ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಸರಿ ತಪ್ಪುಗಳನ್ನು ನಿರ್ಧರಿಸಲಾಗದ ಈ ಚಿಕ್ಕ ವಯಸ್ಸಿನಲ್ಲಿಯೇ ಜಾತಿ ಧರ್ಮವೆಂಬ ನಿರ್ದಿಷ್ಟ ಸೀಮಿತತೆಗೆ ಒಳಗಾಗದಿರಿ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅಭಿಪ್ರಾಯಪಟ್ಟರು.ನಗರದ ಎನ್ಇಎಸ್ ಸಂಸ್ಥೆಯ ರಾಷ್ಟ್ರೀಯ ಪ್ರೌಢಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ 2024-25 ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಎಳೆಯ ವಯಸ್ಸಿನಲ್ಲಿ ಸರಿ ತಪ್ಪುಗಳ ಅರಿವಿಲ್ಲದೆ ದ್ವಂದ್ವಗಳಲ್ಲಿ ಸಿಲುಕುವುದು ಸಹಜ. ಉತ್ತಮ ಸಹವಾಸ ನಮ್ಮನ್ನು ಅಂತಹ ದ್ವಂದ್ವಗಳಿಂದ ಹೊರತರುತ್ತದೆ. ಎಲ್ಲಾ ವಿಷಯಗಳಲ್ಲಿ ಒಳ್ಳೆಯ ಮತ್ತು ಕೆಟ್ಟ ಅಂಶಗಳಿರುತ್ತದೆ. ಕಲ್ಮಶರಹಿತವಾಗಿ ಎಲ್ಲಾ ವಿಚಾರಗಳ ವಾಸ್ತವತೆಯನ್ನು ವಿಮರ್ಶಿಸಿ ಎಂದು ಹೇಳಿದರು.
ಅತಿ ಚಿಕ್ಕ ವಯಸ್ಸಿನ ಯುವಕರು ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಬೇಸರದ ಸಂಗತಿ. ಅದಕ್ಕೆ ಸಾಮಾಜಿಕ ಜಾಲತಾಣಗಳು ಹೆಚ್ಚು ಪ್ರಭಾವ ಬೀರಿರಬಹುದು. ಒಮ್ಮೆ ಅಂತಹ ದಾರಿ ತಪ್ಪಿಸುವ ಆಕರ್ಷಣೆಗಳಿಗೆ ಒಳಗಾದರೆ ಮತ್ತೆ ಎಂದಿಗೂ ಹಿಂದೆ ಬರಲು ಸಾಧ್ಯವಾಗದು ಎಂದು ಎಚ್ಚರಿಸಿದರು.ಕೆಲವು ಶಿಕ್ಷಕರು ಬುದ್ಧಿವಂತ ಮತ್ತು ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಎಂಬ ಎರಡು ವಿಂಗಡನೆ ಮಾಡುತ್ತಿರುವುದು ಸರಿಯಲ್ಲ. ಅದು ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ಅವರಲ್ಲಿರುವ ಇತರೇ ವ್ಯಕ್ತಿತ್ವ ವಿಕಸನ ಕೌಶಲ್ಯ ಗುಣಗಳನ್ನು ಗೌರವಿಸಿ ಪ್ರೋತ್ಸಾಹಿಸಿ ಎಂದು ಸಲಹೆ ನೀಡಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಪೋಷಕರ ಆಶಯಗಳನ್ನು ಪೂರೈಸುವ ಮತ್ತು ಸಮಾಜಕ್ಕೆ ದೊಡ್ಡ ಕೊಡುಗೆಗಳ ನೀಡುವ ಜವಾಬ್ದಾರಿ ನಿಮ್ಮ ಮೇಲಿದೆ. ಭಾರತ ಸ್ವಾತಂತ್ರ್ಯ ಪಡೆದ ವರ್ಷದಲ್ಲಿ ಪ್ರಾರಂಭಗೊಂಡ ಎನ್ಇಎಸ್ ಪ್ರೌಢಶಾಲೆಯ ಸ್ಥಾಪನೆಯ ಹಿಂದೆ ತನ್ನದೇ ತ್ಯಾಗ ಹೋರಾಟಗಳಿವೆ. ಅಂತಹ ತ್ಯಾಗದ ಸಾರ್ಥಕತೆ ಕಾಣುವಂತಹ ಸೌಜನ್ಯತೆ, ಸಹಬಾಳ್ವೆ ಹೊಂದಿದ ಉತ್ತಮ ಪ್ರಜೆಗಳಾಗಿ ಬಾಳಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಶಾಲೆಯ ಉಪಪ್ರಾಂಶುಪಾಲ ಚಿಕ್ಕಪೆಂಚಾಲಯ್ಯ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಮೆಹಬೂಬಿ, ಹೆಚ್.ಎನ್.ದೇವರಾಜ, ವಿದ್ಯಾರ್ಥಿ ಪ್ರತಿನಿಧಿಗಳಾದ ಖತಿಜ ತಲ್ ಕುಬ್ರ, ಸೈಯಿದಾ ಅರ್ಫಾ, ದರ್ಶನ್, ಹೇಮಂತ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಈ ವೇಳೆ ಪ್ರೌಢಶಾಲಾ ತರಗತಿಗಳಲ್ಲಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ವಿದ್ಯಾರ್ಥಿ ಕ್ಷೇಮ ನಿಧಿ ಮತ್ತು ಎಸ್.ವಿ.ತಿಮ್ಮಮ್ಮ, ಎಚ್.ಡಿ.ನಾಗರಾಜ್ ಸ್ಮರಣಾರ್ಥ ನಗದು ಬಹುಮಾನ, ನೆನಪಿನ ಕಾಣಿಕೆ ನೀಡಿ ಅಭಿನಂದಿಸಲಾಯಿತು.