನು ಗೌರವಿಸುವಂತಾಗಬೇಕು. ಇದೇ ಉದ್ದೇಶದಿಂದಲೇ ಡಾ.ಅಂಬೇಡ್ಕರ್‌ ಅವರು ದೇಶದಲ್ಲಿನ ಪ್ರತಿಯೊಬ್ಬರಿಗೂ ಸರಿಸಮನಾದ ಪ್ರಜಾಪ್ರಭುತ್ವವನ್ನು ಸಂವಿಧಾನದ ಮೂಲಕ ನೀಡಿದ್ದಾರೆ ಎಂದರು.

ಶಿಕ್ಷಣದಿಂದ ಮಾತ್ರ ಸಮಾಜದ ಅಭಿವೃದ್ಧಿ ಕಾಣಲು ಸಾಧ್ಯ ಎಂಬುವುದನ್ನು ಅರಿತು ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಗುಣಮಟ್ಟ ಶಿಕ್ಷಣ ಕೊಡಿಸಲು ಮುಂದಾಗಬೇಕು. ಸದ್ಯ ಏಳುಮಕ್ಕಳ ತಾಯಿ ದೇವಿ ಜಾತ್ರಾ ಮಹೋತ್ವವದಲ್ಲಿ ಕಮಿಟಿಯವರು ಪಿಯುಸಿ ಹಾಗೂ ಎಸ್ಎಸ್ಎಲ್‌ಸಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಿದ್ದು, ಇತರೆ ವಿದ್ಯಾರ್ಥಿಗಳಿಗೆ ಸ್ಫೂರ್ತಿ ಮತ್ತು ಆತ್ಮ ಸ್ಥೈರ್ಯ ತುಂಬುವ ಕಾರ್ಯಕ್ರಮ ಇದಾಗಿದೆ ಎಂದರು.

ಈ ಹಿಂದಿನ ಬಿಜೆಪಿ ಸರ್ಕಾರ ದಲಿತ ಸಮಾಜದ ಅಭಿವೃದ್ಧಿಗೆ ಮೀಸಲಾಗಿದ್ದ ಅನುದಾನವನ್ನು ಯಾವ, ಯಾವುದಕ್ಕೋ ಬಳಸಿ ದುರುಪಯೋಗಪಡಿಸಿಕೊಂಡು ಸಮಾಜ ಅಭಿವೃದ್ಧಿ ಕುಂಠಿತಗೊಳ್ಳುವಂತೆ ಮಾಡಿತ್ತು. ಆದರೆ ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದಲಿತ ಸಮಾಜಗಳ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಮಾತ್ರವಲ್ಲದೇ ದಲಿತ ಬಗ್ಗೆ ನಿಜವಾದ ಕಾಳಜಿ ಪ್ರೀತಿ ಗೌರವ ಹೊಂದಿದೆ. ಜನರು ಜಾಗೃತರಾಗಿ ಯಾರು ನಮ್ಮನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದ ಶಾಸಕರು, ಸದ್ಯ ಮತಕ್ಷೇತ್ರದ ಎಲ್ಲ ದಲಿತ ಸಮುದಾಯದ ಶ್ರೇಯೋಭಿವೃದ್ಧಿಗೆ ನಾನು ಮತ್ತು ನಮ್ಮ ಸರ್ಕಾರ ಸದಾ ನಿಮ್ಮ ಜೊತೆಗಿರುತ್ತೇವೆ ಎಂದು ಭರವಸೆ ನೀಡಿದರು.

