ವೈದ್ಯ ವೃತ್ತಿಗೆ ಕಳಂಕ ತರಬೇಡಿ: ಸುತ್ತೂರು ಶ್ರೀ ಸಲಹೆ

KannadaprabhaNewsNetwork |  
Published : Jun 09, 2025, 12:45 AM IST
೮ಕೆಎಂಎನ್‌ಡಿ-೫ಮಂಡ್ಯ ಹೊರವಲಯದ ಭಾರತೀಯ ವೈದ್ಯಕೀಯ ಸಂಘ ಮತ್ತು ಮೆಡಿಕಾನ್ ಟ್ರಸ್ಟ್ ವತಿಯಿಂದ ನಿರ್ಮಿಸಿರುವ ನೂತನ ಕಟ್ಟಡವನ್ನು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಎಷ್ಟೋ ಸಂದರ್ಭದಲ್ಲಿ ವೈದ್ಯರ ಮಕ್ಕಳೇ ವೈದ್ಯರಾಗಲು ಇಚ್ಚಿಸುವುದಿಲ್ಲ. ಅವರು ಎಂಜಿನಿಯರ್‌ಗಳಾಗಿರುತ್ತಾರೆ. ಮನುಷ್ಯ ಯಾವುದನ್ನೂ ಅನುಭವಿಸಿ ಮಾಡಬೇಕು. ವೈದ್ಯರಲ್ಲಿ ವಿಶೇಷ ಸೇವೆ ಸಲ್ಲಿಸುತ್ತಿರುವವರು ದಿನದ ೨೪ ಗಂಟೆಗಳ ಕಾಲವೂ ವೃತ್ತಿಯಲ್ಲಿ ಕೆಲಸ ಮಾಡುತ್ತಿರುತ್ತಾರೆ. ಹಾಗಾಗಿ ವೈದ್ಯ ವೃತ್ತಿ ಅತ್ಯಂತ ಪವಿತ್ರವಾದ್ದು.

ಕನ್ನಡಪ್ರಭ ವಾರ್ತೆ ಮಂಡ್ಯ

ವೈದ್ಯ ವೃತ್ತಿ ಬಹಳ ಪವಿತ್ರವಾದದ್ದು. ಸೇವಾ ಮನೋಭಾವನೆಯಿಂದ ಕಾರ್ಯನಿರ್ವಹಿಸಿದಾಗ ಸಮಾಜದ ಗೌರವಕ್ಕೆ ಪಾತ್ರರಾಗುತ್ತೀರಿ. ವೈದ್ಯ ವೃತ್ತಿಗೆ ಕಳಂಕ ತರದಂತೆ ಎಚ್ಚರ ವಹಿಸಬೇಕು ಎಂದು ಸುತ್ತೂರು ಮಹಾಸಂಸ್ಥಾನ ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

ನಗರದ ಹೊರವಲಯದ (ಶಶಿಕಿರಣ ಕಲ್ಯಾಣ ಮಂಟಪದ ಪಕ್ಕ) ಭಾರತೀಯ ವೈದ್ಯಕೀಯ ಸಂಘ ಮತ್ತು ಮೆಡಿಕಾನ್ ಟ್ರಸ್ಟ್ ವತಿಯಿಂದ ನಿರ್ಮಿಸಿರುವ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ಮನುಷ್ಯ ಒತ್ತಾಯದಿಂದ ಯಾವುದೇ ವೃತ್ತಿಯನ್ನು ಮಾಡಬಾರದು. ಆತನಿಗೆ ಸ್ವಂತ ಪ್ರಯತ್ನ, ಆಸಕ್ತಿ, ಶ್ರದ್ಧೆ ಇರಬೇಕು. ಅವನಿಗೆ ಏನು ಅನಿಸುತ್ತದೆ ಅದನ್ನೇ ಕಲಿಯಬೇಕು ಎಂದರು.

