ಕೆಲಸ ಮಾಡಿಕೊಡಲು ಆಮಿಷಬೇಡ

KannadaprabhaNewsNetwork |  
Published : Oct 27, 2024, 02:07 AM IST
ಚಿತ್ರದುರ್ಗ  ಎರಡನೇ ಪುಟದ ಟಿಂಟ್ ಬಾಟಂ   | Kannada Prabha

ಸಾರಾಂಶ

ಚಿತ್ರದುರ್ಗ: ಸರ್ಕಾರಿ ಕೆಲಸ ಮಾಡಿಕೊಡಲು ಯಾವುದೇ ಬಗೆಯ ಆಮಿಷವೊಡ್ಡುವುದು ಬೇಡ. ಅಧಿಕಾರಿಗಳು ಕೌಟುಂಬಿಕ ಭಾವನೆ, ಸಮನ್ವಯತೆಯಿಂದ ಕೆಲಸ ಮಾಡುವುದರ ಮೂಲಕ ಭ್ರಷ್ಟಾಚಾರ ನಿರ್ಮೂಲನೆ ಮಾಡಬೇಕು ಎಂದು ಚಿತ್ರದುರ್ಗ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಸ್.ವಾಸುದೇವರಾಮ ಹೇಳಿದರು.

ಚಿತ್ರದುರ್ಗ: ಸರ್ಕಾರಿ ಕೆಲಸ ಮಾಡಿಕೊಡಲು ಯಾವುದೇ ಬಗೆಯ ಆಮಿಷವೊಡ್ಡುವುದು ಬೇಡ. ಅಧಿಕಾರಿಗಳು ಕೌಟುಂಬಿಕ ಭಾವನೆ, ಸಮನ್ವಯತೆಯಿಂದ ಕೆಲಸ ಮಾಡುವುದರ ಮೂಲಕ ಭ್ರಷ್ಟಾಚಾರ ನಿರ್ಮೂಲನೆ ಮಾಡಬೇಕು ಎಂದು ಚಿತ್ರದುರ್ಗ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಸ್.ವಾಸುದೇವರಾಮ ಹೇಳಿದರು. ನಗರದ ಡಯಟ್‌ನಲ್ಲಿ ಕರ್ನಾಟಕ ಲೋಕಾಯುಕ್ತ ಮತ್ತು ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪತ್ರಾಂಕಿತ ವ್ಯವಸ್ಥಾಪಕರು ಮತ್ತು ಅಧೀಕ್ಷಕರಿಗೆ ಆಯೋಜಿಸಿದ್ದ ಭ್ರಷ್ಟಾಚಾರ ವಿರುದ್ಧ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕ ಲೋಕಾಯುಕ್ತ ಆಕ್ಟ್ ಮತ್ತು ಪ್ರಿವೆನ್ಷನ್ ಆಫ್ ಕರೆಪ್ಷನ್ ಆಕ್ಟ್ ಪ್ರಕಾರ ಯಾವುದೇ ಕೆಲಸವನ್ನು ಮಾಡಿಸಿಕೊಳ್ಳಲು ಹಣ, ವಸ್ತು ರೂಪದಲ್ಲಿ ಆಮಿಷ ಒಡ್ಡುವುದು ಭ್ರಷ್ಟಾಚಾರವಾಗುತ್ತದೆ. ಪ್ರಸ್ತುತ ಸಂದರ್ಭದಲ್ಲಿ ಸುಶಿಕ್ಷಿತರಲ್ಲಿಯೇ ಭ್ರಷ್ಟಾಚಾರ ಭಾವನೆ ಬರುತ್ತಿರುವುದು ಆತಂಕದ ಸಂಗತಿ ಎಂದರು. ನಮ್ಮ ವೃತ್ತಿಯಲ್ಲಿ ಸಾಕಷ್ಟು ವೇತನ ದೊರೆಯುತ್ತಿದ್ದು, ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. ಶಾಲಾ ಕಾಲೇಜುಗಳಲ್ಲಿ ಉಪನ್ಯಾಸಕರು ಬೋಧನೆ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದರ ಮೂಲಕ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕೆ ಕಾರ್ಯೋನ್ಮುಖರಾಗಬೇಕು ಎಂದು ತಿಳಿಸಿದರು. ಪೊಲೀಸ್ ನಿರೀಕ್ಷಕ ಮಂಜುನಾಥ ಮಾತನಾಡಿ, ಭಾರತ ಎದುರಿಸುತ್ತಿರುವ ಅನೇಕ ಸಮಸ್ಯೆಗಳಲ್ಲಿ ಭ್ರಷ್ಟಾಚಾರ ಬಹು ಮುಖ್ಯವಾದ ಸಮಸ್ಯೆಯಾಗಿದೆ. ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡುವ ನೌಕರರೆಲ್ಲರೂ ಭ್ಟಷ್ಟಾಚಾರ ವಿರುದ್ಧ ಜಾಗೃತಿ ಅರಿವು ಅಭಿಯಾನದಲ್ಲಿ ಪಾಲ್ಗೊಳ್ಳಬೇಕು. ಭ್ರಷ್ಟಾಚಾರ ಎನ್ನುವುದು ಎಲ್ಲೆಲ್ಲಿ ವ್ಯಾಪಿಸಿದೆ ಎಂದು ಆಲೋಚಿಸಿದರೆ ಗಾಳಿಯಲ್ಲಿ ಸೇರಿಕೊಂಡಿದೆಯೇನೋ ಎಂಬಂತೆ ಭಾಸವಾಗುತ್ತಿದೆ ಎಂದರು. ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಆರ್.ಮಂಜುನಾಥ್ ಮಾತನಾಡಿ, ಭ್ರಷ್ಟಾಚಾರ ನಿರ್ಮೂಲನೆ ಮಾಡುವುದು ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರ ಜವಾಬ್ದಾರಿಯಾಗಿದೆ. ಶಾಲಾ ಹಂತದಲ್ಲಿ ಮಕ್ಕಳಿಗೆ ಭ್ರಷ್ಟಾಚಾರದಿಂದ ಆಗುವ ತೊಂದರೆಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು. ಡಯಟ್ ಪ್ರಾಚಾರ್ಯ ಎಂ. ನಾಸಿರುದ್ದೀನ್, ಎಲ್ಲಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಡಯಟ್‌ನ ಹಿರಿಯ ಉಪನ್ಯಾಸಕರು, ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗದವರು, ಡಿ.ಡಿ.ಪಿ.ಐ ಕಚೇರಿಯ ಸಿಬ್ಬಂದಿವರ್ಗದವರು ಇದ್ದರು.

ಪೊಲೀಸ್ ನಿರೀಕ್ಷಕರಾದ ಸಂಗಮನಾಥ ಹೆಚ್.ಹೊಸಮನಿ ಸ್ವಾಗತಿಸಿದರು. ಬಿಇಓ ನಾಗಭೂಷಣ್ ವಂದಿಸಿದರು. ಉಪನ್ಯಾಸಕ ಎಸ್.ಬಸವರಾಜು ನಿರೂಪಿಸಿದರು.

PREV

Recommended Stories

‘ಚಾಮುಂಡೇಶ್ವರಿ ಬಗ್ಗೆ ಬಾನು ತಮ್ಮ ಗೌರವ ಸ್ಪಷ್ಟಪಡಿಸಲಿ’ : ವಿಜಯೇಂದ್ರ
ಗ್ಯಾರಂಟಿ ಯೋಜನೆಗಳ ಜತೆ ರಾಜ್ಯವು ಅಭಿವೃದ್ಧಿ