ದಿವ್ಯಸಾನ್ನಿಧ್ಯ ವಹಿಸಿ ಕುಂಟೋಜಿ ಹಿರೇಮಠದ ಶ್ರೀಚನ್ನವೀರ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿ, ಶಾಸಕ ಸಿ.ಎಸ್.ನಾಡಗೌಡ (ಅಪ್ಪಾಜಿ) ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ್‌ ನಿಗಮದ ಅಧ್ಯಕ್ಷರಾದ ಕೆಲವೇ ತಿಂಗಳಲ್ಲಿ ದುಸ್ಥಿತಿಯಲ್ಲಿದ್ದ ಮೈಸೂರು ಸ್ಯಾಂಡಲ್ ಸೋಪ್ ಕಂಪನಿಯನ್ನು ವ್ಯಾಪಕ ಪ್ರಚಾರ ಕೈಗೊಂಡು, ಹಲವು ಆಯಾಮಗಳನ್ನು ಸೃಷ್ಠಿಸಿ ನೂರಾರು ಕೋಟಿ ಲಾಭ ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಕಾರಣ ಬರುವ ದಿನಗಳಲ್ಲಿ ಅವರು ಉನ್ನತ ಸ್ಥಾನ ಗಳಿಸುವ ಮೂಲಕ ಸಚಿವರಾಗಬೇಕು ಎಂಬುವುದ ಕ್ಷೇತ್ರದ ಜನತೆ ಆಸೆಯಾಗಿದೆ. ಈ ನಿಟ್ಟಿನಲ್ಲಿ ಪಕ್ಷದ ವರಿಷ್ಠರು ಸರಳ, ಸಜ್ಜನಿಕೆ ವ್ಯಕ್ತಿತ್ವದ ಸಿ.ಎಸ್.ನಾಡಗೌಡರನ್ನು ಸಚಿವರನ್ನಾಗಿಸಿ, ಗೌರವಿಸಬೇಕು ಎಂದರು.

ಪುರಸಭೆ ಅಧ್ಯಕ್ಷ ಮಹಿಬೂಬ ಗೋಳಸಂಗಿ, ಉಪಾಧ್ಯಕ್ಷರಾದ ಪ್ರೀತಿ ದೇಗಿನಾಳ, ಎಂಬಿ ನಾವದಗಿ, ಜಿಪಂ ಮಾಜಿ ಅಧ್ಯಕ್ಷೆ ನೀಲಮ್ಮ ಮೇಟಿ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಸಿ.ಬಿ.ಅಸ್ಕಿ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಶಿವಪ್ಪ ಅಜಿಮನಿ, ಪುರಸಭೆ ಸದಸ್ಯ ಶಿವು ಶಿವಪೂರ, ಕರ್ನಾಟಕ ಬ್ಯಾಂಕ್‌ ಅಧ್ಯಕ್ಷ ಸಿ.ಎಲ್.ಬಿರಾದಾರ, ನಿರ್ದೇಶಕ ಸತೀಶ ಓಸ್ವಾಲ್, ಗಣೇಶ ಅನ್ನಗೋನಿ, ಶ್ರೀಕಾಂತ್ ಚಲವಾದಿ, ರವಿ ಚಲವಾದಿ, ಯಲ್ಲಪ್ಪ ಅಜಮನಿ, ರೇವಣೇಪ್ಪ ಚಲವಾದಿ, ಶ್ರೀಕಾಂತ ಚಲವಾದಿ, ಚನ್ನಪ್ಪ ಮೂಕಿಹಾಳ, ರಾಮು ಹಂಗರಗಿ, ಮಹಾಂತೇಶ ಚಲವಾದಿ, ಶಂಕರ ಅಜಮನಿ, ಪವಡೆಪ್ಪ ದೊಡ್ಡಮನಿ, ಸಿದ್ದಪ್ಪ ಚಲವಾದಿ, ಮಂಜು ಚಲವಾದಿ, ವಿಕ್ರಮ್ ಚಲವಾದಿ, ನಾಗರಾಜ್ ಚಲವಾದಿ, ಸಂತೋಷ ನಾಯ್ಕೋಡಿ, ಹುಲಗಪ್ಪ ನಾಯಕ, ಹಣಮಂತ ಭೋವಿ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