ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಪದವಿ ಮುಗಿಸಿದ ನಂತರ ವಿದ್ಯಾರ್ಥಿಗಳು ಆತ್ಮ ವಿಶ್ವಾಸದಿಂದ ಮುನ್ನಡೆಯಬೇಕೆ ಹೊರತು ಪೋಷಕರಿಗೆ, ಸಮಾಜಕ್ಕೆ ಹೊರೆಯಾಗಬಾರದು ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಸಚಿವ ಡಾ.ಎನ್.ಲೋಕನಾಥ್ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.ನಗರ ಹೊರವಲಯದ ಎಸ್‌ಜೆಸಿಐಟಿ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿನ ಬಿಜಿಎಸ್ ಸಭಾಂಗಣದಲ್ಲಿ ಸೋಮವಾರ ನಡೆದ ಬಿಜಿಎಸ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ವತಿಯಿಂದ ಪ್ರಥಮ ವರ್ಷದ ಬಿಬಿಎ, ಬಿಕಾಂ ಪದವಿ ತರಗತಿಗಳ ಉದ್ಘಾಟನಾ ಕಾರ್ಯಕ್ರಮ ಶುಭಾರಂಭ- 2025 ಕಾರ್ಯಕ್ರಮದಲ್ಲಿ ಮಾತನಾಡಿದರು,ಸಮಾಜಕ್ಕೆ ಕೊಡುಗೆ ನೀಡಿ
ಪಾಲಕರು ಮಕ್ಕಳ ಉಜ್ವಲ ಭವಿಷ್ಯ ರೂಪಿಸುವ ಕನಸಿನಲ್ಲಿ ಕಷ್ಟಪಟ್ಟು ಶಿಕ್ಷ ಣವನ್ನು ಕೊಡಿಸುತ್ತಾರೆ. ಯಾರು ಇದನ್ನು ಅರಿತು ಜವಾಬ್ದಾರಿಯಿಂದ ಮುನ್ನಡೆಯುತ್ತಾರೋ ಅವರು ಉತ್ತಮ ಭವಿಷ್ಯ ಕಟ್ಟಿಕೊಳ್ಳುತ್ತಾರೆ. ಜ್ಞಾನಕ್ಕೆ ಮಿಗಿಲಾದ ವಸ್ತು ಬೇರೊಂದಿಲ್ಲ. ನಿರಂತರ ಅಧ್ಯಯನ ಮತ್ತು ಉತ್ತಮ ಚಿಂತನೆಯಿದ್ದರೆ ಮನಸ್ಸು ಲವಲವಿಕೆಯಿಂದ ಇರಲು ಸಾಧ್ಯ. ಮನುಷ್ಯನಾಗಿ ಹುಟ್ಟಿದ ಮೇಲೆ ಸಮಾಜಕ್ಕೆ ಒಳಿತಾಗುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು.ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿ ಮಂಗಳನಾಥ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಾದವರು ಸತತ ಪ್ರಯತ್ನಶೀಲರಾಗಿರಬೇಕು. ಇದಾದರೆ ಮಾತ್ರ ಏನಾದರೂ ಸಾಧಿಸಲು ಸಾಧ್ಯವಾಗುತ್ತದೆ. ಇದಿಲ್ಲದೆ ಕೇವಲ ಅಧ್ಯಾಪಕರು ಮಾಡುವ ಪಾಠ ಪ್ರವಚನಗಳಿಂದ, ಪೋಷಕರು ತೋರುವ ಪ್ರೀತಿಯಿಂದ ಮಾತ್ರವೇ ಏಳಿಗೆ ಸಾಧ್ಯ ಎಂಬ ಭಾವನೆ ಉಳ್ಳವರು ಏನನ್ನೂ ಸಾಧಿಸುವುದಿಲ್ಲ ಎಂದರು.
ವಿದ್ಯಾರ್ಥಿಗೆ ಆಲಸ್ಯ ಸಲ್ಲಸಂಕಲ್ಪಕ್ಕೆ ಪೂರಕವಾಗಿ ಸಾಧನೆ ಮಾಡಬೇಕು. ಓದುವ ಸಂದರ್ಭದಲ್ಲಿ ಯಾರು ಸುಖವನ್ನು ಅಪೇಕ್ಷೆ ಪಡುತ್ತಾರೋ ಅವರು ಎಂದಿಗೂ ಜೀವನದಲ್ಲಿ ಏಳಿಗೆಯನ್ನು ಹೊಂದಲು ಸಾಧ್ಯವಿಲ್ಲ. ವಿದ್ಯಾರ್ಥಿ ಜೀವನಕ್ಕೆ ಆಲಸ್ಯ ಒಳ್ಳೆಯದಲ್ಲ. ತನ್ನ ಇರುವಿಕೆಯನ್ನು ಜಗತ್ತಿಗೆ ತೋರಬೇಕಾದರೆ ಪ್ರಾಮಾಣಿಕ ಪ್ರಯತ್ನ ಹಾಕಲೇಬೇಕು. ವಿನಯಶೀಲರಾಗಿ ತನ್ನ ಕಾರ್ಯದಲ್ಲಿ ಮುನ್ನಡೆದರೆ ಮನ್ನಣೆ ಬೆಳಕಾಗಿ ಬೆನ್ನಿಗಿರುತ್ತದೆ ಎಂದು ತಿಳಿ ಹೇಳಿದರು.
ಪ್ರತಿಭಾವಂತರಿಗೆ ಸನ್ಮಾನಕಾರ್ಯಕ್ರಮದಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಪ್ರಥಮ ರ್‍ಯಾಂಕ್ ಪಡೆದ ಕಾಲೇಜಿನ ಎಂ.ಕಾಂ. ವಿದ್ಯಾರ್ಥಿನಿ ಶ್ರೀವಲ್ಲಿ ಎಚ್.ಎನ್., ಹಾಗೆ ಬಿಬಿಎ ವಿಭಾಗದಲ್ಲಿ ತೃತೀಯ ರ್‍ಯಾಂಕ್ ಪಡೆದ ಪಲ್ಲವಿ.ಎಸ್. ಮತ್ತು ಎಸ್.ಶ್ರವಣ್ ರವರಿಗೆ ಸನ್ಮಾನ ಮಾಡಿ ಅಭಿನಂದಿಸಿದರು. ಪಿಯು ವಿಭಾಗದಲ್ಲಿ ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಬಿಜಿಎಸ್ ಸಂಸ್ಥೆಗಳ ಆಡಳಿತಾಧಿಕಾರಿ ಎನ್.ಶಿವರಾಮರೆಡ್ಡಿ, ಕಾಲೇಜು ಪ್ರಾಂಶುಪಾಲ ಡಾ.ವೆಂಕಟೇಶ್ ಬಾಬು ಬಿ. ಆರ್, ಎಸ್ ಜೆಸಿಐಟಿ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಟಿ.ರಾಜು ಇದ್ದರು..