ಎಷ್ಟೋ ಸಂದರ್ಭದಲ್ಲಿ ವೈದ್ಯರ ಮಕ್ಕಳೇ ವೈದ್ಯರಾಗಲು ಇಚ್ಚಿಸುವುದಿಲ್ಲ. ಅವರು ಎಂಜಿನಿಯರ್‌ಗಳಾಗಿರುತ್ತಾರೆ. ಮನುಷ್ಯ ಯಾವುದನ್ನೂ ಅನುಭವಿಸಿ ಮಾಡಬೇಕು. ವೈದ್ಯರಲ್ಲಿ ವಿಶೇಷ ಸೇವೆ ಸಲ್ಲಿಸುತ್ತಿರುವವರು ದಿನದ ೨೪ ಗಂಟೆಗಳ ಕಾಲವೂ ವೃತ್ತಿಯಲ್ಲಿ ಕೆಲಸ ಮಾಡುತ್ತಿರುತ್ತಾರೆ. ಹಾಗಾಗಿ ವೈದ್ಯ ವೃತ್ತಿ ಅತ್ಯಂತ ಪವಿತ್ರವಾದ್ದು ಎಂದು ಬಣ್ಣಿಸಿದರು.

ಭಾರತೀಯ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷ ಡಾ.ಎ.ವಿ.ಚಿನಿವಾಲರ ಮಾತನಾಡಿ, ಸಂಘದ ಕಟ್ಟಡವನ್ನು ಅತ್ಯುತ್ತಮವಾಗಿ ನಿರ್ಮಾಣ ಮಾಡಿರುವ ಡಾ.ನಂದೀಶ್ ಮತ್ತವರ ತಂಡವನ್ನು ಶ್ಲಾಘಿಸಿದರು.

ಚಂಡೀಗಢ ಮತ್ತು ಪುದುಚೇರಿಯಲ್ಲಿ ಎಂಬಿಬಿಎಸ್ ಮತ್ತು ಬಿಎಎಂಎಸ್ ಕೋರ್ಸ್‌ಗಳನ್ನು ಏಕೀಕರಿಸಿ ಅದನ್ನು ಮಿಶ್ರ ಪದ್ಧತಿ ಎಂದು ಮಾನ್ಯತೆ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿದರು.

ಮಿಮ್ಸ್ ನಿರ್ದೇಶಕ ಡಾ.ನರಸಿಂಹಸ್ವಾಮಿ ಮಾತನಾಡಿ, ಡಾ.ನಂದೀಶ್ ಮತ್ತವರ ತಂಡ ಒಳ್ಳೆಯ ಕಟ್ಟಡವನ್ನು ನಿರ್ಮಾಣ ಮಾಡಿದೆ. ಸರ್ಜಿಕಲ್ ಸೊಸೈಟಿಯ ಸಮಾರಂಭಗಳು ನಡೆಯುವಾಗ ನಮ್ಮದೇ ಆದ ಸ್ವಂತ ಸೂರಿದ್ದರೆ ಹೇಗೆ ಎಂದು ಹೇಳುತ್ತಿದ್ದರು. ಅದೇ ರೀತಿ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ತುಮಕೂರು ಸಿದ್ದಗಂಗಾ ಮಠದ ಶ್ರೀಸಿದ್ದಲಿಂಗ ಮಹಾಸ್ವಾಮಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಐಎಂಎ ಜಿಲ್ಲಾಧ್ಯಕ್ಷ ಡಾ.ಟಿ.ಎನ್.ಮರಿಗೌಡ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್, ಡಾ.ಪಿ.ಎಂ.ಜಗದೀಶ್ ಕುಮಾರ್, ಡಾ.ವಿ.ಎಲ್. ನಂದೀಶ್, ಡಾ.ಪ್ರದೀಪ್ ಕುಮಾರ್ ಹೆಬ್ರಿ ಹಾಗೂ ಇನ್ನಿತರರು ಸಮಾರಂಭದಲ್ಲಿ ಭಾಗವಹಿಸಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...